ಅಮ್ಮನ ಮಡಿಲು

Update: 2021-01-27 08:13 GMT

ಕಳೆದ 20 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿರುವ ಮಮ್ತಾಝ್ ಇಸ್ಮಾಯಿಲ್ ಅವರು, ಬರಹ ಲೋಕಕ್ಕೆ ಕಾಲಿರಿಸಿದ್ದು ಇತ್ತೀಚೆಗೆ. ಕೊಡಗಿನಲ್ಲಿ ಕಳೆದ ತಮ್ಮ ಬಾಲ್ಯ ಮತ್ತು ಬದುಕಿನ ಅನುಭವಗಳನ್ನು ನವಿರಾಗಿ ಕಟ್ಟಿ ಕೊಡುವ ಮೂಲಕ ಅಪಾರ ಓದುಗರನ್ನು ತಮ್ಮದಾಗಿಸಿಕೊಂಡಿದ್ದಾರೆ.

ನನ್ನನ್ನು ನನ್ನ ಉಮ್ಮ ಮನೆಯ ಮುಂದಿರುವ ಮೆಟ್ಟಿಲಿನ ಮೇಲೆ ಕುಳ್ಳಿರಿಸಿ ಹೋಗುತ್ತಿದ್ದರು.ಮನೆಯ ಸುತ್ತಲೂ ಕಾಫಿ ತೋಟ, ಮನೆಯ ಮುಂದೆ ಕಲ್ಲು ಮಣ್ಣಿನ ಅಗಲವಾದ ದಾರಿ.. ಮಲ್ಲಿಗೆಯ ಪೊದೆ. ಆಗೊಮ್ಮೆ ಈಗೊಮ್ಮೆ ಸಾಹುಕಾರರ ಕಾರು, ಟ್ರಾಕ್ಟರ್‌ಗಳ ಓಡಾಟ. 3 ವರ್ಷವಾದರೂ ನಡೆಯಲು ಆಗದ ನಾನು ಮೆಟ್ಟಿಲ ತುದಿಯಲ್ಲಿ ಕೂತು ಆ ಕಾಫಿ ತೋಟದ ಮೌನ, ಹಕ್ಕಿಗಳ ಇಂಚರ, ಕಣ್ಣ ಮುಂದೆಯೇ ಸುಳಿಸುಳಿದು ಹೋಗುವ ಮಂಜಿನ ಮೋಡದ ಮೇಲೆ ಕೈಯಾಡಿಸುತ್ತಿದ್ದೆ.

 ಆ ತೋಟದ ಅಂಚಿನಲ್ಲಿ ಕಾಕನ ಹೊಟೇಲು. ಸದಾ ಕುದಿಯುವ ಚಹಾ. ಬಿಸಿ ಬಿಸಿ ಉಂಡೆ!

ಇದರ ಆಸೆಗೆ ಮಲೆಯ ಮೇಲಿನ ಆದಿವಾಸಿಗಳು ಬರುತ್ತಿದ್ದರು. ಅವರಲ್ಲಿ ಕೆಲವರು ಅವರ ಮಕ್ಕಳನ್ನು ನನ್ನ ಕಣ್ಣ ಬಳಿ ಬಿಟ್ಟು ನಮ್ಮ ಮನೆಯ ಮುಂದಿರುವ ಕೊಳದಲ್ಲಿ ನೀರು ಸೇದಿ ಆ ಹೊಟೇಲಿಗೆ ನೀಡುತ್ತಿದ್ದರು. ಅವರು ನೀರಿನ ಬದಲಿಗೆ ಚಹಾ, ಉಂಡೆ ಕೊಟ್ಟು ಕಳುಹಿಸುತ್ತಿದ್ದರು.

ಅವರ ಪುಟ್ಟ ಕಂದಮ್ಮಗಳು ಚಡ್ಡಿ ಹಾಕದೆ, ಕಾಲಿಗೆ ಮಣ್ಣು ಮೆತ್ತಿಕೊಂಡು, ಗುಂಗುರು ಕೂದಲನ್ನು ಹಾಗೆಯೇ ಬಿಟ್ಟು, ಕರಿ ಬಣ್ಣದ ದೇಹವನ್ನು ಬಿಸಿಲಿಗೆ ಒಡ್ಡಿ ಆಟವಾಡುತ್ತಿದ್ದವು.

