ಹೌದು, ದೇಶಕ್ಕೆ ನೋವಾಗಿದೆ!

Update: 2021-02-01 05:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ವರ್ಷದ ಮೊತ್ತ ಮೊದಲ ‘ಮನ್ ಕಿ ಬಾತ್’ ದೇಶದ ರೈತರ ಪರವಾಗಿ ಮಿಡಿಯುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ. ಬದಲಿಗೆ ಪ್ರಧಾನಿ ಮೋದಿಯವರು ‘ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜಕ್ಕಾದ ಅವಮಾನದಿಂದಾಗಿ ದೇಶಕ್ಕೆ ನೋವಾಗಿದೆ’ ಎಂಬ ಹೇಳಿಕೆಯನ್ನು ನೀಡಿ, ದೇಶವನ್ನು ರೈತರ ಪ್ರತಿಭಟನೆಯ ವಿರುದ್ಧ ಎತ್ತಿಕಟ್ಟಲು ವಿಫಲ ಪ್ರಯತ್ನವನ್ನು ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನ ಕೆಂಪು ಕೋಟೆಯಲ್ಲಿ ಏನು ಸಂಭವಿಸಿದೆಯೋ ಅದರ ಕುರಿತಂತೆ ದೇಶದ ಜನರು ತೀವ್ರ ಕಳವಳವನ್ನು ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕಾರಣ ಮೋದಿಯವರು ಹೇಳುವಂತೆ ‘ಅಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಗಿರುವುದಕ್ಕಾಗಿ’ ಅಲ್ಲ. ಮುಖ್ಯವಾಗಿ, ಕೆಂಪುಕೋಟೆಯಲ್ಲಿ ‘ರಾಷ್ಟ್ರ ಧ್ವಜ’ಕ್ಕೆ ಯಾವ ರೀತಿಯಲ್ಲಿ ಅವಮಾನವಾಗಿದೆ ಎನ್ನುವುದನ್ನು ಪ್ರಧಾನಿ ಸ್ಪಷ್ಟಪಡಿಸಿಲ್ಲ.

ಅಲ್ಲಿ ಅಕ್ರಮವಾಗಿ ಪ್ರವೇಶಿಸಿ, ದುಷ್ಕರ್ಮಿಗಳ ಒಂದು ಗುಂಪು ಎರಡು ಧ್ವಜಗಳನ್ನು ನೆಟ್ಟಿದೆ ಎನ್ನುವುದನ್ನು ಹೊರತು ಪಡಿಸಿ ಇನ್ನಾವ ರೀತಿಯ ಘಟನೆಗಳೂ ಅಲ್ಲಿ ಸಂಭವಿಸಿಲ್ಲ. ಗುಂಪು ಕಟ್ಟಡಕ್ಕೂ ಯಾವುದೇ ಹಾನಿ ಮಾಡಿಲ್ಲ. ಆದರೆ ಈ ಘಟನೆ ಪ್ರಧಾನಿಯವರಿಗೆ ತೀವ್ರ ನೋವನ್ನುಂಟು ಮಾಡಿರುವುದು ಅವರ ಮಾತಿನಲ್ಲೇ ಧ್ವನಿಸಿದೆ. ಅಲ್ಲಿ ಅಂತಹ ಘಟನೆ ನಡೆಯಬಾರದಾಗಿತ್ತಾದರೂ, ಪೊಲೀಸರ ವೈಫಲ್ಯ ಆ ಘಟನೆ ನಡೆಯುವುದಕ್ಕೆ ಮುಖ್ಯ ಕಾರಣ. ಆದುದರಿಂದ ಅಲ್ಲೇನಾದರೂ ರಾಷ್ಟ್ರಧ್ವಜಕ್ಕೆ ಅವಮಾನವಾಗಿದ್ದರೆ ಸರಕಾರವೇ ಅದರ ಹೊಣೆಯನ್ನು ಹೊರಬೇಕು. ಈ ಘಟನೆ ರೈತರಿಂದ ಸಂಭವಿಸಿಲ್ಲ ಎನ್ನುವುದನ್ನು ಸ್ವತಃ ರೈತ ಪ್ರತಿಭಟನಾಕಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜವನ್ನು ಸ್ಥಾಪಿಸಿದ ಗುಂಪಿನ ನೇತೃತ್ವ ವಹಿಸಿದಾತ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಚಾರ ಮಾಡಿದವನು ಎನ್ನುವುದೂ ಈಗಾಗಲೇ ಬಹಿರಂಗವಾಗಿದೆ. ಪ್ರತಿಭಟನಾಕಾರರ ಕುರಿತಂತೆ ದೇಶಕ್ಕೆ ತಪ್ಪು ಸಂದೇಶವನ್ನು ನೀಡಲು ಕೆಲವು ದುಷ್ಕರ್ಮಿಗಳು ನಡೆಸಿದ ಸಂಚು ಎಂದು ಈ ಘಟನೆಯನ್ನು ಬಣ್ಣಿಸಲಾಗಿದೆ. ಈಗಾಗಲೇ ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈತರು ಸಾಕಷ್ಟು ಕಳೆದುಕೊಂಡಿದ್ದಾರೆ. ಹೀಗಿರುವಾಗ, ಅವರ ವಿರುದ್ಧ ಜನವರಿ 26ರಂದು ನಡೆದ ಸಂಚು ನಿಜಕ್ಕೂ ದೇಶಕ್ಕೆ ನೋವನ್ನುಂಟು ಮಾಡುವಂತಹದು. ಆದರೆ ದೇಶದ ಆ ನೋವು ಪ್ರಧಾನಿಯವರನ್ನು ತಾಕಿದಂತಿಲ್ಲ.

