ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಆಗ್ರಹಿಸಿ ಬೆಳೆಗಾರರಿಂದ ಧರಣಿ

Update: 2021-01-28 16:38 GMT

ಚಿಕ್ಕಮಗಳೂರು, ಜ.28: ಅತಿವೃಷ್ಟಿ, ಅಕಾಲಿಕ ಮಳೆ, ಹವಾಮಾನ ವೈಫರೀತ್ಯ, ಬೆಲೆ ಏರಿಳಿತದ ಪರಿಣಾಮ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರು ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನೂ ಮರುಪಾವತಿ ಮಾಡಲಾಗುತ್ತಿಲ್ಲ. ಆದ್ದರಿಂದ ಬೆಳೆಗಾರರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು ಹಾಗೂ ಕಾಫಿಬೋರ್ಡ್‍ನ ವಿಸ್ತರಣಾ ಕಚೇರಿಗಳನ್ನು ಮುಚ್ಚಬಾರದೆಂದು ಆಗ್ರಹಿಸಿ ಗುರುವಾರ ಆಲ್ದೂರು ಕಾಫಿ ಬೆಳೆಗಾರರ ಸಂಘದ ವತಿಯಿಂದ ನಗರದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಯಿತು.

ಗುರುವಾರ ಬೆಳಗ್ಗೆ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಸಮಾವೇಶಗೊಂಡು ಆಲ್ದೂರು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ರಾಜ್ಯ, ಕೇಂದ್ರ ಸರಕಾರಗಳು ಮುಂದಾಗಬೇಕು. ಅಳಿವಿನಂಚಿನಲ್ಲಿರುವ ಕಾಫಿ ಉದ್ಯಮಕ್ಕೆ ಪುನಃಶ್ಚೇತನಕ್ಕೆ ಅಗತ್ಯಕ್ರಮಕೈಗೊಳ್ಳಬೇಕು. ಕಾಫಿ ಉದ್ಯಮವನ್ನು ಅಲವಂಬಿಸಿರುವ ಲಕ್ಷಾಂತರ ಕಾರ್ಮಿಕರ ಬದುಕಿಗೆ ಸರಕಾರಗಳು ಆಸರೆಯಾಗಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಆಲ್ದೂರು ಕಾಫಿ ಬೆಳೆಗಾರರ ಸಂಘದ ಮುಖಂಡರು, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹವಾಮಾನ ವೈಪರೀತ್ಯದ ಪರಿಣಾಮ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಾಗಿದ್ದು, ಕಾಫಿ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಕಾಫಿ ಬೆಳೆ ಮಣ್ಣು ಪಾಲಾಗಿರುವುದರಿಂದ ಬೆಳೆಗಾರರು ಕಾಫಿ ತೋಟಗಳ ನಿರ್ವಹಣೆಯನ್ನೂ ಮಾಡಲಾಗುತ್ತಿಲ್ಲ. ಇದರೊಂದಿಗೆ ಬೆಲೆ ಕುಸಿತ, ಗಿಡಗಳಿಗೆ ರೋಗಭಾದೆ, ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದಾಗಿ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಪರಿಣಾಮ ಕಟಾವು ಮಾಡಿದ್ದ ಕಾಫಿ ಬೆಳೆಯೂ ಕೊಚ್ಚಿಹೋಗಿದ್ದು, ಬೆಳೆಗಾರರ ಬದುಕು ಬೀದಿಗೆ ಬಂದಿದೆ ಎಂದ ಮುಖಂಡರು, ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಬೆಳೆಗಾರರು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಬೆಳೆ ನಷ್ಟದ ಪರಿಣಾಮ ಬೆಳೆಗಾರರು ಬ್ಯಾಂಕ್ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದಿರುವುದರಿಂದ ಬ್ಯಾಂಕ್ ಸಾಲ ಎನ್‍ಪಿಎ ಆಗುತ್ತಿದ್ದು, ಬ್ಯಾಂಕ್‍ಗಳು ನ್ಯಾಯಾಲಯಗಳ ಮೂಲಕ ನೋಟಿಸ್ ಜಾರಿ ಮಾಡುತ್ತಾ ಕಾಫಿ ತೋಟಗಳನ್ನೇ ಹರಾಜು ಹಾಕಲು ಮುಂದಾಗಿವೆ ಎಂದ ಮುಖಂಡರು, ಕಾಫಿ ಉದ್ಯಮ ಲಕ್ಷಾಂತರ ಜನರಿಗೆ ಬದುಕು ಕೊಟ್ಟಿದೆ, ಬೆಳೆಗಾರರು ಸಾವಿರಾರು ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. ಕಾಫಿ ಉದ್ಯಮದಿಂದ ದೇಶಕ್ಕೆ ಸಾವಿರಾರು ಕೋಟಿ ವಿದೇಶಿ ವಿನಿಮಯ ದೊರೆಯುತ್ತಿದೆ. ಇಷ್ಟಿದ್ದರೂ ಸಹ ಉದ್ಯಮದ ಉಳಿವಿಗೆ ಕೇಂದ್ರ ಮುಂದಾಗಿಲ್ಲ. ಕೇಂದ್ರ ಸರಕಾರ ಹತ್ತು ಹಲವು ಸಮಸ್ಯೆಗಳಿಂದ ಸೋತು ಸುಣ್ಣವಾಗಿರುವ ಕಾಫಿ ಬೆಳೆಗಾರರ ಕೈ ಹಿಡಿಯದಿದ್ದಲ್ಲಿ ಅವರು ಕಾಫಿ ಕೃಷಿಯನ್ನೇ ಕೈಬಿಡಬೇಕಾಗುತ್ತದೆ. ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯಗಳು ದೇಶದ ಜನತೆಯ ಸ್ವತ್ತು. ಅದನ್ನು ಮಾರಲು ಅಥವಾ ಮುಚ್ಚಲು ಯಾವ ಸರಕಾರಗಳಿಗೂ ಅಧಿಕಾರವಿಲ್ಲ. ಆದರೆ ಕೇಂದ್ರ ಸರಕಾರ ಜಿಲ್ಲೆಯ ವಿವಿಧ ಹೋಬಳಿ ಕೇಂದ್ರಗಳಲ್ಲಿರುವ ಕಾಫಿ ವಿಸ್ತರಣಾ ಕಚೇರಿಗಳನ್ನು ಮುಚ್ಚಲು ಮುಂದಾಗಿದ್ದು, ಈ ಕಚೇರಿಗಳು ಕಾಫಿ ಬೆಳೆಗಾರರ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ಕಾಫಿ ಉದ್ಯಮದ ಅಭಿವೃದ್ಧಿಗೆ ಸಹಕಾರ ನೀಡುತ್ತಿತ್ತು. ಈ ಕಚೇರಿಗಳ ಮೂಲಕ ಕಾಫಿ ಸಂಶೋಧನೆ, ಸಬ್ಸಿಡಿ, ಕಾರ್ಮಿಕರ ಮಕ್ಕಳಿಗೆ ಸಹಾಧನದಂತಹ ಸೌಲಭ್ಯಗಳು ದೊರೆಯುತ್ತಿತ್ತು. ಆದರೆ ಕೇಂದ್ರ ಸರಕಾರ ಕಾಫಿ ಬೋರ್ಡ್‍ನ ಅಧೀನ ಕಚೇರಿಗಳನ್ನು ಮುಚ್ಚಲು ಮುಂದಾಗಿರುವುದು ದುರಾದೃಷ್ಟಕರ ಎಂದ ಅವರು, ಸರಕಾರ ಕಾಫಿಬೋರ್ಡ್‍ನ ಅಧೀನ ಕಚೇರಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಮುಚ್ಚಲು ಮುಂದಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಎಲ್ಲ ಸಮಸ್ಯೆಗಳ ಮಧ್ಯೆ ಕಾಫಿ ಬೆಳೆಗಾರರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ತಲೆನೋವಾಗಿದ್ದು, ಕಾಡಾನೆ ಹಾವಳಿಯಿಂದಾಗಿ ಕಾಫಿ ತೋಟಗಳಿಗೆ ಭಾರೀ ಹಾನಿಯಾಗುತ್ತಿರುವುದಲ್ಲದೇ ಕಾಫಿ ಬೆಳೆಗಾರರ ಪ್ರಾಣಕ್ಕೂ ಕುತ್ತಾಗಿದೆ. ಕಾಡಾನೆಗಳ ಹಾವಳಿ ತಪ್ಪಿಸಲು ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಬೇಕು ಎಂದು ಆಗ್ರಹಿಸಿದ ಬೆಳೆಗಾರರು, ಕಾಫಿ ಬೆಳೆಗಾರರು ಬೆಳೆದ ಸಿಲ್ವರ್ ಮರಗಳ ಕಟಾವು ಸಂದರ್ಭ ಮರಗಳನ್ನು ಖರೀದಿಸುವವರು ಮರಗಳ ಗುಣಮಟ್ಟದ ನೆಪವೊಡ್ಡಿ ಉತ್ತಮ ಮರಗಳಿಗೂ ಶೇ.10%ರಷ್ಟು ಹಣ ಕಡಿಮೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಹಣವನ್ನು ಕಡಿತ ಮಾಡದಂತೆ ಮಾಲಕರಿಗೆ ಆದೇಶ ನೀಡಬೇಕೆಂದು ಇದೇ ವೇಳೆ ಒತ್ತಾಯಿಸಿದರು.

