ಕನ್ನಡವೆಂಬ ಅಸ್ಮಿತೆ ಮತ್ತು ‘ಹಿಂದಿ’ಯೆಂಬ ಕೋಮುವಾದದ ತನುಜಾತೆ

Update: 2021-01-26 19:30 GMT

ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರಿಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂತಹ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ.


ಹಾವೇರಿಯಲ್ಲಿ ನಡೆಯಲಿರುವ ಕೋವಿಡ್ ನಂತರದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೊಡ್ಡರಂಗೇಗೌಡರ ಸಾಹಿತ್ಯದ ಬಗ್ಗೆ ಕನ್ನಡ ಜಗತ್ತಿನಲ್ಲಿ ಹಲವಾರು ಪ್ರಶ್ನೆಗಳು ದಶಕಗಳಿದ ಉಳಿದುಕೊಂಡಿವೆ. ದೊರಂಗೌ ಅವರು ಹೆಚ್ಚೆಚ್ಚು ಸಾಹಿತ್ಯ ಬರೆದಷ್ಟು ಕನ್ನಡಿಗರ ತಲ್ಲಣಗಳು ಹೆಚ್ಚಾಗುತ್ತಿರುವುದು ದುರಂತವೇ ಸರಿ. ಅದಕ್ಕೆ ಲಂಕೇಶ್ ಅವರು ದೊರಂಗೌ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಎರಡರ ಪರಿಚಯವನ್ನೂ ಮಾಡಿಕೊಡುವ ರೀತಿ ‘‘ದೊಡ್ಡರಂಗೇಗೌಡ್ರು- ಹಾಕಿಕೊಂಡ್ರು ಪೌಡ್ರು’’ ಅಂತ ಬರೆದಿದ್ದರಂತೆ. ಕಳೆದ ವರ್ಷ ಮಾನ್ಯರು ಮೋದಿಯನ್ನು ಹೊಗಳಿ ಆತುರಾತುರವಾಗಿ ಬರೆದಿದ್ದ ‘ಮಕುಟಮಣಿ’ ಎಂಬ ಬಾಲವಾಡಿ ಬರಹವನ್ನು ಕಂಡು ಸಾಹಿತ್ಯಾಸಕ್ತರು ಕಂಗಾಲಾಗಿದ್ದರು ಹಾಗೂ ಅದರಲ್ಲಿ ಬಿಜೆಪಿಗರೇ ನಾಚಿ ನೀರಾಗುವಷ್ಟಿದ್ದ ಮೋದಿಭಜನೆಯನ್ನು ನೋಡಿದ ಮೇಲೆ ಮಾನ್ಯರು ಹಿಂದುತ್ವವಾದಿಗಳ ‘ಥಿಂಕ್‌ಟ್ಯಾಂಕೋ’ ಅಲ್ಲ, ಬದಲಿಗೆ ‘ಥಿಂಕ್ ಬಕೆಟ್ಟೋ’ ಮಾತ್ರ ಎಂಬ ತೀರ್ಮಾನಕ್ಕೆ ಬಂದಿದ್ದರು.

