ನವೋದ್ಯಮಗಳ ಅನುಷ್ಠಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ: ಜಗದೀಶ್ ಶೆಟ್ಟರ್

Update: 2021-01-26 14:22 GMT

ಧಾರವಾಡ, ಜ.26: ನವೋದ್ಯಮ(ಸ್ಟಾರ್ಟ್‍ಅಪ್)ಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು 15 ನವೋದ್ಯಗಳಿಗಾಗಿ ರಾಜ್ಯ ಸರಕಾರವು ಅನುದಾನವನ್ನು ಒದಗಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಮಂಗಳವಾರ ಬೆಳಗ್ಗೆ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅವಳಿ ನಗರಗಳಲ್ಲಿ ಏಕಸ್ ಹಾಗೂ ಯುಫ್ಲೆಕ್ಸ್ ಕಂಪನಿಗಳ ಸ್ಥಾಪನೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರಕಾರ ಸಂಪೂರ್ಣ ಅನುಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡಲಾಗಿದ್ದು, ಯೋಜನೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಶೀಘ್ರವಾಗಿ ಕಂಪನಿಗಳಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ 298 ಕೋಟಿ ರೂ.ವೆಚ್ಚದಲ್ಲಿ ಮೊದಲ ಹಂತದಲ್ಲಿ 3.6 ಕಿ.ಮೀ. ಉದ್ದದ ಫ್ಲೈ ಓವರ್ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ 2.77 ಕಿ.ಮೀ. ಚತುಷ್ಪಥ ರಸ್ತೆ ಹಾಗೂ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಪರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಅವರು ಹೇಳಿದರು.

ಈ ಯೋಜನೆ ಪೂರ್ಣಗೊಂಡ ಬಳಿಕ ಹುಬ್ಬಳ್ಳಿಯ ಟ್ರಾಫಿಕ್ ಐಲ್ಯಾಂಡ್‍ನಲ್ಲಿ ನಿತ್ಯ ಎದುರಾಗುವ ಸಂಚಾರ ದಟ್ಟಣೆಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಇದ್ದು, ಹುಬ್ಬಳ್ಳಿ-ಧಾರವಾಡ ನಗರಗಳ ಬೈಪಾಸ್ ರಸ್ತೆಯನ್ನು 6 ಪಥಗಳ ರಸ್ತೆ ನಿರ್ಮಾಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ 57 ಯೋಜನೆಗಳನ್ನು ಒಂದು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ 20 ಕೋಟಿ ರೂ.ಮೊತ್ತದ 12 ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗಿದೆ. 697.39 ಕೋಟಿ ರೂ.ಗಳ 41 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.

ಪ್ರಸ್ತುತ ದೇಶದ 100 ಸ್ಮಾರ್ಟ್‍ಸಿಟಿ ನಗರಗಳಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯು 11ನೇ ಸ್ಥಾನದಲ್ಲಿದೆ. ರಾಜ್ಯದ 7 ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ರಾಜ್ಯ ಸರಕಾರ ಹುಬ್ಬಳ್ಳಿಯನ್ನು ಎಫ್.ಎಂ.ಸಿ.ಜಿ (ಫಾಸ್ಟ್ ಮೂವಿಂಗ್ ಕನ್ಜೂಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ. ಎಫ್.ಎಂ.ಸಿ.ಜಿ ಕ್ಲಸ್ಟರ್ ಸ್ಥಾಪನೆಯಾದರೆ, ಹುಬ್ಬಳ್ಳಿ ನಗರವು ದಕ್ಷಿಣ ಭಾರತದ ಎಫ್.ಎಂ.ಸಿ.ಜಿ ಹಬ್ ಆಗಲಿದೆ ಎಂದು ಜಗದೀಶ್ ಶೆಟ್ಟರ್ ಹರ್ಷ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಇದು ಕಾರಣವಾಗಲಿದೆ. ಪ್ರತಿ ಹಂತದಲ್ಲಿ 2500 ಕೋಟಿ ರೂ.ಗಳಂತೆ 3 ಹಂತಗಳಲ್ಲಿ 7500 ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕ್ಲಸ್ಟರ್ ಸ್ಥಾಪನೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಕೈಗಾರಿಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಸ್ಸಾಂ ರಾಜ್ಯದ ಗುವಾಹಾತಿಯಲ್ಲಿ ಸದ್ಯ ಎಫ್.ಎಂ.ಸಿ.ಜಿ ಕ್ಲಸ್ಟರ್ ಇದ್ದು, ಕೇಂದ್ರ ಸರಕಾರದ ಪ್ರೋತ್ಸಾಹದಿಂದ ಅಲ್ಲಿ ಉದ್ದಿಮೆ ಬಲವಾಗಿ ಬೆಳದು ನಿಂತಿದೆ. ಅಲ್ಲಿನ ಉದ್ಯಮಿಗಳ ಮನವೊಲಿಸಿ ಹುಬ್ಬಳ್ಳಿಗೆ ಕರೆ ತರಲು ಉದ್ಯಮಿ ಉಲ್ಲಾಸ್ ಕಾಮತ್ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಏಕಸ್ ಕಂಪನಿಯು 3524 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ರಾಜ್ಯ ಸರಕಾರದಿಂದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮಗಟ್ಟಿ ಕೈಗಾರಿಕಾ ವಸಾಹತುಗಳಲ್ಲಿ ಕಂಪನಿಗೆ ಮಂಜೂರು ಮಾಡಲಾಗಿದೆ. ಮುಖ್ಯವಾಗಿ ದಿನನಿತ್ಯ ಉಪಯೋಗಿ ಗ್ರಾಹಕ ವಸ್ತುಗಳ ತಯಾರಿಕಾ ಘಟಕವನ್ನು ಕಂಪನಿ ಸ್ಥಾಪನೆ ಮಾಡಲಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ 20 ಸಾವಿರ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಅವರು ಹೇಳಿದರು.

ಪ್ಯಾಕಿಂಗ್ ಉದ್ದಿಮೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಯುಫ್ಲೆಕ್ಸ್ ಕಂಪನಿಯು 1464 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡದ ಮುಮ್ಮಿಗಟ್ಟಿ ಬಳಿ 50 ಎಕರೆ ಜಮೀನನ್ನು ಕಂಪನಿಗೆ ಮಂಜೂರು ಮಾಡಲಾಗಿದೆ. ಕಂಪನಿಯಿಂದ ನೇರವಾಗಿ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News