ಶೃಂಗೇರಿ: ಬಾಲಕಿಗೆ ಲೈಂಗಿಕ ದೌರ್ಜನ್ಯ; ಸಂತ್ರಸ್ತೆಯ ಚಿಕ್ಕಮ್ಮ ಸಹಿತ 17 ಮಂದಿ ವಿರುದ್ಧ ಎಫ್‍ಐಆರ್

Update: 2021-02-02 13:45 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜ.31: ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯೋರ್ವಳನ್ನು ರಕ್ಷಿಸಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಎಂಬವರು ಬಾಲಕಿಯ ಹೇಳಿಕೆ ಮೇರೆಗೆ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದು, ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಮ್ಮ ಸೇರಿದಂತೆ 17 ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದ 15 ವರ್ಷ ಬಾಲಕಿ ತನ್ನ ತಾಯಿಯ ತಂಗಿಯೊಂದಿಗೆ ಇತ್ತೀಚೆಗೆ ಶೃಂಗೇರಿ ತಾಲೂಕಿನ ಕುಂಚೇಬೈಲು ಸಮೀಪದಲ್ಲಿರುವ ಗೋಚುವಳ್ಳಿ ಗ್ರಾಮದ ಕ್ರಷರೊಂದಕ್ಕೆ ಕೆಲಸಕ್ಕೆ ಬಂದಿದ್ದು, ಈ ವೇಳೆ ಅಲ್ಲಿನ ಕೆಲಸಗಾರನೊಬ್ಬ ಬಾಲಕಿಯನ್ನು ಪುಸಲಾಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆತನ ಸ್ನೇಹಿತರೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ದೌರ್ಜನ್ಯದ ವಿಷಯವನ್ನು ಬಾಯಿ ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಪೊಟೊಗಳನ್ನು ವೈರಲ್ ಮಾಡುವುದಾಗಿ ಬಾಲಕಿಯನ್ನು ಹೆದರಿಸಿದ್ದಾರೆಂದು ಸುಬ್ರಹ್ಮಣ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕ್ರಷರ್ ನಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಗೋಚವಳ್ಳಿಯ ಕ್ರಷರ್ ನಿಂದ ರಕ್ಷಣೆ ಮಾಡಲಾಗಿದೆ. ಈ ವೇಳೆ ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದಾಳೆ. ದೌರ್ಜನ್ಯ ಎಸಗಿದ ಸ್ಥಳೀಯ 15 ಮಂದಿಯ ಹೆಸರನ್ನು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ತನ್ನ ಚಿಕ್ಕಮ್ಮ ಗೀತಾ ಎಂಬಾಕೆಯೂ ಸಹಕಾರ ನೀಡಿದ್ದಾಳೆಂದು ಬಾಲಕಿ ಹೇಳಿಕೆ ನೀಡಿದ್ದಾಳೆಂದು ತಿಳಿದು ಬಂದಿದೆ.