ನಾನು ಸುಮ್ಮನೆ ನೋಡುತ್ತಿದ್ದೆ.

ಹಲವು ವರ್ಷದ ಬಳಿಕ ನನಗೆ ಮಕ್ಕಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಅದು ಮಕ್ಕಳ ಮನೆಯ ಅಧೀಕ್ಷಕಿಯಾಗಿ ಕೆಲಸ ಮಾಡಬೇಕಿತ್ತು. ನಾನು ನನ್ನ 3 ವರ್ಷದ ಮಗಳನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಅಲ್ಲಿ ಹೋಗಿದ್ದೆ.

ಸ್ವಲ್ಪ ಎತ್ತರದ ಮೈದಾನ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿರುವ ಹಳೆಯ ಕಾಲದ ಮಣ್ಣಿನ ಗೋಡೆಯ ಮರದ ಛಾವಣಿಯ ಹಂಚಿನ ಮನೆ. ಸುತ್ತಲೂ ಪೊದರು, ಕಾಡು. ಮೌನ. ಕಣ್ಣಾಡಿಸಿದ ಕಡೆಯೆಲ್ಲಾ ಹರಡಿರುವ ಹಸಿರು ಬೆಟ್ಟದ ಸಾಲು.

ನಮ್ಮನ್ನು ನೋಡಿದ್ದೇ ಆ ಗಂಡು ಮಕ್ಕಳು ಪಕ್ಷಿಗಳಂತೆ ಹಾರಿ ಬಂದು ವಿಸ್ಮಯದಿಂದ ನೋಡಿದರು..

ದೊಡ್ಡ ಹುಡುಗರ ಗುಂಪು ನೋಡಿ ನನ್ನ ಮಗಳು ನನ್ನನ್ನು ಅವಚಿಕೊಂಡಳು. ಯಾಕೋ ನನ್ನ ಮಗಳ ದುಗುಡ ಹಾಗೂ ಯಾರೋ ಬಿಟ್ಟು ಹೋದ ಆ ಮಕ್ಕಳ ಅಗಲದ ಕಣ್ಣು.. ನನಗೆ ಹೊಟ್ಟೆಯೊಳಗೆ ಸಣ್ಣಗೆ ಸಂಕಟವಾಗಿ ಕಣ್ಣು ಮಂಜಾಯಿತು..

ಈ ಮಕ್ಕಳ ಮನೆಯ ಪಕ್ಕದಲ್ಲೇ ನನ್ನ ಸರಕಾರಿ ಹಳೆಯ ಕ್ವಾರ್ಟರ್ಸ್. ಅವರ ನಗು, ಕೇಕೆ, ಬಿಕ್ಕಳಿಕೆ ಎಲ್ಲವು ನನ್ನ ಕಿವಿಯೊಳಗೆ ಸದಾ ಹಾದು ಹೋಗುತ್ತಿತ್ತು.

ಇದುವರೆಗೆ ಒಂದು ಮಗುವಿನ ತಾಯಿಯಾಗಿದ್ದ ನನಗೆ ಒಮ್ಮೆಲೇ 30 ಮಕ್ಕಳ ತಾಯಿಯಂತೆ ಭಾಸವಾಯಿತು.

ಮಗಳನ್ನು ಮನೆಯ ಮುಂದಿರುವ ಉಯ್ಯಲೆಯಲ್ಲಿ ತೂಗಿ ಮಲಗಿಸಿ ಅವರ ಬಳಿ ಒಮ್ಮಮ್ಮೆ ರಾತ್ರಿ ಹೋಗಿ ನೋಡಿ ಬರುತ್ತಿದ್ದೆ. ನಿದ್ದೆಯಲ್ಲಿ ಕನವರಿಸುತ್ತಾ ಮಲಗಿರುವ ಮಕ್ಕಳು. ಕೆಲವರು ಮಲಗದೆಯೇ ತುಂಟ ನಗೆ ಬೀರುವವರು. ಕೆಲವರಿಗೆ ಕಥೆ ಹೇಳಿ ಕೆಲವರ ಕಥೆ ಕೇಳಿ ಅಂತೂ ದಿನ ಮುಗಿಯುತ್ತಿತ್ತು.

