ಹಾಂಕಾಂಗ್ ನಾಗರಿಕರಿಗೆ ಬ್ರಿಟನ್‌ನಿಂದ ವೀಸಾ ಕೊಡುಗೆ

Update: 2021-01-31 18:44 GMT

ಹಾಂಕಾಂಗ್: ಚೀನಾವು ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಪರಾರಿಯಾಗಲು ಬಯಸುತ್ತಿರುವ ಸಾವಿರಾರು ನಾಗರಿಕರಿಗಾಗಿ ಬ್ರಿಟನ್ ಹೊಸ ವೀಸಾ ಯೋಜನೆಯೊಂದನ್ನು ಸೋಮವಾರ ಪ್ರಕಟಿಸಿದೆ.

 ರವಿವಾರದಿಂದ ಹಾಂಕಾಂಗ್‌ನಲ್ಲಿ ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿರುವವರು ಹಾಗೂ ಅವರ ಅವಲಂಭಿತರು ಆನ್‌ಲೈನ್‌ನಲ್ಲಿ ಬ್ರಿಟಿಶ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಐದು ವರ್ಷಗಳ ಬಳಿಕ ಬ್ರಿಟಿಶ್ ಪೌರತ್ವಕ್ಕಾಗಿ ಅರ್ಜಿಯನ್ನು ಹಾಕಬಹುದೆಂದು ಅಧಿಕೃತ ಮೂಲಗಳು ತಿಳಿಸಿವೆ.

ಹಾಂಕಾಂಗ್‌ನಲ್ಲಿ ಆಗಾಗ್ಗೆ ಭುಗಿಲೇಳುತ್ತಿರುವ ಪ್ರಜಾಪ್ರಭುತ್ವ ಪರ ಹೋರಾಟವನ್ನು ಹತ್ತಿಕ್ಕಲು ಕರಾಳವಾದ ಭದ್ರತಾ ಕಾಯ್ದೆಯನ್ನು ಹೇರುವ ಚೀನಾ ಆಡಳಿತದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಬ್ರಿಟನ್ ಈ ನೂತನ ವೀಸಾ ಯೋಜನೆಯನ್ನು ಘೋಷಿಸಿದೆ.

  ತನ್ನ ವಸಾಹತು ಆಗಿದ್ದ ಹಾಂಕಾಂಗನ್ನು ತಾನು ಚೀನಾಕ್ಕೆ 1997ರಲ್ಲಿ ಹಸ್ತಾಂತರಿಸುವಾಗ ಆ ನೆಲದಲ್ಲಿ ಪ್ರಮುಖ ಸ್ವಾತಂತ್ರ್ಯ ಹಕ್ಕುಗಳನ್ನು ಹಾಗೂ ಸ್ವಾಯತ್ತೆಯನ್ನು 50 ವರ್ಷಗಳವರೆಗೆ ಕಾಪಾಡುವುದಾಗಿ ಚೀನಿ ಆಡಳಿತ ವಾಗ್ದಾನ ಮಾಡಿತ್ತು. ಆದರೆ ಚೀನಾ ಈಗ ಆ ವಾಗ್ದಾನವನ್ನು ಮುರಿದಿದೆ ಎಂದು ಬ್ರಿಟನ್ ಆರೋಪಿಸಿದೆ. ತನ್ನ ಮಾಜಿ ವಸಾಹತು ಪ್ರದೇಶದ ಜನರನ್ನು ರಕ್ಷಿಸುವುದು ತನ್ನ ನೈತಿಕ ಕರ್ತವ್ಯವಾಗಿದೆ ಎಂದು ಲಂಡನ್ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News