ಅದಕ್ಕೆ ಮತ್ತಷ್ಟು ಪುರಾವೆ ಒದಗಿಸುವಂತೆ ದೊರಂಗೌ ಅವರು ಸಮ್ಮೇಳನಾಧ್ಯಕ್ಷಗಿರಿ ಘೋಷಣೆಯಾದ ಮರುಕ್ಷಣವೇ ‘‘ಹಿಂದಿಯು ರಾಷ್ಟ್ರಭಾಷೆ, ಅದನ್ನು ಎಲ್ಲರೂ ಕಲಿಯುವುದೇ ವಿಹಿತ’’ವೆಂದು ಅಪ್ಪಣೆ ಕೊಡಿಸಿದ್ದಾರೆ. ಇದರಿಂದ ದೊರಂಗೌ ಅವರನ್ನು ಆಯ್ಕೆ ಮಾಡಿದ್ದು ಕನ್ನಡ ಸಮ್ಮೇಳನಕ್ಕೋ ಅಥವಾ ಹಿಂದಿ ಸಮ್ಮೇಳನಕ್ಕೋ ಎಂಬ ಜಿಜ್ಞಾಸೆ ಪ್ರಾರಂಭವಾದೊಡನೆ ಒಂದಷ್ಟು ಕನ್ನಡಪರ ಮಾತನಾಡಿ ಮಾನ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆ ಸ್ವಲ್ಪದಿನಗಳ ಹಿಂದೆ ಭದ್ರಾವತಿಯಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ನ ಘಟಕವೊಂದನ್ನು ಉದ್ಘಾಟನೆ ಮಾಡಲು ಬಂದಿದ್ದ ಗೃಹಮಂತ್ರಿ ಅಮಿತ್ ಶಾ ಅವರ ಕಾರ್ಯಕ್ರಮದ ಬ್ಯಾನರ್, ಉದ್ಘಾಟನಾ ಫಲಕ ಯಾವುದರಲ್ಲೂ ಕನ್ನಡದ ಸುಳಿವೂ ಇರಲಿಲ್ಲ. ಬೇರೆ ಯಾವ ರಾಜ್ಯದಲ್ಲೂ ಈ ರೀತಿ ಸ್ಥಳೀಯ ಭಾಷೆಯನ್ನು ಮೂಲೆಗುಂಪು ಮಾಡಿ ಹಿಂದಿಯನ್ನು ಮಾತ್ರ ಮೆರೆಸುವುದಿಲ್ಲ ಎಂಬ ಕೂಗೂ ಎದ್ದಿತ್ತು.

ಇನ್ನು ಸಿ.ಟಿ. ರವಿಯಂತಹ ಹಿಂದುತ್ವವಾದಿ-ಹಿಂದಿವಾದಿ ರಾಜಕಾರಣಿಗಳಂತೂ ಹಿಂದಿ ಹೇರಿಕೆಯ ವಿರೋಧವನ್ನು ಹಿಂದಿದ್ರೋಹ ಹಾಗೂ ರಾಷ್ಟ್ರದ್ರೋಹವೆಂಬಂತೆ ಚಿತ್ರಿಸಲು ಪ್ರಾರಂಭವಾಗಿ ತುಂಬಾ ದಿನಗಳಾಯಿತು. ಇವೆಲ್ಲಾ ಪರಸ್ಪರ ಸಂಬಂಧಗಳಿರುವ ವಿಷಯಗಳಾಗಿವೆ. ಹಿಂದಿ-ಹಿಂದೂ- ಹಿಂದೂಸ್ಥಾನ್ ಎಂಬ ಭಾರತೀಯ ಹಿಟ್ಲರ್ ಶಾಹಿಯ ಕಾರ್ಯಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನು ಈ ಭಾರತೀಯ ನಾಝಿಗಳು ಬಿಟ್ಟುಕೊಡುತ್ತಿಲ್ಲ.

ಅದರಲ್ಲೂ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ತಮ್ಮ ಆರ್ಯನ್ ಅಜೆಂಡಾಗಳನ್ನೆಲ್ಲಾ ತೀವ್ರವಾಗಿ ಮತ್ತು ಆಕ್ರಮಣಶೀಲವಾಗಿ ಜಾರಿ ಮಾಡುತ್ತಿ ರುವ ಮೋದಿ ಸರಕಾರದ ಬಹುಮುಖ್ಯ ಸಾಂಸ್ಕೃತಿಕ-ರಾಜಕೀಯ ಹುನ್ನಾರಗಳಲ್ಲಿ ಹಿಂದಿಯ ಯಜಮಾನಿಕೆ ಮತ್ತು ಹೇರಿಕೆಯನ್ನು ಸ್ಥಾಪಿಸಿ ಕನ್ನಡದಂತಹ ಜನಭಾಷೆಗಳ ಅಸ್ಮಿತೆಯನ್ನು ಹಿಂದಿಗೆ ಅಧೀನಗೊಳಿಸುವುದು ಪ್ರಮುಖವಾಗಿದೆ. ಇದನ್ನು ಅಧಿಕಾರಕ್ಕೆ ಬಂದ ಮೊದಲ ವರ್ಷದಿಂದಲೇ ಮೋದಿ ಸರಕಾರ ಪ್ರಾರಂಭಿಸಿತು.