ಧರಣಿ ಬಳಿಕ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಅವರನ್ನು ಭೇಟಿಯಾದ ಬೆಳೆಗಾರರು ಈ ಸಂಬಂಧ ಸಮಸ್ಯೆ ಹೇಳಿಕೊಂಡು ಮನವಿಯನ್ನು ಸಲ್ಲಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್.ಸುರೇಶ್, ಕಾರ್ಯದರ್ಶಿ ಲವ, ಮಾಜಿ ಅಧ್ಯಕ್ಷ ಡಿ.ಎಂ.ವಿಜಯ್, ಮುಖಂಡರಾದ ಕೃಷ್ಣೇಗೌಡ, ರಾಜೀವ್, ತೌಸಿಫ್, ರವಿ, ಸೂರಪ್ಪನಹಳ್ಳಿ ಅಶೋಕ್, ಜಿಪಂ ಮಾಜಿ ಸದಸ್ಯೆ ಸವಿತಾ ರಮೇಶ್ ಸೇರಿದಂತೆ ನೂರಾರು ಕಾಫಿ ಬೆಳೆಗಾರರು ಭಾಗವಹಿಸಿದ್ದರು.

ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಬೆಳೆ ನಷ್ಟವಾದರೂ, ಕಾಫಿ ಬೆಳೆಗೆ ಉತ್ತಮ ಬೆಲೆ ಇಲ್ಲದಿದ್ದರೂ ಬೆಳೆಗಾರರು ಈ ಹಿಂದೆ ಕಾಳು ಮೆಣಸು ಬೆಳೆಗೆ ಇದ್ದ 600-800 ರೂ. ಬೆಲೆ ನಂಬಿಕೊಂಡು ಬದುಕುತ್ತಿದ್ದರು. ಆದರೆ ಕೇಂದ್ರ ಸರಕಾರದ ವಾಣಿಜ್ಯ ನೀತಿಯ ಪರಿಣಾಮ ಕಾಳು ಮೆಣಸಿಗೆ ಸದ್ಯ 300 ರೂ. ಬೆಲೆ ಇದ್ದು, ಉತ್ತಮ ಬೆಲೆ ಇಲ್ಲದಿರುವುದರಿಂದ ಕಾಫಿ ಬೆಳೆಗಾರರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರಕಾರ ಶ್ರೀಲಂಕಾ, ವಿಯಾಟಾಂನಿಂದ ಕಳಪೆ ಗುಣಮಟ್ಟದ ಕಾಳುಮೆಣಸು ಆಮದು ಮಾಡಿಕೊಂಡು ಅದಕ್ಕೆ ದೇಶದಲ್ಲಿ ಬೆಳೆದ ಉತ್ತಮ ಗುಣಮಟ್ಟದ ಕಾಳು ಮೆಣಸನ್ನು ಬೆರಕೆ ಮಾಡಿ ಐರೋಪ್ಯ ದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ ಕಾಳು ಮೆಣಸಿಗೆ ಉತ್ತಮ ಧಾರಣೆ ಸಿಗುತ್ತಿಲ್ಲ. ಈ ಸಂಬಂಧ ಕೇಂದ್ರ ವಾಣಿಜ್ಯ ಸಚಿವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 
- ಡಿ.ಎಂ.ವಿಜಯ್, ಕೆಜಿಎಫ್ ಮಾಜಿ ಅಧ್ಯಕ್ಷ

ಕಾಂಗ್ರೆಸ್ ನೇತೃತ್ವದ ಹಿಂದಿನ ಕೇಂದ್ರ ಸರಕಾರ ಕಾಫಿ ಬೆಳೆಗಾರರಿಗೆ ಹಲವು ಪ್ಯಾಕೇಜ್‍ಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರಕಾರ ಕಾಫಿ ಉದ್ಯಮ ಅವನತಿಯ ಹಾದಿ ಹಿಡಿದಿದ್ದರೂ ಬೆಳೆಗಾರರತ್ತ ತಿರುಗಿ ನೋಡುತ್ತಿಲ್ಲ. ಅಂಬಾನಿ, ಅದಾನಿ ಸೇರಿದಂತೆ ಉದ್ಯಮಿಗಳ ಸಾಲ ಮನ್ನಾ ಮಾಡಿ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಕೇಂದ್ರ ಸರಕಾರ ಅನೇಕ ಬಾರಿ ಮನವಿ ಮಾಡಿದರೂ ಬೆಳೆಗಾರರ ಸಾಲ ಮನ್ನಾ ಮಾಡುತ್ತಿಲ್ಲ. ಅದರ ಬದಲಿಗೆ ಅವರ ಜೀವನಾಡಿಯಾಗಿರುವ ಕಾಫಿ ಮಂಡಳಿಯನ್ನೇ ಮುಚ್ಚಲು ಮುಂದಾಗಿದೆ.
- ಸಿ.ಎಸ್.ಸುರೇಶ್, ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News