ಕೂಲಿ ಕಾರ್ಮಿಕನಿಗೆ ಢಿಕ್ಕಿ ಹೊಡೆದ ಬೈಕ್ ಸವಾರನಿಗೆ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2021-01-28 17:43 GMT

ಕಲಬುರಗಿ, ಜ.28: ಕೂಲಿ ಕೆಲಸಕ್ಕಾಗಿ ಕಲಬುರಗಿ ಜಿಲ್ಲೆಯ ಯಲಕಪಳ್ಳಿಯಿಂದ ಸುಲೇಪೇಟ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಬ್ಬರಲ್ಲಿ ಒಬ್ಬರಿಗೆ ಢಿಕ್ಕಿ ಹೊಡೆದು ಗಾಯಗೊಳಿಸಿದ ಬೈಕ್ ಸವಾರನಿಗೆ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಜೆಎಂಎಫ್‍ಸಿ ಕೋರ್ಟ್ ಏಳು ತಿಂಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಆದೇಶಿಸಿದೆ.

2016ರ ನ.17ರಂದು ಖತಲಪ್ಪಾ ಮತ್ತು ಸಂಬಣ್ಣಾ ಎಂಬುವವರು ಕೂಲಿ ಕೆಲಸಕ್ಕೆ ಎಂದು  ನಡೆದುಕೊಂಡು ಹೋಗುತ್ತಿರುವಾಗ ಯಲಕಪಳ್ಳಿಯಿಂದ ಸುಲೇಪೆಟ ಬರುವ ಮುಖ್ಯರಸ್ತೆ ಲಕ್ಷ್ಮಿ ಗುಡಿಯ ಹತ್ತಿರ ಬೈಕ್ ಸವಾರ ಯಲಕಪಳ್ಳಿ ಗ್ರಾಮದ ಚಿತ್ರಶೇಖರಯ್ಯ ಮಠಪತಿ ಎಂಬುವವರು ತಮ್ಮ ವಾಹನವನ್ನು ಅತಿವೇಗದಿಂದ ಚಲಾಯಿಸಿ ಖತಲಪ್ಪಾ ಎಂಬುವವರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಪ್ರಕರಣದ ತನಿಖೆ ಕೈಗೊಂಡ ಸುಲೇಪೆಟ್ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ವಕೀಲರ ವಾದ ಆಲಿಸಿದ ಜೆಎಂಎಫ್‍ಸಿ ನ್ಯಾಯಪೀಠ, ಆರೋಪಿ ಚಿತ್ರಶೇಖರಯ್ಯ ಮಠಪತಿ ಅವರಿಗೆ ಕಲಂ 304(ಎ) ಅಡಿ 6 ತಿಂಗಳ ಕಾರಾಗೃಹ ಶಿಕ್ಷೆ, ಕಲಂ 279ರಡಿ ಒಂದು ತಿಂಗಳ ಕಾಲ ಜೈಲು ಶಿಕ್ಷೆ, ಒಟ್ಟು 7 ತಿಂಗಳ ಜೈಲು ಹಾಗೂ 3500 ರೂ.ಗಳ ದಂಡ ತಪ್ಪಿದ್ದಲ್ಲಿ 45 ದಿನಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News