ಕೆಂಪು ಕೋಟೆಯಲ್ಲಿ ದೇಶಕ್ಕೆ ನೋವಾಗುವುಂತಹದು ಏನೋ ನಡೆದಿದೆ ಎಂದು ಹೇಳಿರುವ ನರೇಂದ್ರ ಮೋದಿಯವರಿಗೆ, ಅಂದು ದೇಶಾದ್ಯಂತ ನಡೆದ ಬೃಹತ್ ರ್ಯಾಲಿ ಕಣ್ಣಿಗೇ ಬಿದ್ದಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಈ ದೇಶದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ, ಸರಕಾರದ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಗಣರಾಜ್ಯೋತ್ಸವ ಆಚರಣೆಯಾಯಿತು. ಇತಿಹಾಸದಲ್ಲಿ ಹಿಂದೆಂದೂ ಸೇರದಷ್ಟು ಬೃಹತ್ ಸಂಖ್ಯೆಯ ರೈತರು ಟ್ರಾಕ್ಟರ್ ಸಹಿತ ಈ ರ್ಯಾಲಿಯಲ್ಲಿ ಭಾಗವಹಿಸಿದರು. ‘ಅವರೆಲ್ಲ ಎಲ್ಲಿಂದ, ಯಾಕೆ ಬಂದರು? ಅವರ ನೋವುಗಳೇನು? ಅವರು ಈ ದೇಶಕ್ಕೆ ಸಂಬಂಧಪಟ್ಟವರೇ ಅಲ್ಲವೆ?’ ಎನ್ನುವ ಪ್ರಶ್ನೆಗಳಿಗೆ ಮೋದಿಯವರ ‘ಮನ್ ಕಿ ಬಾತ್’ನಲ್ಲಿ ಉತ್ತರವೇ ಇರಲಿಲ್ಲ. ಕಳೆದ ಎರಡು ತಿಂಗಳ ಪ್ರತಿಭಟನೆಯಲ್ಲಿ 60ಕ್ಕೂ ಅಧಿಕ ರೈತರು ಮಳೆ, ಚಳಿಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ರೈತರೆಲ್ಲ ಎರಡು ತಿಂಗಳಿಂದ ಶಾಂತವಾಗಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ರೈತರಿಗೆ ಸಂಭವಿಸುತ್ತಿರುವುದು ನೋಡಿ, ದೇಶಕ್ಕೆ ಸಹಿಸಲಾಗದಷ್ಟು ನೋವಾಗಿದೆ. ಆ ನೋವಿಗೆ ಸ್ಪಂದಿಸಬೇಕಾಗಿದ್ದು ಪ್ರಧಾನಿಯವರ ಕರ್ತವ್ಯವಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಕೆಂಪುಕೋಟೆಯ ಘಟನೆಯನ್ನೇ ಮುಂದಿಟ್ಟುಕೊಂಡು ಒಂದು ಗುಂಪು ಶಾಂತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಲ್ಲುತೂರಾಟ ನಡೆಸಿತು. ಅವರನ್ನು ‘ಆಕ್ರೋಶಗೊಂಡ ಸ್ಥಳೀಯರು’ ಎಂದು ಬಿಂಬಿಸಲಾಯಿತು. ಆದರೆ ಇದೀಗ ‘ಆಲ್ಟ್ ನ್ಯೂಸ್’ ಪ್ರಕಾರ, ಆ ಕಲ್ಲುತೂರಾಟದ ನೇತೃತ್ವವನ್ನು ವಹಿಸಿಕೊಂಡವರು ಬಿಜೆಪಿಯ ಕಾರ್ಯಕರ್ತರು. ರೈತರ ವಿರುದ್ಧ ತನ್ನದೇ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟು, ದೇಶಕ್ಕೆ ನೋವಾಗಿದೆ ಎನ್ನುವ ಪ್ರಧಾನಿಯ ಮಾತು, ಅತ್ಯಂತ ಅಮಾನವೀಯವಾದುದು. ರಾಷ್ಟ್ರ ಧ್ವಜ ಎಂದರೆ ಏನು? ಅದು ಮೂರು ಬಣ್ಣಗಳುಳ್ಳ ಬಟ್ಟೆಯಷ್ಟೇ ಎಂದು ಅವರು ತಿಳಿದುಕೊಂಡಿದ್ದಾರೆಯೇ? ರಾಷ್ಟ್ರ ಧ್ವಜ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಬಣ್ಣಗಳ ಮೂಲಕವೇ ಸಾಕಷ್ಟು ಸಂದೇಶಗಳನ್ನು ನೀಡುತ್ತದೆ. ಅದರಲ್ಲಿರುವ ಹಸಿರು ಬಣ್ಣ, ಈ ದೇಶದ ರೈತರನ್ನು, ಕೃಷಿಯನ್ನು, ಸಂಪತ್ತನ್ನು ಸಂಕೇತಿಸುತ್ತದೆ. ಇಂದು ರಾಷ್ಟ್ರ ಧ್ವಜದಲ್ಲಿರುವ ಹಸಿರು ಬಣ್ಣ ದಿಲ್ಲಿಯ ಗಡಿಯಲ್ಲಿ ನಿರಶನ ನಡೆಸುತ್ತಿದೆ. ಅದರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ದುಷ್ಕರ್ಮಿಗಳು ಕಲ್ಲುತೂರಾಟ ನಡೆಸುತ್ತಿದ್ದಾರೆ. ಇವೆಲ್ಲವೂ ಪರೋಕ್ಷವಾಗಿ ನಮ್ಮ ಬಾವುಟಕ್ಕೆ ಮಾಡುತ್ತಿರುವ ದಾಳಿಯೇ ಆಗಿದೆ.

ಸ್ವಾತಂತ್ರಾನಂತರ ಅನ್ನ, ಆಹಾರದ ಕೊರತೆಯಿಂದ ನರಳುತ್ತಿದ್ದ ದೇಶವನ್ನು ಮೇಲೆತ್ತಿದವರು ರೈತರು. ವಿದೇಶಗಳಿಂದ ಗೋಧಿ, ಅಕ್ಕಿಗಾಗಿ ಅಂಗಲಾಚುತ್ತಿದ್ದ ಸಂದರ್ಭದಲ್ಲಿ, ಹಸಿರು ಕ್ರಾಂತಿಯ ಮೂಲಕ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ರೈತರು ಭಾರತವನ್ನು ಆಹಾರದ ವಿಷಯದಲ್ಲಿ ಸ್ವಾವಲಂಬಿಗಳನ್ನಾಗಿಸಿದರು. ಇಂತಹ ರೈತರು ಇಂದು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಚೀರಾಡುತ್ತಿರುವುದು ರಾಷ್ಟ್ರ ಧ್ವಜಕ್ಕೆ ಆಗುತ್ತಿರುವ ಅವಮಾನವೇ ಆಗಿದೆ. ಈ ಹಿನ್ನೆಲೆಯಲ್ಲಿ ದೇಶಕ್ಕೆ ತೀವ್ರ ನೋವಾಗಿದೆ ಎಂದು ಮೋದಿ ಹೇಳಿದರೆ ಅದನ್ನು ನಾವು ಅನುಮೋದಿಸಬೇಕಾಗುತ್ತದೆ. ಬರೇ ಅದಾನಿ, ಅಂಬಾನಿ ಎಂಬ ಇಬ್ಬರು ಉದ್ಯಮಿಗಳಿಗಾಗಿ ದೇಶದ ಲಕ್ಷಾಂತರ ರೈತರ ಬದುಕನ್ನು ಆತಂಕಕ್ಕೆ ತಳ್ಳುತ್ತಿರುವ ಕಾನೂನನ್ನು