ಚಿಕ್ಕಮಗಳೂರು: ರೈತರಿಗೆ ಬೇಡದ ಕಾಯ್ದೆಗಳನ್ನು ಹಿಂಪಡೆಯಲು ಎಸ್.ವೈ.ಎಸ್ ಆಗ್ರಹ

Update: 2021-01-27 06:14 GMT

ಚಿಕ್ಕಮಗಳೂರು : ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಬಹುಸಂಖ್ಯಾತರು ರೈತರೇ ಆಗಿದ್ದು, ಇಲ್ಲಿನ ಪ್ರಜಾಪ್ರಭುತ್ವವು ಬಹುತೇಕ ರೈತ ಪ್ರಭುತ್ವವೇ ಆಗಿದೆ. ಇಂತಹ ರೈತ ಪ್ರಭುಗಳು ತಮ್ಮ ಹಿತರಕ್ಷಣೆಗಾಗಿ ಬೀದಿಗೆ ಬೀಳಬೇಕಾಗಿ ಬಂದಿರುವುದು ದುರಾದೃಷ್ಟಕರ ಎಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆಪಿ ಅಬೂಬಕರ್ ಹೇಳಿದರು.

ಎಸ್ ವೈ ಎಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ಗಣರಾಜ್ಯೋತ್ಸವ ದಿನದಂದು ರೈತ ಹೋರಾಟಗಾರರ ಬೆಂಬಲವಾಗಿ ನಡೆಸಿದ ಪತಾಕೆ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೃಷಿ ಸಮೃದ್ಧವಾಗಿ ಬೆಳೆದರೆ ಮಾತ್ರ ದೇಶದಲ್ಲಿ ಸುಭಿಕ್ಷೆ ನೆಲೆಸುತ್ತದೆ. ಹೊಲಗಳಲ್ಲಿ ದುಡಿಯಬೇಕಾದ ಕೃಷಿಕರು ಹೋರಾಟಕ್ಕಾಗಿ ಬೀದಿಗಿಳಿದರೆ ದೇಶದ ಜನ ಅನ್ನ ತಿನ್ನಲು ಸಾಧ್ಯವೇ ? ದೆಹಲಿಯ ಪ್ರತಿಕೂಲ ವಾತಾವರಣವನ್ನೂ ಲೆಕ್ಕಿಸದೆ ಹೋರಾಟ ನಿರತರಾಗಿರುವ ರೈತರ ಜೊತೆ ಹತ್ತು ಸುತ್ತಿನ ಮಾತುಕತೆ ನಡೆಸಿದರೂ ಸಮಸ್ಯೆಯನ್ನು ಪರಿಹರಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡು. ಅನ್ನದಾತರಿಗೆ ಅಗತ್ಯವಿಲ್ಲದ ಮಸೂದೆಯನ್ನು ಯಾರ ಹಿತಕ್ಕಾಗಿ ಜಾರಿಗೊಳಿಸಬೇಕು ? ಇನ್ನಾದರೂ ಪ್ರತಿಷ್ಠೆಯನ್ನು ಬದಿಗಿಟ್ಟು ವಿವಾದಾತ್ಮಕ ಮಸೂದೆಯನ್ನು ಹಿಂಪಡೆಯುವ ಮೂಲಕ ರೈತರ ಹೋರಾಟಕ್ಕೆ ಸ್ಪಂದಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

72ನೇ ಗಣರಾಜ್ಯೋತ್ಸವದ ಸಂಕೇತವಾಗಿ 72 ರಾಷ್ಟ್ರಧ್ವಜಗಳೊಂದಿಗೆ ತಾಲ್ಲೂಕು ಕಚೇರಿಯಿಂದ ಆಝಾದ್ ವೃತ್ತದವರೆಗೆ ಜಾಥಾ ನಡೆಸಲಾಯಿತು. ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಕೆಪಿ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸೈಯದ್ ಎಪಿಎಸ್ ತಂಙಳ್ ಉದ್ಘಾಟಿಸಿದರು. ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಉಪ್ಪಳ್ಳಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಫ್ವಾನ್ ಸಖಾಫಿ ಶಾಂತಿಪುರ, ಮುನೀರ್ ಅಹ್ಮದ್ ಚಿಕ್ಕಮಗಳೂರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News