 ಗುಬ್ಬಚ್ಚಿ ಗೂಡಿನಂತಿರುವ ಆ ಮಕ್ಕಳ ಮನೆಯ ಮುಂದೆ ವಿಶಾಲವಾದ ಅಂಗಳ. ಅಲ್ಲಿ ಅವರಿಗೆ ಕ್ರಿಕೆಟ್ ಆಡಬೇಕು. ಅವರು ಎಸೆದ ಚೆಂಡು ಪಕ್ಕದ ಮನೆಯವರ ಹಂಚು ಚೂರಾಗಿ ಅವರು ಹಿಡಿ ಶಾಪ ಹಾಕಿ ನನ್ನ ಬಳಿ ಬರುತ್ತಿದ್ದರು. ನಾನು ಆ ಮಕ್ಕಳ ಬಳಿ ಅಂಗಲಾಚುತ್ತಿದ್ದೆ. ಕ್ರಿಕೆಟ್ ಬೇಡ. ಫುಟ್ಬಾಲ್ ಆಡಿ ಎಂದು. ಅವರು ಒಪ್ಪಿಕೊಂಡು ಕ್ರಿಕೆಟ್, ಫುಟ್ಬಾಲ್ ಎರಡೂ ಆಡುತ್ತಿದ್ದರು. ನೆರೆಹೊರೆಯವರು ಬರುವುದು ಗೊತ್ತಾದಾಗ ನನಗೆ ಅವಿತು ಕೊಳ್ಳಲು ಹೇಳುತ್ತಿದ್ದರು.

ಮಕ್ಕಳು ಹಾಗೂ ದೊಡ್ಡವರ ನಡುವಿನ ಸಂಘರ್ಷ..

ನಾನು ಅವರ ನಡುವೆ. ಮಜಾ ಇರುತ್ತಿತ್ತು.!

ಆ ಮಕ್ಕಳ ಮನೆ ದಿನದ 24 ಗಂಟೆ ಮಕ್ಕಳಿಗೆ ಸದಾ ತೆರೆದಿರುತ್ತಿತ್ತು.

ಒಮ್ಮೆ ನಮ್ಮ ಗೇಟಿನ ಬಳಿ ಮೂವರು ಹುಡುಗರು ನಿಂತು ನೋಡುತ್ತಿದ್ದರು. ಒಣಗಿರುವ ಕಾಲಿನ ಹೊಳೆಯುವ ಕಣ್ಣಿನ ಮಕ್ಕಳು. ನಿಧಾನಕ್ಕೆ ಗೇಟು ತೆರೆದರು. ನಾನು ಮಕ್ಕಳೊಂದಿಗೆ ಹೂವಿನ ತೋಟದಲ್ಲಿ.

ಅವರೆಂದರು ಅವರು ಮೈದಾನದ ಮಕ್ಕಳೆಂದು.

ಅವರ ಕೆಲಸ ಮೈದಾನದಲ್ಲಿ ಆಡುವ ದೊಡ್ಡವರಿಗೆ ಬಾಲ್ ಹೆಕ್ಕಿಕೊಡುವ ಹಾಗೂ ಅವರು ನೀಡುವ ಪುಡಿಗಾಸಿನಲ್ಲಿ ಹೊಟ್ಟೆ ತಣಿಸುವುದು. ಹರಿಯುವ ನೀರಿನಲ್ಲ್ಲಿ ಈಜುವುದು, ರಸ್ತೆ ಬದಿಯಲ್ಲಿ ವಡೆ ಮಾರುವ ಅಣ್ಣಿಯೊಂದಿಗೆ ಸ್ನೇಹ. ಆಕೆ ವಡೆ ನೀಡದಿದ್ದರೆ ಅವಳ ಕಾಲ ಸಂದಿಯೊಳಗೆ ನುಗ್ಗಿ ಆಕೆಗೆ ಗೊತ್ತಾಗದ ಹಾಗೆ ವಡೆ ಗುಳುಂ!

