ಬಜೆಟ್: ಮುರಿದು ಬಿದ್ದ ಮನೆಗೆ ಸುಣ್ಣ ಬಳಿಯಲು ಸಿದ್ಧತೆ

Update: 2021-01-29 04:34 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿ ಮಂಡಿಸಲಾಗುವ ಮುಂಬರುವ ಕೇಂದ್ರ ಬಜೆಟ್ ಇದುವರೆಗಿನ ಬಜೆಟ್‌ಗಿಂತ ಹೆಚ್ಚಿನ ಮಹತ್ವವೆಂದು ಪರಿಗಣಿಸಲಾಗಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಎನ್‌ಪಿ), ಆದಾಯದಲ್ಲಿ ಭಾರೀ ಕುಸಿತವಾಗಿರುವ ಜೊತೆಗೆ, ಇತರ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತದಿಂದಾಗಿ ಒತ್ತಡದ ಪರಿಸ್ಥಿತಿಯಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಬಜೆಟ್ ಮಂಡಿಸುವುದು ಸುಲಭವಿಲ್ಲ. ಇದೊಂದು ರೀತಿಯಲ್ಲಿ, ಮುರಿದು ಬಿದ್ದ ಮನೆಗೆ ಸುಣ್ಣ ಬಳಿದು ಚಂದಗೊಳಿಸಿದಂತೆ. ಆದರೆ ಆಗ ಬೇಕಾಗಿರುವುದು, ಮುರಿದು ಬಿದ್ದ ಮನೆಯನ್ನು ಮತ್ತೆ ಎತ್ತಿ ನಿಲ್ಲಿಸುವುದು. ಆ ಕೆಲಸದಲ್ಲಿ ಬಜೆಟ್ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವ ಪ್ರಶ್ನೆ ದೇಶದ ಮುಂದಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕುಸಿದು ಕೂತಿರುವ ದೇಶವನ್ನು ಮೇಲೆತ್ತುವುದಕ್ಕಾಗಿ ಮೊದಲು ಜನಕಲ್ಯಾಣ ಯೋಜನೆಗಳ ಕಡೆಗೆ ಸರಕಾರ ಗಮನ ಹರಿಸಬೇಕಾಗುತ್ತದೆ. ಸಾಮಾಜಿಕ ವಲಯಗಳಿಗೆ ಅತ್ಯಧಿಕ ಹಣವನ್ನು ಹೂಡಬೇಕಾಗುತ್ತದೆ. ಆದರೆ, ಆರ್ಥಿಕವಾಗಿ ಜರ್ಜರಿತವಾಗಿರುವ ದೇಶ, ಹಣವನ್ನು ಯಾವ ಮೂಲದಿಂದ ಹೊಂದಿಸುತ್ತದೆ ಎನ್ನುವುದು ಇನ್ನೊಂದು ಪ್ರಶ್ನೆ. ಈ ಸವಾಲನ್ನು ವಿತ್ತ ಸಚಿವರು ಹೇಗೆ ನಿಭಾಯಿಸುತ್ತಾರೆ ಎನ್ನುವುದರಲ್ಲಿ ಬಜೆಟ್ ಸೋಲು-ಗೆಲುವುಗಳಿವೆ.