ಜಾರಿಗೊಳಿಸುವುದೂ ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನವೇ ಆಗಿದೆ. ಗಣರಾಜ್ಯೋತ್ಸವ ಎಂದರೆ ರಾಜಪಥದಲ್ಲಿ ಸಾಗುವ ನಿರ್ಜೀವ ‘ಟ್ಯಾಬ್ಲೋ’ಗಳ ವೀಕ್ಷಣೆಯಲ್ಲ. ಈ ದೇಶದ ಜನರಿಗೆ ನೀಡಿರುವ ಸಂವಿಧಾನಬದ್ಧ ಹಕ್ಕುಗಳು ಅಪಾಯಕ್ಕೆ ಸಿಲುಕದಂತೆ ನೋಡಿಕೊಂಡಾಗಲೇ ಗಣರಾಜ್ಯೋತ್ಸವ ಅರ್ಥಪೂರ್ಣವಾಗುತ್ತದೆ. ಒಂದೆಡೆ ದೇಶದ ದೊಡ್ಡ ಸಂಖ್ಯೆಯ ರೈತರು ಬೀದಿಯಲ್ಲಿ ಬಿದ್ದಿರುವಾಗ, ರಾಜಪಥದಲ್ಲಿ ನಡೆಯುವ ಸಂಭ್ರಮಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅಂತಹ ಸಂಭ್ರಮ ಪರೋಕ್ಷವಾಗಿ ಗಣರಾಜ್ಯೋತ್ಸವದ ಅಣಕ ಮಾತ್ರವಾಗಿರುತ್ತದೆ.

‘ರಾಷ್ಟ್ರಧ್ವಜಕ್ಕೆ ಅವಮಾನವಾಗಿರುವುದರಿಂದ ದೇಶಕ್ಕೆ ನೋವಾಗಿದೆ’ ಎನ್ನುವ ಮೂಲಕ ಪ್ರತಿಭಟನಾ ನಿರತ ರೈತರ ವಿರುದ್ಧ ತನ್ನ ಜನರನ್ನು ಪ್ರಧಾನಿಯವರು ಪರೋಕ್ಷವಾಗಿ ಪ್ರಚೋದಿಸಲು ಹೊರಟಿದ್ದಾರೆ. ಇಡೀ ದೇಶವೇ ದಿಲ್ಲಿಯಲ್ಲಿ ಪ್ರತಿಭಟನಾ ನಿರತವಾಗಿರುವಾಗ, ನರೇಂದ್ರ ಮೋದಿಯವರು ಯಾವುದನ್ನು ‘ದೇಶ’ವೆಂದು ಕರೆಯುತ್ತಿದ್ದಾರೆ? ಪ್ರಭುತ್ವದ ಗುಲಾಮಗಿರಿ ಮಾಡುತ್ತಿರುವ ಮಾಧ್ಯಮಗಳನ್ನು, ಟಿವಿಗಳನ್ನೇ ಅವರು ದೇಶವೆಂದು ಭಾವಿಸಿ ಹೇಳಿಕೆ ನೀಡುತ್ತಿದ್ದಾರೆಯೆ? ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿ, ರೈತರ ವಿರುದ್ಧ ದಾಳಿಯನ್ನು ಸಂಘಟಿಸಿ ಅವರ ಪ್ರತಿಭಟನೆಯನ್ನು ಇಲ್ಲವಾಗಿಸಬಹುದು ಎನ್ನುವ ನಂಬಿಕೆಯನ್ನು ಮೊತ್ತ ಮೊದಲು ಪ್ರಧಾನಿ ಕೈ ಬಿಡಬೇಕು. ದಿಲ್ಲಿಯ ಗಡಿಯಲ್ಲಿ ನೆರೆದಿರುವ ಜನರೇ ನಿಜವಾದ ‘ದೇಶ’ ಎನ್ನುವುದನ್ನು ಅರಿತುಕೊಂಡು ಅವರ ನೋವುಗಳನ್ನು ಆಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಮಾತ್ರ ಸದ್ಯದ ಬಿಕ್ಕಟ್ಟು ತಾರ್ಕಿಕ ಅಂತ್ಯವನ್ನು ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News