ರಾತ್ರಿ ವೇಳೆ ಬಸ್ ಸ್ಟಾಂಡ್‌ನಲ್ಲಿ ನಿದ್ರೆ.

ಅವರು ಅಪ್ಪಂದಿರಿಲ್ಲದ ಮಕ್ಕಳಂತೆ. ಅದಕ್ಕೆ ಅವರ ಅಮ್ಮಂದಿರಿಗೆ ಯಾರೂ ಮನೆ ಬಾಡಿಗೆಗೆ ನೀಡುವುದಿಲ್ಲವಂತೆ. ಅದಕ್ಕೆ ಅವರ ಅಮ್ಮಂದಿರು ರಾತ್ರಿಯ ವೇಳೆ ಮನೆ ಸೇರುವುದಿಲ್ಲವಂತೆ. ಹಗಲು ಮಾತ್ರ ಕಾಣುತ್ತಿದ್ದ ತಾಯಂದಿರು ಈಗ ಕಾಣದಾದರಂತೆ.

ಆ ಮಕ್ಕಳಿಗೆ ಇಲ್ಲಿ ಜಾಗ ಬೇಕು ಅಂದರು. Done!

ಅವರು ನಮ್ಮವರಾದರು. ಆದರೆ ಅವರಿಗೆ ಒಮ್ಮಮ್ಮೆ ಅವರ ಮೈದಾನ, ನದಿ, ವಡೆ ಅಣ್ಣಿ ನೆನಪಾಗಿ ಮನೆ ಬಿಟ್ಟು ಹೋಗುತ್ತಿದ್ದರು. ನಾವು ಅವರನ್ನು ಮತ್ತೆ ಕರೆತರುತ್ತಿದ್ದೆವು. ಆ ಮಕ್ಕಳ ಮನೆ ಸದಾ ಜೀವಂತವಾಗಿ ಇರುತ್ತಿತ್ತು.

ಅಲ್ಲಿ ಎಲ್ಲಾ ದೇವರು, ಎಲ್ಲಾ ಹಬ್ಬಗಳು ನಡೆಯುತ್ತಿತ್ತು.

ಮಕ್ಕಳಿಗೆ ನಾನು ನಮ್ಮ ಹೂವಿನ ತೋಟದಿಂದ ಹೂವು ಕೀಳಬಾರದೆನ್ನುತ್ತಿದ್ದೆ. ಆದರೆ ಅವರು ಶಾಲೆಯಿಂದ ಬರುವಾಗ ಹೂವಿನ ಗಿಡ ಕದ್ದು ತಂದು ನನ್ನ ಹೂವಿನ ಕುಂಡದಲ್ಲಿ ಇಟ್ಟು ಹೋಗುತ್ತಿದ್ದರು.!

ನನ್ನ ಮಗಳು ಅವರ ಮನೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಗಣಪತಿ ಹಬ್ಬ, ಸಡಗರ ನೋಡಿ ಬಂದು ನಮ್ಮ ಮನೆಯಲ್ಲಿ ದೇವರಿಲ್ಲವೆಂದು ಅಳುತ್ತಿದ್ದಳು.

ನಾವು ಮಕ್ಕಳೊಂದಿಗೆ ಸೇರಿ ಆ ಮನೆಯ ಸುತ್ತ ಕಾಡು ಕಡಿಯ ತೊಡಗಿದೆವು. ಮಣ್ಣು ಕೆರೆದರೆ ಹಾವಿನ ಮರಿಗಳು. ಗೋಡೆ ಕೆರೆದರೆ ಹೆಗ್ಗಣದ ರಾಶಿ.

 ಅಡುಗೆ ಮನೆಯ ಬೆಚ್ಚಗಿನ ಕುಕ್ಕರಿನ ಮೇಲೆ ಬಿಸಿ ಅನುಭವಿಸುತ್ತಾ ಸುತ್ತಿ ಮಲಗಿರುವ ಕೇರೆ ಹಾವು!