ಹಿಂದಿ ದಿವಸ್-ಹಿಂದುತ್ವ ದಿವಸ್?
ಒಂದು ದೇಶಕ್ಕೆ ಒಂದೇ ಧರ್ಮ, ಒಂದೇ ಚುನಾವಣೆ, ಒಂದೇ ತೆರಿಗೆ ಎನ್ನುವ ಬಿಜೆಪಿ-ಆರೆಸ್ಸೆಸ್‌ಗಳ ಸರ್ವಾಧಿಕಾರಿ ಧೋರಣೆಯ ಭಾಗವಾಗಿ ಗೃಹಮಂತ್ರಿ ಅಮಿತ್ ಶಾ ಅವರು ಒಂದು ದೇಶಕ್ಕೆ ಒಂದು ಭಾಷೆ ಇರಬೇಕು ಮತ್ತು ಅದು ಹಿಂದಿಯೇ ಆಗಬೇಕು ಎಂದು ಕೂಡಾ ಪ್ರತಿಪಾದಿಸಿದ್ದರು. 2019ರ ಸೆಪ್ಟಂಬರ್-14ರ ಹಿಂದಿ ದಿವಸ್ ಅಂದು ದೇಶವನ್ನುದ್ದೇಶಿಸಿ ಮಾಡಿದ್ದ ಟ್ವೀಟ್ ಒಂದರಲ್ಲಿ: ‘‘ವಿವಿಧ ಭಾಷೆಗಳುಳ್ಳ ಭಾರತವು ವಿಶ್ವಮಾನ್ಯ ಸ್ಥಾನ ಪಡೆಯಬೇಕಾದರೆ ಒಂದೇ ಭಾಷೆಯ ಅಗತ್ಯವಿದೆ. ಈ ದೇಶದಲ್ಲಿ ಅತಿ ಹೆಚ್ಚಿನ ಜನ ಹಿಂದಿ ಭಾಷೆಯನ್ನು ಮಾತನಾಡುವುದರಿಂದ ಮತ್ತು ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇರುವುದರಿಂದ ದೇಶದ ಜನರು ತಮ್ಮ ಮಾತೃಭಾಷೆಯ ಜೊತೆಜೊತೆಗೆ ಹಿಂದಿಯನ್ನು ಬಳಸಬೇಕು. ಹೀಗೆ ಮಾಡಿದಲ್ಲಿ 2022ರ ಹೊತ್ತಿಗೆ ಹಿಂದಿಗೆ ಜಗತ್ತಿನಲ್ಲಿ ಚಿರಸ್ಥಾಯಿಯಾದ ಸ್ಥಾನ ದಕ್ಕುತ್ತದೆ’’ ಎಂದು ಪ್ರತಿಪಾದಿಸಿದ್ದಾರೆ.