ಕ್ರಷರ್‍ ನಿಂದ ಬಾಲಕಿಯನ್ನು ರಕ್ಷಣೆ ಮಾಡಿರುವ ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಸದ್ಯ ಸ್ವಾಧಾರ್ ಕೇಂದ್ರದಲ್ಲಿ ಇರಿಸಿದ್ದು, ಆಕೆಯ ಹೇಳಿಕೆ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದ ಅಭಿ, ಆನೆಗುಂದ ಗ್ರಾಮದ ರಾಜೇಶ್, ಅಮಿತ್, ಗಿರೀಶ್, ಹೊಳೆಕೊಪ್ಪ ಗ್ರಾಮದ ಮಣಿಕಂಠ, ವಿಕಾಸ್, ನೆಮ್ಮಾರ್ ಸಂಪತ್, ಶೃಂಗೇರಿಯ ನಾರಾಯಣ್ ಗೌಡ, ಅಶ್ವತ್‍ಗೌಡ, ಅಭಿಗೌಡ, ಕುರುಬಗೆರೆ ಸಂತೋಷ್, ಹೆಗ್ಗದ್ದೆಯ ಧೀಕ್ಷಿತ್, ಹೇರೂರಿನ ಸಂತೋಷ್, ಕಿಗ್ಗಾದ ನಿರಂಜನ್, ಬಸ್ ಚಾಲಕ ಖಾಂಡ್ಯ ಯೋಗೀಶ್ ಎಂಬ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಪ್ರಕರಣ ಸಂಬಂಧ ಬಾಲಕಿಯ ಚಿಕ್ಕಮ್ಮ ಗೀತಾಳನ್ನು 16ನೇ ಆರೋಪಿಯನ್ನಾಗಿಸಲಾಗಿದೆ. ಅಲ್ಲದೇ ಬಾಲ ಕಾರ್ಮಿಕರನ್ನು ಕ್ರಷರ್ ನಲ್ಲಿ ಕೆಲಸಕ್ಕೆ ನೇಮಿಸಿಕೊಂಡ ಆರೋಪದಡಿಯಲ್ಲಿ ಕ್ರಷರ್ ಮಾಲಕನ್ನು 17ನೇ ಆರೋಪಿಯನ್ನಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದು, ಬಾಲಕಿಯಿಂದ ಉಳಿದ ಆರೋಪಿಗಳ ಹೆಸರು, ಗುರುತು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಬಾಲಕಿಗೆ ಲೈಂಗಿಕ ದೌರ್ಜನ್ಯದ ಕಿರುಕುಳ ನೀಡಿರುವ ಆರೋಪಿಗಳ ಪೈಕಿ ಬಹುತೇಕ ಮಂದಿ ಸಂಘಪರಿವಾರದಲ್ಲಿ ಗುರುತಿಸಿಕೊಂಡವರಾಗಿದ್ದು, ಪ್ರಕರಣದ ಒಂದನೇ ಆರೋಪಿ ಸ್ಮಾಲ್ ಅಭಿ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದು, ಮಣಿಕಂಠ ಎಂಬಾತ ಶೃಂಗೇರಿ ತಾಲೂಕು ಬಿಜೆಪಿ ಯುವಮೋರ್ಚಾದ ಸದಸ್ಯನಾಗಿದ್ದಾನೆ. ಇನ್ನು ವಿಕಾಶ್ ಎಂಬಾತ ಬಿಜೆಪಿ ಪಕ್ಷದ ಜಿಪಂ ಸದಸ್ಯರೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗುತ್ತಿದೆ. ಸಂಪತ್ ಎಂಬಾತ ಸನಾತನ ಸಂಸ್ಥೆಯ ಸದಸ್ಯ ಎನ್ನಲಾಗುತ್ತಿದ್ದು, ಇವರು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿರುವ ಪೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ತಮ್ಮ ಪ್ರಭಾವ ಬಳಸಿ ಪಾರಾಗುವ ಸಾಧ್ಯತೆ ಇದ್ದು, ಪೊಲೀಸರು ಈ ಸಂಬಂಧ ಅಗತ್ಯ ಕ್ರಮವಹಿಸಬೇಕೆಂದು ಕುಂಚೇಬೈಲು ಗ್ರಾಮಸ್ಥರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ರವಿವಾರ ಈ ಆರೋಪಿಗಳ ಪೈಕಿ 7 ಮಂದಿಯನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬಾಲಕಿಗೆ ತಾಯಿ ಇಲ್ಲವೆಂದು ತಿಳಿದು ಬಂದಿದೆ. ತಂದೆ ಮತ್ತೊಂದು ಮದುವೆಯಾಗಿ ಹಾವೇರಿಯಲ್ಲಿ ವಾಸವಿದ್ದಾನೆ. ಬಾಲಕಿ ಇತ್ತೀಚೆಗೆ ತನ್ನ ತಾಯಿ ಚಿಕ್ಕಮ್ಮನೊಂದಿಗೆ ಶೃಂಗೇರಿಯ ಕಂಚೇಬೈಲು ಗ್ರಾಮ ಸಮೀಪದ ಗೊಂಚುವಳ್ಳಿ ಕ್ರಷರ್ ಗೆ ಆಗಮಿಸಿ ಅಲ್ಲೇ ನೆಲೆಸಿದ್ದರೆಂದು ತಿಳಿದು ಬಂದಿದೆ.

ಬಾಲಕಿ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬಾಲಕಿಯ ಚಿಕ್ಕಮ್ಮ ಸೇರಿದಂತೆ 16 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಆರೋಪದ ಮೇರೆಗೆ ಶೃಂಗೇರಿ ತಾಲೂಕಿನ ಕಂಚೇಬೈಲ್ ಗ್ರಾಮದಲ್ಲಿರುವ ಎಂಜಿಆರ್ ಎಂಬ ಹೆಸರಿನ ಕ್ರಷರ್ ಮಾಲಕನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಳ್ಳಲಾಗುತ್ತಿದೆ.
- ಡಿವೈಎಸ್ಪಿ, ಕೊಪ್ಪ

ಶೃಂಗೇರಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ತಾಯಿ ತೀರಿಕೊಂಡಿದ್ದಾರೆ. ತಂದೆ ಎರಡನೇ ಮದುವೆಯಾಗಿದ್ದಾನೆ. ಬಾಲಕಿ ತಾಯಿಯ ತಮ್ಮನ ಮನೆಯಲ್ಲಿ ಓದುತ್ತಿದ್ದಳು. ಲಾಕ್‍ಡೌನ್ ಸಂದರ್ಭದಲ್ಲಿ ಶೃಂಗೇರಿಯ ಚಿಕ್ಕಮ್ಮನ ಮನೆಗೆ ಬಂದಿದ್ದು, ಬಾಲಕಿ ಚಿಕ್ಕಮ್ಮ ಮನೆಯ ಸಮೀಪದಲ್ಲೇ ಇದ್ದ ಕ್ರಷರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಚಿಕ್ಕಮ್ಮನಿಗೆ ಆರೋಗ್ಯ ಸರಿಯಿಲ್ಲದ ಸಂದರ್ಭದಲ್ಲಿ ಬಾಲಕಿ ಕ್ರಷರ್ ನಲ್ಲಿ ಕೆಲಸಕ್ಕೆ ಹೋಗಿದ್ದಾಳೆ. ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆಕೆಯನ್ನು ಮರುಳು ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ನಂತರ ತನ್ನ ಸ್ನೇಹಿತರಿಗೂ ಲೈಗಿಂಕ ದೌರ್ಜನ್ಯಕ್ಕೆ ಸಹಕರಿಸಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಕೌನ್ಸಿಲಿಂಗ್‍ಗೆ ಒಳಪಡಿಸಿದಾಗ ಆಕೆಯ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ. ಸ್ವಾಧಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಈ ಸಂಬಂಧ ಶೃಂಗೇರಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
-ಸುಬ್ರಮಣ್ಯ, ಮಕ್ಕಳ ಕಲ್ಯಾಣ ಸಮತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News