ದೇಶದ್ರೋಹ ಪ್ರಕರಣಗಳ ವಿರುದ್ಧ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ: ರಾಜ್ ದೀಪ್ ಸರ್ದೇಸಾಯಿ

Update: 2021-01-31 06:54 GMT

ಹೊಸದಿಲ್ಲಿ: ದೇಶದ್ರೋಹ ಪ್ರಕರಣವನ್ನು ಎಲ್ಲಿ ಎದುರಿಸಬೇಕೋ ಅಲ್ಲಿ ಎದುರಿಸುತ್ತೇವೆ. ಇಂದು ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ.‌ ದೇಶದ್ರೋಹ ಪ್ರಕರಣಗಳ ವಿಚಾರದಲ್ಲಿ ಎಲ್ಲ ಪತ್ರಕರ್ತರ ಅಭಿಪ್ರಾಯ ಒಂದೇ ಆಗಿರಬೇಕು ಎಂದು ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ.

ಪತ್ರಕರ್ತರು ಮತ್ತು ಇತರರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ್ರೋಹದ ಪ್ರಕರಣದಲ್ಲಿ ಹೇಳುವುದಾದರೆ ನೀವು ಮಣಿಪುರದಲ್ಲಿ ಪತ್ರಕರ್ತರಾಗಿರಬಹುದು ಅಥವಾ ಕಾಶ್ಮೀರದ ಪತ್ರಕರ್ತರಾಗಿರಬಹುದು. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಅಥವಾ ಬಿಜೆಪಿ ಆಡಳಿತದ ರಾಜ್ಯದಲ್ಲಿ ಪತ್ರಕರ್ತರಾಗಿರಬಹುದು. ದೇಶದ್ರೋಹ ಪ್ರಕರಣಗಳ ವಿಚಾರದಲ್ಲಿ ಎಲ್ಲ ಪತ್ರಕರ್ತರ ಅಭಿಪ್ರಾಯ ಒಂದೇ ಆಗಿರಬೇಕು ಎಂದರು.

ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವುದು ಸ್ವೀಕಾರಾರ್ಹವಲ್ಲ ಎಂದು ಎಲ್ಲಾ ಪತ್ರಕರ್ತರು ಒಂದೇ ಧ್ವನಿಯಲ್ಲಿ ಪ್ರತಿಭಟಿಸುವ ಸಮಯ ಬಂದಿದೆ. ಈ ವಿಚಾರ ಬಂದಾಗ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಮಣಿಪುರದಲ್ಲಿ ಪತ್ರಕರ್ತರನ್ನು ಜೈಲಿಗಟ್ಟಲಾಗುತ್ತಿದೆ. ಕಾಶ್ಮೀರವಾಗಲೀ, ದೇಶದ ಎಲ್ಲೇ ಆಗಲಿ. ಇಂತಹ ಘಟನೆಗಳು ನಡೆಯುತ್ತಿವೆ ಎಂದವರು ಹೇಳಿದರು.

ಈ ಒಂದು ವಿಚಾರದಲ್ಲಿ ಪತ್ರಕರ್ತರೆಲ್ಲರೂ ಒಂದಾಗಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಹಲವು ವಿಚಾರಗಳಿಗೆ ಸಂಬಂಧಿಸಿ ನಾವು ಜಗಳ ಮಾಡಿಕೊಳ್ಳಬಹುದು. ಪತ್ರಕರ್ತರಾಗಿ ನಮ್ಮಿಂದ ತಪ್ಪುಗಳಾಗಬಹುದು. ಆ ತಪ್ಪುಗಳನ್ನು ನಾವು ತಿದ್ದಿಕೊಳ್ಳಬಹುದು. ಆದರೆ ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವುದು ಸರಿಯಲ್ಲ. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ, ಯಾವುದೇ ಸರಕಾರಗಳಾಗಲಿ, ಅವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎಂದು ರಾಜ್ ದೀಪ್ ಹೇಳಿದರು.

ನಂತರ ಮಾತನಾಡಿದ ಹಿರಿಯ ಪತ್ರಕರ್ತ, ಹಿರಿಯ ಲೇಖಕ ಶೇಖರ್ ಗುಪ್ತಾ, “ದೇಶದ್ರೋಹ ಬಿಡಿ, ಈ ಪತ್ರಕರ್ತರ ವಿರುದ್ಧ ದೇಶದ ಯಾವುದೇ ಕಾನೂನಿನಡಿ ಕ್ರಮ‌ ಕೈಗೊಳ್ಳಲು ಸಾಧ್ಯವಿಲ್ಲ. ದೇಶದ್ರೋಹ ಪ್ರಕರಣವು ಅತ್ಯಂತ ಗಂಭೀರ ಪ್ರಕರಣ. ಪತ್ರಕರ್ತರಾಗಿ ತಪ್ಪುಗಳು ಸಹಜ. ಆದರೆ ಅವು ಅಪರಾಧವಲ್ಲ. ತಪ್ಪುಗಳನ್ನು ಪತ್ರಕರ್ತರು ತಿದ್ದಿಕೊಳ್ಳುತ್ತಾರೆ ಎಂದರು.

ಎರಡನೆಯದಾಗಿ ಪತ್ರಕರ್ತರ ಮೇಲಿನ ದೇಶದ್ರೋಹ ಪ್ರಕರಣಗಳು ಎಲ್ಲಾ ಪತ್ರಕರ್ತರಿಗೆ ಎಚ್ಚರಿಕೆಯಾಗಿದೆ. ನೀವು ಅವರು ಹೇಳಿದ ಹಾಗೆ ಕೇಳಿಕೊಂಡು ಇರದಿದ್ದರೆ ದೇಶದಲ್ಲಿರುವ ಕೆಟ್ಟ ಕಾನೂನುಗಳ ಮೂಲಕ ಅಂದರೆ‌ ಕಠಿಣ, ಜೀವಾವಧಿ ಶಿಕ್ಷೆಗಳನ್ನೂ ಒಳಗೊಂಡ ಕಾನೂನುಗಳಡಿ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಆದರೆ ಈ ಪ್ರಕರಣಗಳ ಪ್ರಕ್ರಿಯೆಯೇ ಶಿಕ್ಷೆಯಂತಿರುತ್ತದೆ‌. ಈಗಾಗಲೇ ಹಲವರು ಇದನ್ನು ಎದುರಿಸಿದ್ದಾರೆ‌ ಎಂದರು.

ಮೂರನೆಯದಾಗಿ ನಾವೆಲ್ಲರೂ ಪತ್ರಕರ್ತರು. ನಾವು ಚಿಂತನೆಗಳು ಮತ್ತು ವಾದ-ವಿವಾದಗಳ ಜಗತ್ತಿ‌ನಲ್ಲಿ ಬದುಕುವವರು. ನಾವು ಪರಸ್ಪರ ವಾದ ವಿವಾದಗಳನ್ನು ನಡೆಸುತ್ತೇವೆ. ಪರಸ್ಪರರನ್ನು ಒಪ್ಪುವುದಿಲ್ಲ. ಆದರೆ‌ ನಾವು ಮಾಧ್ಯಮಗಳನ್ನು ಬಲಹೀನ ಮಾಡುವ ಯಾವುದೇ ಚಿಂತನೆಗಳನ್ನು ಒಪ್ಪಬಾರದು.‌ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಎಂಬ ವಿಷಯವೂ ಇದೆ. ನಮ್ಮಲ್ಲಿ ಏಕತೆ ಬೇಕು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News