ದೇಶದ ಅನ್ನದಾತ ಎನಿಸಿಕೊಂಡವರು ಉಗ್ರಗಾಮಿಗಳಾಗಿದ್ದಾರೆ : ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ

Update: 2021-01-27 03:45 GMT
ಫೈಲ್ ಫೋಟೊ

ಹೊಸದಿಲ್ಲಿ : "ದೇಶದ ಅನ್ನದಾತ ಎನಿಸಿಕೊಂಡವರು ಉಗ್ರಗಾಮಿಗಳಾಗಿದ್ದಾರೆ. ನಮ್ಮ ರೈತರನ್ನು ಅವಮಾನಿಸಬೇಡಿ. ಉಗ್ರರನ್ನು ಭಯೋತ್ಪಾದಕರೆಂದೇ ಕರೆಯಬೇಕು" ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ರೈತ ಮುಖಂಡರನ್ನು ಹುರಿಯತ್ ನಾಯಕರಿಗೆ ಹೋಲಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಯೋಗೀಂದ್ರ ಯಾದವ್, ರಾಕೇಶ್ ಟೀಕಾಯತ್ ಮತ್ತು ಹನ್ನನ್ ಮೊಲ್ಲಾ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

"ನಾವು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದರೆ, ಪ್ರಗತಿಪರರೆನಿಸಿಕೊಂಡ ಕೆಲವರಿಂದ ಬೆಂಬಲಿತವಾದ ಶಕ್ತಿಗಳು ಅದನ್ನು ಅವಮಾನಿಸುವ ಪ್ರಯತ್ನ ಮಾಡಿವೆ; ಅದೂ ಸಂವಿಧಾನದ ಹೆಸರಿನಲ್ಲಿ" ಎಂದು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಟ್ವೀಟ್ ‌ಮಾಡಿದ್ದಾರೆ. "ದೆಹಲಿಯಲ್ಲಿ ನಡೆದದ್ದನ್ನು ದೇಶದ ರೈತರು ಮಾಡಲು ಸಾಧ್ಯವೇ" ಎಂದು ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯ್‌ ವರ್ಗಿಯಾ ಪ್ರಶ್ನಿಸಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಬೀದಿಗಿಳಿದಿರುವ ರೈತ ಮುಖಂಡರು ವಿರೋಧ ಪಕ್ಷಗಳ ಕೈಗೊಂಬೆ ಎಂದು ಬಿಜೆಪಿಯ ಮುಖಂಡರು ಬಣ್ಣಿಸಿದ್ದಾರೆ.

ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದಿಂದ ರೈತರ ಮೇಲೆ ಸಂಘಟನೆಗಳ ಮುಖಂಡರಿಗೆ ಹಿಡಿತ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಿಗದಿಪಡಿಸಿದ ಮಾರ್ಗದಲ್ಲಿ ಟ್ರ್ಯಾಕ್ಟರ್ ರ್ಯಾಲಿ ತೆರಳುತ್ತದೆ ಎಂದು ರೈತ ಮುಖಂಡರು ನೀಡಿದ ಆಶ್ವಾಸನೆಯನ್ನು ಸರ್ಕಾರ ನಂಬಿತ್ತು  ಎಂದು ಅವರು ಹೇಳಿದ್ದಾರೆ.

"ಸರ್ಕಾರ ಪ್ರತಿಭಟನಾಕಾರರಿಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ರೈತರು ತಿರಸ್ಕರಿಸಿದ್ದಾರೆ. ರೈತರು ಹತಾಶ ವಿರೋಧ ಪಕ್ಷಗಳ ನಿರ್ದೇಶನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಭಟನಾ ನಿರತರು ಪೊಲೀಸರನ್ನು ಥಳಿಸಿದರೂ ದೆಹಲಿ ಪೊಲೀಸರು ಅತ್ಯಂತ ಸಂಯಮ ಪ್ರದರ್ಶಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು ಎನ್ನುವುದು ಅವರ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News