ಆಗಲೂ ಈ ಹಿಂದಿ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ಭುಗಿಲೆದ್ದಿತ್ತು. ಅದರಿಂದ ಪಾಠ ಕಲಿತಿರುವ ಮೋದಿ ಪ್ರಭುತ್ವವು ಹಿಂದಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಸ್ಥಾಪಿಸುವ ಮೂಲಕ ಹಿಂದಿಯನ್ನು ಹೇರುವ ಪರೋಕ್ಷ ತಂತ್ರಗಳನ್ನು ಅನುಸರಿಸುತ್ತಿದೆ. ಹಾಗೆ ನೋಡಿದರೆ, ಈ ನಮ್ಮ ಬಹುಭಾಷಿಕ ಭಾರತದ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇರುವ ಹುನ್ನಾರಗಳನ್ನು ಬಿಜೆಪಿ ಸರಕಾರ ನಿರಂತರವಾಗಿ ಮಾಡಿಕೊಂಡೇ ಬರುತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಏರಿದ ತರುಣದಲ್ಲೇ ಅದು ಪರಿಚಯಿಸಿದ ‘ನವ ಶಿಕ್ಷಣ ನೀತಿ’ಯ ಕರಡಿನಲ್ಲಿ ಆ ಪ್ರಯತ್ನವನ್ನು ನಡೆಸಿತ್ತು. ಆ ಕರಡಿನಲ್ಲಿ ಅದು ಹಿಂದಿಯನ್ನು ಹಿಂದಿಯೇತರ ರಾಜ್ಯದ ಮಕ್ಕಳು ಆರನೇ ತರಗತಿಯಿಂದ ಕಡ್ಡಾಯವಾಗಿ ಕಲಿಯಬೇಕೆಂಬ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದರ ವಿರುದ್ಧ ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಭುಗಿಲೆದ್ದ ಬಂಡಾಯದ ಕಾರಣದಿಂದಾಗಿ ಆ ಪ್ರಸ್ತಾಪವನ್ನು ಈಗ ಕರಡಿನಿಂದ ಹಿಂದೆಗೆದುಕೊಂಡಿತು. ಆದರೆ ಅಂತಿಮಗೊಂಡ ನೀತಿಯಲ್ಲಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ದಕ್ಷಿಣ ಹಾಗೂ ಪೂರ್ವ ಭಾರತದವರ ಮೇಲೆ ಹೇರುವುದರ ಜೊತೆಗೆ ಸಂಸ್ಕೃತದ ಯಜಮಾನಿಕೆಯನ್ನು ದೇಶೀಯ ಭಾಷೆಗಳ ಮೇಲೆ ಹೇರಿದೆ.

ಅದೇ ರೀತಿ 2018ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು 400 ಕೋಟಿ ರೂ.ಗಳ ಅಭಿಯಾನವೊಂದನ್ನು ಬಿಜೆಪಿ ಸರಕಾರ ಪ್ರಾರಂಭಿಸಿತ್ತು. ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದು, ಅವರೆಲ್ಲರ ಭಾಷೆ ಹಿಂದಿಯೇ ಆಗಿದೆಯೆಂದು ಬಿಜೆಪಿ ಇಡೀ ಜಗತ್ತಿನ ಎದುರು ಪ್ರತಿಪಾದಿಸಲು ಮುಂದಾಗಿತ್ತು. ಆದರೆ ಆಗಲೂ ದೊಡ್ಡ ಪ್ರತಿರೋಧ ಎದುರಾಗಿದ್ದರಿಂದ ಆ ಪ್ರಯತ್ನದಿಂದ ಹಿಂದೆ ಸರಿದಿತ್ತು. ಬಹುಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಾಂವಿಧಾನಾತ್ಮಕ ತೊಡಕಿರುವುದರಿಂದ, ಆರೆಸ್ಸೆಸ್-ಬಿಜೆಪಿ ಸರಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಅದಕ್ಕಾಗಿ ಅದು ಹಲವಾರು ಸುಳ್ಳುಗಳನ್ನು ಹೇಳುತ್ತಿದೆ:

ಅ) ಹಿಂದಿ ಮಾತ್ರ ರಾಷ್ಟ್ರ ಭಾಷೆ.

ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ

ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು..ಇತ್ಯಾದಿ.

ಇದರ ಜೊತೆಗೆ ‘‘ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕು’’ ಎಂದು ಹೇಳುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ ಹಾಗೂ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾಪಗಳೂ ಆಗಿವೆ. ಹಿಂದಿ ರಾಷ್ಟ್ರ ಭಾಷೆಯಲ್ಲ: 

ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರಿಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂತಹ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ. ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ..ಅಂದರೆ ಕೇವಲ 200 ವರ್ಷಗಳಿಂದೀಚೆಗೆ. ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ. ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ.

