ರಾಜ್ಯ ಸರಕಾರದ ಆದೇಶದ ಮೇರೆಗೆ ಗೋರಕ್ಷಕರನ್ನು ಒಳಗೊಂಡಿದ್ದ 21 ಕೋಮು ಹಿಂಸೆ ಪ್ರಕರಣಗಳನ್ನು ಕೈಬಿಟ್ಟ ನ್ಯಾಯಾಲಯಗಳು

Update: 2021-01-29 17:46 GMT

ಬೆಂಗಳೂರು,ಜ.29: ರಾಜ್ಯ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ವಿಚಾರಣಾ ನ್ಯಾಯಾಲಯಗಳು 2020 ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕೋಮು ಹಿಂಸಾಚಾರ ಮತ್ತು ‘ಗೋ ರಕ್ಷಣೆ ’ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ 21 ಪ್ರಕರಣಗಳನ್ನು ಕೈಬಿಟ್ಟಿವೆ. ಸರಕಾರದ ಕ್ರಮದಿಂದಾಗಿ ಮೈಸೂರು ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ ಸಿಂಹ, ಹಿಂದು ಗುಂಪುಗಳ 206 ಕಾರ್ಯಕರ್ತರು ಮತ್ತು 106 ಮುಸ್ಲಿಮರಿಗೆ ಲಾಭವಾಗಿದೆ ಎಂದು indianexpress.com ವರದಿ ಮಾಡಿದೆ.

‘ಚುನಾಯಿತ ಜನಪ್ರತಿನಿಧಿಗಳು ಮತ್ತು ಇತರರ ’ ಮನವಿಗಳ ಮೇರೆಗೆ 62 ಪ್ರಕರಣಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಕಾನೂನು ಕ್ರಮವನ್ನು ನಿಲ್ಲಿಸುವಂತೆ 2020,ಆ.31ರ ಸರಕಾರಿ ಆದೇಶದ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ಕೈಬಿಡಲು ನ್ಯಾಯಾಲಯಗಳು ನಿರ್ಧರಿಸಿದ್ದವು.

ಈ ಪ್ರಕರಣಗಳು 2014 ಮತ್ತು 2019ರ ನಡುವೆ ಸಂಭವಿಸಿದ್ದ ವಿವಿಧ ಕೋಮು ಘಟನೆಗಳಿಗೆ ಸಂಬಂಧಿಸಿದ್ದು,ಡಿಜಿಪಿ,ಪ್ರಾಸಿಕ್ಯೂಷನ್ ನಿರ್ದೇಶಕರು ಮತ್ತು ಕಾನೂನು ಇಲಾಖೆ ಸೇರಿದಂತೆ ವಿವಿಧ ಸರಕಾರಿ ಏಜೆನ್ಸಿಗಳು ಪ್ರಕರಣಗಳನ್ನು ಹಿಂದೆಗೆದುಕೊಳ್ಳದಂತೆ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೆ ಸ್ವಷ್ಟ ಸಲಹೆಗಳನ್ನು ನೀಡಿದ್ದವು.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಸರಕಾರದ ಆದೇಶದ ಮೇರೆಗೆ ನ್ಯಾಯಾಲಯಗಳು ಪ್ರಕರಣಗಳನ್ನು ಕೈಬಿಟ್ಟಿದ್ದ ವಿಷಯ ಬೆಳಕಿಗೆ ಬಂದಿತ್ತು. ಸಚಿವರು ಮತ್ತು ಚುನಾಯಿತ ಜನಪ್ರತಿನಿಧಿಗಳ ಮನವಿಗಳ ಮೇರೆಗೆ ಪ್ರಕರಣಗಳನ್ನು ಕೈಬಿಟ್ಟ ಕ್ರಮದ ತಾರ್ಕಿಕತೆಯನ್ನು ಪಿಯುಸಿಎಲ್ ತನ್ನ ಅರ್ಜಿಯಲ್ಲಿ ಪ್ರಶ್ನಿಸಿತ್ತು.