ಕೊರೋನೋತ್ತರ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ಶಾಲೆಗಳು ಬಹುತೇಕ ಮುಚ್ಚಿವೆ. ಆನ್‌ಲೈನ್ ಶಿಕ್ಷಣ ಬಡವರು ಮತ್ತು ಉಳ್ಳವರ ನಡುವೆ ಬಿರುಕನ್ನು ಸೃಷ್ಟಿಸಿದೆ. ಗ್ರಾಮೀಣ ಉದ್ದಿಮೆಗಳು ನೋಟುನಿಷೇಧದ ಹೊತ್ತಿನಲ್ಲೇ ಸರ್ವನಾಶವಾಗಿದ್ದವು. ಲಾಕ್‌ಡೌನ್ ಅವುಗಳ ಶವಪೆಟ್ಟಿಗೆಗಳಿಗೆ ಕೊನೆಯ ಮೊಳೆ ಹೊಡೆಯಿತು. ಸಾವಿರಾರು ಉದ್ದಿಮೆಗಳು ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಿವೆ. ಬಡತನದ ಪ್ರಮಾಣ ತಾರಕಕ್ಕೇರಿದೆ. ಪೆಟ್ರೋಲ್ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಿದ್ದು ಸರಕಾರ ಮಾತ್ರ ಧೃತರಾಷ್ಟ್ರನಂತೆ ವರ್ತಿಸುತ್ತಿದೆ. ಅಂತರ್‌ರಾಷ್ಟ್ರೀಯ ತೈಲ ಬೆಲೆ ಇಳಿಕೆಯಾಗಿದ್ದರೂ ಭಾರತೀಯರು ಪೆಟ್ರೋಲ್‌ಗೆ ಅಧಿಕ ದುಡ್ಡನ್ನು ತೆರುತ್ತಾ ಬರುತ್ತಿದ್ದಾರೆ. ಈ ಲಾಭವನ್ನು ಅನೈತಿಕವಾಗಿ ಸರಕಾರ ತನ್ನದಾಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಪಿಎಂ ಕೇರ್ಸ್‌ ಫಂಡ್‌ನ ಮೂಲಕವೂ ವಿವಿಧ ವಲಯಗಳಿಂದ ಸರಕಾರ ಹಣವನ್ನು ತುಂಬಿಸಿಕೊಂಡಿದೆ. ಈ ಎಲ್ಲ ಹಣ, ಈ ದೇಶದ ವಿವಿಧ ಸಾಮಾಜಿಕ ವಲಯಗಳಿಗೆ ಹಂಚಿಹೋಗಬೇಕಾಗಿದೆ. ಕಾರಣದಿಂದ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕಾಗಿದೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನುದಾನ ಗಮನಾರ್ಹವಾಗಿ ಹೆಚ್ಚಿಸಬೇಕಾಗುತ್ತದೆ. ಜೊತೆಗೆ, ಕೃಷಿ ಮತ್ತು ಎಂನರೇಗಾ( ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಕ್ಷೇತ್ರಕ್ಕೂ ಅನುದಾನ ಹೆಚ್ಚಿಸಬೇಕಾಗುತ್ತದೆ. ಕೊರೋನದಿಂದ ತತ್ತರಿಸಿರುವ ಗ್ರಾಮೀಣ ರೈತರು ಮತ್ತು ಕಾರ್ಮಿಕರ ಸ್ಥಿತಿಯನ್ನು ಮೇಲೆತ್ತಲು ಇದು ಅತ್ಯಗತ್ಯ.ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಬಡ ಮತ್ತು ದುರ್ಬಲ ವರ್ಗದವರಿಗೆ, ಅಸಹಾಯಕರಿಗೆ ನೀಡಲಾಗುವ ಪೆನ್ಷನ್ ಯೋಜನೆಗೆ ಹಲವು ವರ್ಷಗಳಿಂದ ಕಡಿಮೆ ಅನುದಾನ ದೊರಕುತ್ತಿದ್ದು ಈಗಿನ ಕಷ್ಟದ ಸಂದರ್ಭದಲ್ಲಿ ಈ ಮೊತ್ತವನ್ನೂ ಹೆಚ್ಚಿಸುವ ಅಗತ್ಯವಿದೆ. ಪರಿಶಿಷ್ಟ ಜಾತಿ/ಸಮುದಾಯ, ಬುಡಕಟ್ಟು ಸಮುದಾಯ ಹಾಗೂ ಅಲ್ಪಸಂಖ್ಯಾತರ ಕ್ಷೇಮಾಭ್ಯುದಯ ಯೋಜನೆಗಳಿಗೂ ಹೆಚ್ಚಿನ ಅನುದಾನದ ಅಗತ್ಯವಿದೆ. ಈಗಾಗಲೇ ಅನುದಾನಗಳ ಕೊರತೆಯಿಂದಾಗಿ ದಲಿತರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟ ಯೋಜನೆಗಳಿಗೆ ಒಂದೊಂದಾಗಿ ಕತ್ತರಿ ಬೀಳುತ್ತಿವೆ. ಜೊತೆಗೆ ನಿರಂತರ ನಿರ್ಲಕ್ಷಕ್ಕೆ ಒಳಗಾಗಿರುವ ಪರಿಸರ ಮಾಲಿನ್ಯ ವಿಷಯವನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿ, ಹವಾಮಾನ ಬದಲಾವಣೆ, ವಾಯು ಮತ್ತು ನೀರಿನ ಮಾಲಿನ್ಯ ತಡೆಗಟ್ಟುವ ಯೋಜನೆಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ.

ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ ಹಲವು ಬಾರಿ ಒತ್ತಿ ಹೇಳಲಾಗಿದೆ. ಆದರೆ ಹೆಚ್ಚುವರಿ ಅನುದಾನವನ್ನು ಖರ್ಚು ಮಾಡುವ ಬಗ್ಗೆ ಜಾಗ್ರತೆ ವಹಿಸಬೇಕು. ಈ ದೇಶದಲ್ಲಿ ಕೆರೆಯಲ್ಲಿರುವ ಮೀನುಗಳಿಗೆಂದು ಆಹಾರವನ್ನು ಸುರಿಯಲಾಗುತ್ತದೆಯಾದರೂ, ಅವುಗಳನ್ನು ಕಬಳಿಸುವುದು ಮೊಸಳೆಗಳು. ಆರೋಗ್ಯ ವಿಮೆಗಳಿಗೆ ಸಂಬಂಧಿಸಿ ಇದು ಅಕ್ಷರಶಃ ನಿಜ. ಜನಸಾಮಾನ್ಯರಿಗೆಂದು ಮೀಸಲಿಟ್ಟ ಆರೋಗ್ಯದ ಹಣವನ್ನು ಕಾರ್ಪೊರೇಟ್ ಆಸ್ಪತ್ರೆಗಳು ನುಂಗಿದ್ದೇ ಹೆಚ್ಚು. ಸಾಮಾಜಿಕ ಭದ್ರತೆಯ ಯೋಜನೆಗಳಿಗೆ ಒಟ್ಟು ಅನುದಾನದ ಬಗ್ಗೆ ಮಾತ್ರ ಚರ್ಚೆ ನಡೆಯುತ್ತದೆ. ಒಟ್ಟು ಅನುದಾನವನ್ನು ವಿವಿಧ ಯೋಜನೆಗಳಿಗೆ ಹಂಚುವ ಕುರಿತ ವಿವರದ ಅಗತ್ಯವಿದೆ. ಹಲವು ಕ್ಷೇತ್ರಗಳಿಗೆ ಹೆಚ್ಚಿನ ಅನುದಾನದ ಬೇಡಿಕೆ ಇರುವಾಗ, ಹೆಚ್ಚುವರಿ ವೆಚ್ಚವನ್ನು ಸರಿದೂಗಿಸುವ ಸಂಪನ್ಮೂಲ ಕ್ರೋಡೀಕರಣದ ಪ್ರಶ್ನೆ ಮೂಡುತ್ತದೆ. ಈ ಆರ್ಥಿಕ ವರ್ಷದಲ್ಲಿ ಅಸಮಾನತೆ ಹೆಚ್ಚಿರುವುದನ್ನು ತೋರಿಸುವ ಹಲವು ನಿದರ್ಶನಗಳಿವೆ. ಈ ಅಸಮಾನತೆಯನ್ನು ಕಡಿಮೆಗೊಳಿಸುವ ಮತ್ತು ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣಕ್ಕೆ ಗಮನ ನೀಡಬೇಕು. ಕೊರೋನ ಸೋಂಕಿನಂತಹ ಅನಿರೀಕ್ಷಿತ ಸಂದರ್ಭದಲ್ಲೂ ದೇಶದಲ್ಲಿ ಹಲವರು ಅಪಾರ ಸಂಪತ್ತು ಗಳಿಸಿರುವ ನಿದರ್ಶನಗಳಿವೆ. ಆದ್ದರಿಂದ ಶ್ರೀಮಂತ ವ್ಯಕ್ತಿಗಳಿಗೆ, ಅದರಲ್ಲೂ ಜನಸಾಮಾನ್ಯರು ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಅಸಾಧಾರಣ ಮಟ್ಟದ ಸಂಪತ್ತು ಕ್ರೋಡೀಕರಿಸಿದ ಬಿಲಿಯನೇರ್ ಹಾಗೂ ಉದ್ಯಮಪತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಲು ಸರಕಾರ ಹಿಂಜರಿಯಬಾರದು.

ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ಹೊರೆಯಾಗದಂತೆ, ಶ್ರೀಮಂತ, ಬಿಲಿಯಾಧಿಪತಿಗಳನ್ನು ಗುರಿಯಾಗಿಸಿ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶವಿದೆ. ಈ ಕುರಿತು ಜನಸ್ನೇಹಿ ಚಿಂತಕ ಸರಕಾರಿ ಅಧಿಕಾರಿಗಳು ನೀಡಿರುವ ಸಲಹೆಯನ್ನು ಸರಕಾರ ಸದುಪಯೋಗಪಡಿಸಿಕೊಳ್ಳಬೇಕು. ಆರ್ಥಿಕ ಹಿಂಜರಿತದ ಬಳಿಕ ಆರ್ಥಿಕತೆಯ ಪುನಶ್ಚೇತನಕ್ಕೆ ( ಬಡ ಮತ್ತು ದುರ್ಬಲ ವರ್ಗದ ಜನರಿಗೆ ಹೆಚ್ಚಿನ ಖರೀದಿ ಶಕ್ತಿ ಒದಗಿಸುವ ಮೂಲಕ) ಈ ಬಜೆಟ್ ಮೂಲಕ ಸರಕಾರ ದೃಢವಾದ ಹೆಜ್ಜೆ ಇರಿಸಬೇಕಾಗಿದೆ. ಜೊತೆಗೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಕ್ಷೇತ್ರಗಳ ಸಾಮರ್ಥ್ಯ ವರ್ಧನೆಗೆ, ಅಸಮಾನತೆ ಕಡಿಮೆಯಾಗುವುದನ್ನು ಖಾತರಿಪಡಿಸುವುದು ಸದ್ಯದ ಅಗತ್ಯವಾಗಿದೆ.

ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಕಾನೂನು ಸುವ್ಯವಸ್ಥೆಗಳು ಸರಕಾರದ ನೀತಿಗಳಿಂದಾಗಿಯೇ ಅಸ್ತವ್ಯಸ್ತಗೊಂಡಿವೆ. ಪರಿಣಾಮವಾಗಿ ಪೊಲೀಸರು ಮತ್ತು ಸೇನೆಗಳನ್ನು ಜನರ ವಿರುದ್ಧ ಭಾರೀ ಪ್ರಮಾಣದಲ್ಲಿ ಬಳಸಲಾಗಿದೆ. ಕಾಶ್ಮೀರದ ಬೆಳವಣಿಗೆ, ಸಿಎಎ ಕಾಯ್ದೆ, ರೈತ ವಿರೋಧಿ ಕಾನೂನು...ಇವೆಲ್ಲವುಗಳಿಂದ ದೇಶಕ್ಕಾದ ನಷ್ಟ ತುಂಬಲಾಗದ್ದು. ಗಡಿ ಭಾಗದಲ್ಲಿ ಸರಕಾರದ ವಿಫಲ ವಿದೇಶಾಂಗ ನೀತಿಗಾಗಿಯೂ ದೇಶ ಬೆಲೆ ತೆರುತ್ತಿದೆ. ಸರಕಾರದ ತಪ್ಪಿಗಾಗಿ ದೇಶ ಭಾರೀ ತಂಡ ತೆರುತ್ತಿದೆ. ಜೊತೆಗೆ, ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿ ಹಾಕುವುದಕ್ಕಾಗಿ ಗೋ ಹತ್ಯೆ ನಿಷೇಧದಂತಹ ಗೊಂದಲಕಾರಿ ಕಾನೂನನ್ನು ಜಾರಿಗೊಳಿಸಿರುವುದರಿಂದ, ಗ್ರಾಮೀಣ ಪ್ರದೇಶದ ಹೈನೋದ್ಯಮಕ್ಕೆ ಭಾರೀ ಏಟು ಬಿದ್ದಿದೆ. ರೈತರು ತಮ್ಮ ಜಾನುವಾರುಗಳ ಮೇಲಿನ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರೊಂದಿಗೆ ರಾಮಮಂದಿರ, ಆ ಸ್ಮಾರಕ, ಈ ಸ್ಮಾರಕ ಎಂದು ಬೊಕ್ಕಸದ ಹಣವನ್ನು ಅನುತ್ಪಾದಕ ಯೋಜನೆಗಳಿಗೆ ಚೆಲ್ಲುತ್ತಿವೆ. ಇವೆಲ್ಲಕ್ಕೂ ಒಂದಿಷ್ಟು ವಿರಾಮ ಹಾಕಿ, ಈ ದೇಶದ ಶಿಕ್ಷಣ, ಆರೋಗ್ಯ, ಆಹಾರ ಮೊದಲಾದ ವಿಷಯಗಳ ಕಡೆಗೆ ಸರಕಾರ ಗಮನ ಕೊಡಬೇಕಾಗಿದೆ. ಇದನ್ನು ಮಾಡದೆ, ಬಜೆಟ್‌ನ ಹೆಸರಲ್ಲಿ ಬಣ್ಣ ಬಣ್ಣದ ತುತ್ತೂರಿಗಳನ್ನು ಹಂಚಿದರೆ ಒಂದು ಮಳೆಗೇ ಅದರ ಬಣ್ಣ ಬಯಲಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News