ದೇವನಾಗರಿ ಹಿಂದಿ-ಕೋಮುವಾದದ ತನುಜಾತೆ
ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟೂ ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಘಲ್ ಸಂಸ್ಥಾನದ ರಾಜಧಾನಿಯಾಗಿದ್ದ ದಿಲ್ಲಿಯಲ್ಲಿ ಬೀಡುಬಿಟ್ಟಿದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖರಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ. ಇದು ಒಂದು ರೀತಿಯಲ್ಲಿ ಪರ್ಶಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದಿ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತೀಕರಣ-ದೇವನಾಗರೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು. ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದಿಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಆಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ. ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು.

ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು.

ರಾಜ್ ಎಂದರೆ ರಾಷ್ಟ್ರವಲ್ಲ!
ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್ ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ 343ರಿಂದ 351ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದು ‘‘ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ 15 ವರ್ಷಗಳವರೆಗೆ ಇಂಗ್ಲಿಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಬೇಕು’’ ಎಂದು ಸ್ಪಷ್ಟಪಡಿಸುತ್ತದೆ. 1963ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲಿಷನ್ನೂ ಸಹ ಕಾಲಾವಧಿಯ ಮಿತಿಯಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರಿಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ, ಆರ್ಟಿಕಲ್ 348ರ ಪ್ರಕಾರ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟ್‌ನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲಿಷೇ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲಿಷ್‌ನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ ಹಾಗೂ ಕೇಂದ್ರದ ಸಂಸತ್ತಿನಲ್ಲಿ ಮಸೂದೆಗಳು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಮಸೂದೆಗಳ ಮೂಲ ಅಧಿಕೃತ ರೂಪ ಇಂಗ್ಲಿಷೇ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ. ಹೀಗೆ ಸಾರಾಂಶದಲ್ಲಿ ಹಿಂದಿಯು ಸರಕಾರಗಳ ನಡುವಿನ ಮತ್ತು ಸರಕಾರ ಹಾಗೂ ಹಿಂದಿ ಭಾಷಿಕ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ.

ಗುಜರಾತ್ ಹೈಕೋರ್ಟ್‌ನ ತೀರ್ಮಾನ
ಅಷ್ಟು ಮಾತ್ರವಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಅದರ ವಿವರಗಳನ್ನು ಹಿಂದಿಯಲ್ಲಿ ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಎಂಬುವರು ಗುಜರಾತಿನ ಹೈಕೋರ್ಟ್‌ನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ.

ಇದಲ್ಲದೆ ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೆ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ನಿರ್ದೇಶನವನ್ನೂ ಸಂವಿಧಾನವು ನೀಡಿದೆ. ಹೀಗೆ ರಾಜ್ ಭಾಷಾ ಮತ್ತು ಶೆಡ್ಯೂಲ್ 8ರ ಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ.

ಶೆಡ್ಯೂಲ್-8-ಹಿಂದಿ ವಸಾಹತುಶಾಹಿಯ ಅಸ್ತ್ರ? 
ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸಿಗರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು. 2011ರ ಭಾಷಿಕ ಸೆನ್ಸಸ್‌ನಲ್ಲಿ ಹಿಂದಿ ಮಾತನಾಡುವವರ ಪ್ರಮಾಣ ಶೇ.43 ಎಂದು ತೋರಿಸಲಾಗಿರುವುದನ್ನೂ ಸಹ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.

ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ.

ಎರಡನೆಯದಾಗಿ 1950ರಲ್ಲಿ ಶೇ.20ರಷ್ಟು ಮಾತ್ರ ಹಿಂದಿ ಭಾಷಿಕರಿದ್ದದ್ದು 2011ರ ವೇಳೆಗೆ ಅದರ ಪ್ರಮಾಣ ಶೇ.43 ಆಗಿದ್ದರ ಹಿಂದೆ ದೊಡ್ಡ ಭಾಷಿಕ ವಸಾಹತು ರಾಜಕಾರಣವಿದೆ.

ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಭಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ 2011ರ ಬಿಹಾರದ ಭಾಷಿಕ ಸೆನ್ಸಸ್‌ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂತಹ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ. ಬಿಹಾರದಲ್ಲಿ ಶೇ.31 ಭಾಗ ಭೋಜ್‌ಪುರಿಯನ್ನೂ, ಶೇ.25 ಭಾಗ ಮಗಹಿಯನ್ನೂ ಮಾತನಾಡುತ್ತಾರೆ. ಆದರೆ ಶೇ.21 ಭಾಗ ಮಾತ್ರ ಹಿಂದಿ ಮಾತನಾಡುತ್ತಾರೆ.

ಆದರೆ ಭೋಜ್‌ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ 8ರಲ್ಲಿ ಇಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೋಂದಾಯಿಸುವಾಗ ಶೆಡ್ಯೂಲ್ 8ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!. ಹೀಗಾಗಿ ಭಾಷಿಕ ಸೆನ್ಸಸ್‌ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೋಂದಾಯಿತವಾಗುತ್ತದೆ. ಶೆಡ್ಯೂಲ್ 8ರಲ್ಲಿ ಕೇವಲ 25,000 ಜನರು ಮಾತ್ರ ತಮ್ಮ ಮಾತೃಭಾಷೆಯೆಂದು ನೋಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ 2 ಕೋಟಿ ಭಾಷಿಕರಿರುವ ಭೋಜ್‌ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ 8ರಲ್ಲಿ ಸ್ಥಾನ ನೀಡಲಾಗಿಲ್ಲ.

ಇತ್ತೀಚೆಗೆ ಭೋಜ್‌ಪುರಿಗೆ ಶೆಡ್ಯೂಲ್ 8ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖ್ಯೆ ಕಡಿಮೆಯಾಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್‌ನಿಂದ ಕಣ್ಮರೆಯಾಗಿದೆ.

ಅದೇ ರೀತಿ ಬುಂದೇಲ್‌ಖಂಡಿ, ಛತ್ತೀಸ್‌ಘರಿ, ರಾಜಸ್ಥಾನಿ, ಹರ್ಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್ 8ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೋಂದಾಯಿತವಾಗುತ್ತವೆ. ಶೆಡ್ಯೂಲ್ 8ರಲ್ಲಿರುವ ಭಾಷೆಗಳಿಗೆ ಮಾತ್ರ ಸರಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್‌ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ. ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾದ ಗಣೇಶ್ ದೇವಿಯವರ ಪ್ರಕಾರ ಭಾರತದಲ್ಲಿ 750 ಭಾಷೆಗಳಿದ್ದು ಇಂತಹ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ 120 ಭಾಷೆಗಳು ಮೃತವಾಗಿವೆ.

ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ‘‘ಹಿಂದಿ ಭಾಷಿಕರ’’ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ. ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ. ಹಿಂದಿ ಎರಡನೇ ಭಾಷೆಯೂ ಆಗಲಾರದು

ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಏರತೊಡಗಿ ದೊಡನೆ ಅಮಿತ್ ಶಾ ಅವರು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂಬ ಹೊಸ ಪ್ರತಿಪಾದನೆ ಪ್ರಾರಂಭಿಸಿದ್ದಾರೆ. ಆದರೆ ಮಕ್ಕಳು ಮಾತೃಭಾಷೆಯನ್ನು ‘‘ಪಡೆದು ಕೊಳ್ಳುತ್ತಾರೆ’’ (First Language Acquisition). ಆದರೆ ಎರಡನೇ ಭಾಷೆಯನ್ನು ‘‘ಕಲಿಯಬೇಕಾಗುತ್ತದೆ’’ (Second Language Learning).

‘ಎರಡನೇ ಭಾಷಾ ಕಲಿಕೆ’ಯೆಂಬುದು ರಾಜಕೀಯ ಪ್ರೇರಿತವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News