ಅರ್ಜಿಯ ವಿಚಾರಣೆಯನ್ನು ನಡೆಸಿದ ಉಚ್ಚ ನ್ಯಾಯಾಲಯವು ಪ್ರಕರಣಗಳಲ್ಲಿ ಕಾನೂನುಕ್ರಮಗಳನ್ನು ನಿಲ್ಲಿಸದಂತೆ 2020,ಡಿ.21ರಂದು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು. ತಾನು ಈ ಹಿಂದೆ ಕೇಳಿದ್ದ ಪಾಲನಾ ವರದಿಯನ್ನು ಸರಕಾರವು ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿ ಅದು ಸರಕಾರಿ ಆದೇಶಕ್ಕೆ ತಡೆಯಾಜ್ಞೆಯನ್ನು ವಿಧಿಸಿತ್ತು. ಸರಕಾರಿ ಅಭಿಯೋಜಕರು ಮತ್ತು ಪ್ರಕರಣಗಳನ್ನು ಕೈಬಿಟ್ಟಿದ್ದ ನ್ಯಾಯಾಲಯಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು, ಸರಕಾರಿ ಅಭಿಯೋಜಕರು ಅಂಚೆಪೆಟ್ಟಿಗೆಯಂತೆ ಅಥವಾ ಸರಕಾರದ ಆದೇಶಗಳ ಮೇರೆಗೆ ಕಾರ್ಯಾಚರಿಸುವಂತಿಲ್ಲ ಮತ್ತು ಅವರು ನ್ಯಾಯಾಲಯದ ಅಧಿಕಾರಿಯೂ ಆಗಿರುವುದರಿಂದ ವಸ್ತುನಿಷ್ಠವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿತ್ತು.

ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ಇಂತಹ ನಿರ್ಧಾರಕ್ಕೆ ಯಾವ ನ್ಯಾಯಾಲಯವೂ ಬದ್ಧವಲ್ಲ. ಸಿಆರ್‌ಪಿಸಿಯ ಕಲಂ 321ರಡಿ ಅರ್ಜಿ ಸಲ್ಲಿಸಿದರೂ ಪ್ರಕರಣವು ಹಿಂದೆಗೆದುಕೊಳ್ಳಲು ಅರ್ಹವಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ ಮತ್ತು ಕೋರಿಕೆಯನ್ನು ತಿರಸ್ಕರಿಸಲು ಪೂರ್ಣ ಅಧಿಕಾರವನ್ನು ಅವು ಹೊಂದಿವೆ ಎಂದು ಅದು ತಿಳಿಸಿತ್ತು.

ಮಾಜಿ ಕಾನೂನು ಸಚಿವ ಹಾಗೂ ಹಾಲಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ,ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ್, ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಮತ್ತು ಧಾರವಾಡದ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರ ಮನವಿಗಳ ಮೇರೆಗೆ ಸರಕಾರವು ಈ ಪ್ರಕರಣಗಳನ್ನು ಹಿಂದೆಗೆದುಕೊಂಡಿತ್ತು.

ಹುಣಸೂರು

2015 ಮತ್ತು 2018ರ ನಡುವೆ ಹುಣಸೂರು ಪರಿಸರದಲ್ಲಿ ನಡೆದಿದ್ದ ಕೋಮು ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದ 13 ಪ್ರಕರಣಗಳನ್ನು ಕೈಬಿಡುವಂತೆ ಮಾಧುಸ್ವಾಮಿ ಸರಕಾರವನ್ನು ಕೋರಿದ್ದರು. ಇವುಗಳ ಪೈಕಿ 2017,ಡಿಸೆಂಬರ್‌ನಲ್ಲಿ ಕೋಮುಸೂಕ್ಷ್ಮ ಹುಣಸೂರಿನಲ್ಲಿ ಹನುಮಾನ ಜಯಂತಿ ಮೆರವಣಿಗೆಯನ್ನು ನಿಯಂತ್ರಿಸಲು ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್‌ಗೆ ತನ್ನ ಜೀಪನ್ನು ಡಿಕ್ಕಿ ಹೊಡೆಸಿದ್ದಕ್ಕಾಗಿ ಸಂಸದ ಪ್ರತಾಪ ಸಿಂಹ ವಿರುದ್ಧ ದಾಖಲಾಗಿದ್ದ ಪ್ರಕರಣವೂ ಸೇರಿದೆ. 2020,ನ.26ರಂದು ಈ ಪ್ರಕರಣಗಳನ್ನು ಹಿಂದೆಗೆದುಕೊಂಡಿದ್ದು,ಹೆಚ್ಚಿನವು ವಿಶೇಷವಾಗಿ ಹನುಮಾನ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಗುಂಪುಗಳ ನಡುವೆ ಸಂಭವಿಸಿದ್ದ ಘರ್ಷಣೆಗಳಿಗೆ ಸಂಬಂಧಿಸಿದ್ದವು. ಹುಣಸೂರು ಪರಿಸರದ 142 ಹಿಂದು ಮತ್ತು 40 ಮುಸ್ಲಿಂ ಯುವಕರನ್ನು ಕ್ರಿಮಿನಲ್ ಪ್ರಕರಣಗಳಿಂದ ಮುಕ್ತಗೊಳಿಸಲಾಗಿತ್ತು.