ನನ್ನ ಆಫೀಸ್ ರೂಮ್ ಒಳಗೆ ಅಚಾನಕ್ ಆಗಿ ನುಗ್ಗುವ ಹಾವು.! ಹಾವು, ಹಲ್ಲಿ, ಪಕ್ಷಿ, ಗಿಡ, ಮರ ಕಂಡರೆ ಕಣ್ಣು ಮಿಟುಕಿಸುವ ಹೆಚ್ಚಾಗಿ ಇರುವ ಅಲ್ಲಿನ ಆದಿವಾಸಿ ಮಕ್ಕಳು. ಮಕ್ಕಳು ಕಾಣೆಯಾದರೆ ನಾವು ನೆಲದಲ್ಲಿ ಅವರನ್ನು ಹುಡುಕುತ್ತಿರಲಿಲ್ಲ. ಮೊದಲು ಮರ ನೋಡುತ್ತಿದ್ದೆವು. ನಂತರ ಪೊದೆ!

ಸಣ್ಣ ಸಣ್ಣ ವಿಷಯಕ್ಕೂ ದೊಡ್ಡ ಸಂಭ್ರಮವಿತ್ತು!

ಮಗಳನ್ನು ಮುದ್ದು ಮಾಡುವಾಗ ಅವರ ಮುಖ ಸಣ್ಣಗಾಗುತ್ತಿತ್ತು. ಅವರನ್ನು ಹತ್ತಿರ ಮಾಡುವಾಗ ಅವಳಿಗೆ ಅಭದ್ರತೆ ಕಾಡುತ್ತಿತ್ತು.

ಈಗ ಅವರೂ ದೊಡ್ಡವರಾಗಿದ್ದಾರೆ. ಹಾಗೆ ಅವಳೂ..

ಈಗ ಅವರು ಕೇಳುತ್ತಿದ್ದಾರೆ ನೀವು ನಮ್ಮನ್ನು ಮಾತ್ರ ಜತನದಿಂದ ನೋಡಿಕೊಂಡಿರಿ. ನಾವೀಗ ದೊಡ್ಡವರು. ಆದರೆ ಮತ್ತೆ ಅನಾಥರು.

ಯಾರಾದರೂ ನಮ್ಮ ತಾಯಂದಿರನ್ನು ಉಳಿಸಿದ್ದರೆ ನಾವೀಗ ಮತ್ತೆ ಅನಾಥರಾಗಿರುತ್ತಿರಲಿಲ್ಲ ಅಂತ.

ಮಗಳಿಗೆ ಪ್ರಪಂಚದ ಅರಿವು ಸ್ವಲ್ಪ ಜಾಸ್ತಿಯೇ ಆಗುತ್ತಿದೆ. ವಯಸ್ಸಿಗೆ ಮೀರಿದ ಅರಿವು. ಮೌನವಾಗುತ್ತಾಳೆ. ಧೃತಿಗೆಡುತ್ತಾಳೆ. ಒಮ್ಮಾಮ್ಮೆ ಸಿಟ್ಟನ್ನು ಹಾಗೆಯೇ ಎಲ್ಲರ ಮುಂದೆ.

ನಾನು ಸುಮ್ಮನೆ ಬರೆದಿಟ್ಟ ಸಾಲುಗಳನ್ನು ಓದಿಸುತ್ತಾಳೆ.

ಬದುಕಿನ ಆರ್ದ್ರತೆಯ ಬಟ್ಟಲನ್ನು ಹೊತ್ತು ನಡೆಯುತ್ತಿರುವ ಹೆಂಗಸರೇ..

ನೀವು ಇಲ್ಲಿಗೂ ಬಂದಿರಾ?

ನೀವು ಈ ಮಣ್ಣಿನಲ್ಲದವರೆಂದು

ಅವರು ನಿಮ್ಮ ಹೃದಯದಲ್ಲಿ ಬಿತ್ತಿ ಹೋದಲ್ಲಿಂದ

ನೀವು ಗುನುಗುನಿಸುತ್ತಿರುವ ಹಾಡು ನನಗೆ

ಪಾರಿವಾಳದ ದುಃಖದ ಗೀತೆಯಂತೆ ಕೇಳಿಸುತ್ತಿದೆ. 

Writer - ಮಮ್ತಾಝ್ ಇಸ್ಮಾಯಿಲ್

contributor

Editor - ಮಮ್ತಾಝ್ ಇಸ್ಮಾಯಿಲ್

contributor

Similar News