ಹೊನ್ನಾವರ

ಭಟ್ಕಳ ಶಾಸಕ ಸುನೀಲ್ ನಾಯ್ಕ ಅವರು 2018ರ ವಿಧಾನಸಭಾ ಚುನಾವಣೆಗೆ ಮುನ್ನ ಜಿಲ್ಲೆಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಐದು ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಕೋರಿದ್ದರು. 2017ರಲ್ಲಿ ಹೊನ್ನಾವರದಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದ ಬಳಿಕ ನಿಗೂಢವಾಗಿ ಸಾವನ್ನಪ್ಪಿದ್ದ ಪರೇಶ ಮೆಸ್ತಾ (19) ಎಂಬ ಯುವಕನ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಐದು ಪ್ರಕರಣಗಳಲ್ಲಿ ಒಟ್ಟು 110 ಜನರು ನ್ಯಾಯಾಲಯಗಳಿಂದ ಖುಲಾಸೆಗೊಂಡಿದ್ದರು. ಇವುಗಳಲ್ಲಿ ಕೆಲವು ಪ್ರಕರಣಗಳು ಹೊನ್ನಾವರದ ಹನುಮಾನ್ ಮಂದಿರದ ಬಳಿ ಮುಸ್ಲಿಮರ ವಾರ್ಷಿಕ ಮೆರವಣಿಗೆಯ ಮಾರ್ಗವನ್ನು ನಿರ್ಧರಿಸಲು ಸ್ಥಳೀಯ ಅಧಿಕಾರಿಗಳು ಕರೆದಿದ್ದ ಶಾಂತಿಸಭೆಯಲ್ಲಿ ನಡೆದಿದ್ದ ಹಿಂಸಾಚಾರಗಳಿಗೆ ಮತ್ತು ಕೆಲವು ದಿನಗಳ ಬಳಿಕ ಉಭಯ ಸಮುದಾಯಗಳ ಗುಂಪುಗಳ ನಡುವೆ ನಡೆದಿದ್ದ ಘರ್ಷಣೆಗಳಿಗೆ ಸಂಬಂಧಿಸಿದ್ದವು.

ಬೀದರ್

ಸಚಿವ ಪ್ರಭು ಚವಾಣ್ ಅವರ ಮನವಿಯ ಮೇರೆಗೆ ಬೀದರ್ ನಗರದಲ್ಲಿ ನಡೆದಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ಒಟ್ಟು ಏಳು ತಥಾಕಥಿತ ಗೋರಕ್ಷಕರು ಆರೋಪಿಗಳಾಗಿದ್ದರು. ಓರ್ವನಿಗೆ ಸರಕಾರದ ಆದೇಶದಿಂದ ಲಾಭವಾಗಿದೆಯಾದರೂ ಉಳಿದ ಆರು ಜನರಿಗೆ ಲಾಭ ದೊರಕಿಲ್ಲ. ಅವರ ವಿರುದ್ಧ ಆರೋಪಗಳನ್ನು ರೂಪಿಸಲು ಬಾಕಿಯಿರುವ ಪ್ರಕರಣವನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲು ಬೀದರ್ ನ ಸ್ಥಳೀಯ ನ್ಯಾಯಾಲಯವು ಸಜ್ಜಾಗಿದೆ.

ಇನ್ನೊಂದು ಪ್ರಕರಣದಲ್ಲಿ,2018ರಲ್ಲಿ ಬಾಲಕಿಯೋರ್ವಳ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿಗಳನ್ನು ನಾಶಗೊಳಿಸಿದ್ದ ಆರೋಪ ಎದುರಿಸುತ್ತಿದ್ದ ಎಂಟು ಹಿಂದು ಯುವಕರು ಕಾನೂನಿನ ಹಿಡಿತದಿಂದ ಪಾರಾಗಿದ್ದಾರೆ.

 ಧಾರವಾಡ

2015ರಲ್ಲಿ ಧಾರವಾಡದಲ್ಲಿ ನಡೆದಿದ್ದ ಕೋಮು ಘಟನೆಗೆ ಸಂಬಂಧಿಸಿದ ಪ್ರಕರಣವನ್ನು ಸ್ಥಳೀಯ ನ್ಯಾಯಾಲಯವು 2020,ಅ.28ರಂದು ಕೈಬಿಟ್ಟಿತ್ತು. ಇದರಲ್ಲಿ 10 ಜನರು ಆರೋಪಿಗಳಾಗಿದ್ದರು. ಬಿಜೆಪಿ ಶಾಸಕ ಅಮೃತ ದೇಸಾಯಿ ಕೋರಿಕೆಯ ಮೇರೆಗೆ ಈ ಪ್ರಕರಣವನ್ನು ಹಿಂದೆಗೆದುಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News