ಶರತ್ ಬಚ್ಚೇಗೌಡ ‘ಹಕ್ಕುಚ್ಯುತಿ' ಪ್ರಸ್ತಾಪಕ್ಕೆ ಅವಕಾಶ ಕೋರಿ ಕಾಂಗ್ರೆಸ್-ಜೆಡಿಎಸ್ ಧರಣಿ ಸತ್ಯಾಗ್ರಹ

Update: 2021-02-01 15:34 GMT

ಬೆಂಗಳೂರು, ಫೆ. 1: ಹೊಸಕೋಟೆ ಕ್ಷೇತ್ರದ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಸಂಬಂಧದ ‘ಹಕ್ಕುಚ್ಯುತಿ' ಪ್ರಸ್ತಾಪ ಮಂಡನೆಗೆ ಅವಕಾಶ ನೀಡಬೇಕೆಂದು ಕೋರಿ ಶರತ್ ಬಚ್ಚೇಗೌಡ ಅವರನ್ನು ಬೆಂಬಲಿಸಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹ ನಡೆಸಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ ಶಾಸಕ ಶರತ್ ಬಚ್ಚೇಗೌಡ, ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಕಾಗೇರಿ, ‘ಈಗ ಅವಕಾಶ ನೀಡಲು ಸಾಧ್ಯವಿಲ್ಲ. ಈ ಕುರಿತು ನಿಮ್ಮ ನೋಟಿಸ್ ಪರಿಶೀಲನೆ ನಡೆಸಿ ಅವಕಾಶ ನೀಡುವೆ' ಎಂದು ಭರವಸೆ ನೀಡಿದರು.

ಆದರೆ, ಇದಕ್ಕೆ ಒಪ್ಪದ ಶರತ್, ‘ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿರುವವರು ಕೆಲಸ ಮಾಡಲು ಅವಕಾಶವಿಲ್ಲ. ತಮ್ಮ ಹಕ್ಕುಚ್ಯುತಿಯಾಗಿದ್ದು, ಸ್ಪೀಕರ್ ಅವರೇ ನಮ್ಮ ರಕ್ಷಣೆಗೆ ಬರಬೇಕು. ನೀವೂ ನಮ್ಮ ರಕ್ಷಣೆಗೆ ಬರದಿದ್ದರೆ ನಾವು ಯಾರ ಬಳಿಗೆ ಹೋಗಬೇಕು' ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಇನ್ನಿತರ ಸದಸ್ಯರು, ಶರತ್ ಬಚ್ಚೇಗೌಡ ಅವರ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಏಕಾಏಕಿ ಸಾಧ್ಯವಿಲ್ಲ: ಕಾಂಗ್ರೆಸ್ ಸದಸ್ಯರ ಪ್ರಸ್ತಾಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಯಾವುದೇ ವಿಚಾರ ಪ್ರಸ್ತಾಪಿಸಲು ಸರಕಾರಕ್ಕೆ ನೊಟೀಸ್ ನೀಡಬೇಕು. ಸರಿಯಾಗಿ ಮಾಹಿತಿ ನೀಡದೇ ಏಕಾಏಕಿ ಚರ್ಚೆಗೆ ಮುಂದಾಗುವುದು ಸರಿಯಲ್ಲ ಎಂದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.

ಒತ್ತಡ ತಂತ್ರ ಸರಿಯಲ್ಲ: ನೋಟಿಸ್ ಪರಿಶೀಲಿಸಿ ಇಂದೇ ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರು. ಇದರಿಂದ ಕೆರಳಿದ ಶರತ್ ಬಚ್ಚೇಗೌಡ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ‘ಒತ್ತಡ ತಂತ್ರ ತಂದು ಕಲಾಪಕ್ಕೆ ಅಡ್ಡಿಪಡಿಸುವುದು ಯಾರಿಗೂ ಶೋಭೆಯಲ್ಲ, ಭೋಜನ ವಿರಾಮದ ಬಳಿಕ ಚರ್ಚೆಗೆ ಅವಕಾಶ ಕೊಡುತ್ತೇನೆ' ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆದುಕೊಂಡರು.

‘ಶಾಸಕರ ಹಕ್ಕುಚ್ಯುತಿ ವಿಚಾರದ ಪ್ರಸ್ತಾಪಕ್ಕೆ ಸರಕಾರದ ವಿರೋಧವಿಲ್ಲ. ಯಾವುದೇ ವಿಚಾರ ಮುಚ್ಚಿಡುವ ಪ್ರಶ್ನೆಯೂ ಇಲ್ಲ. ಸದಸ್ಯರ ಹಕ್ಕುಗಳಿಗೆ ಚ್ಯುತಿಯಾಗಿದ್ದರೆ ಅವರಿಗೆ ಸ್ಪೀಕರ್ ರಕ್ಷಣೆ ನೀಡಬೇಕು. ಆದರೆ, ನೋಟಿಸ್ ಪರಿಶೀಲನೆ ನಡೆಸದೆ ಚರ್ಚೆಗೆ ಅವಕಾಶ ಸರಿಯಲ್ಲ. ವಸ್ತುಸ್ಥಿತಿಯನ್ನು ಸರಕಾರ ತಮ್ಮ ಮುಂದಿಡಲಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ನಿಮ್ಮ ಸಂದೇಶ ತಲುಪಿದೆ:

‘ಡಿ.ಕೆ.ಶಿವಕುಮಾರ್ ಅವರೇ ನೀವು ಯಾರಿಗೆ, ಏನು ಸಂದೇಶ ತಲುಪಿಸಬೇಕೋ ಅದನ್ನು ತಲುಪಿಸಿದ್ದೀರಿ, ಇನ್ನೂ ನಿಮ್ಮ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆದು ನಿಮ್ಮ ಸ್ಥಳಕ್ಕೆ ತೆರಳಿ'

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

ಶಿಷ್ಠಾಚಾರ ಪಾಲನೆ ಕಡ್ಡಾಯ:

‘ಸರಕಾರಿ ಕಾರ್ಯಕ್ರಮಗಳಲ್ಲಿ ಜನರಿಂದ ಆಯ್ಕೆಯಾದ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದು ಹಾಗೂ ಶಿಷ್ಠಾಚಾರ ಪಾಲನೆ ಮಾಡುವುದು ಕಡ್ಡಾಯ. ಶಿಷ್ಠಾಚಾರ ಉಲ್ಲಂಘನೆ ಹಲವು ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಶಿಷ್ಠಾಚಾರವನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ನಡೆದ ಘಟನೆ ಕುರಿತು ವರದಿ ಪಡೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು'

-ಬಸವರಾಜ ಬೊಮ್ಮಾಯಿ ಗೃಹ ಹಾಗೂ ಕಾನೂನು ಸಚಿವ

‘ನಾನು ಆರು ಬಾರಿ ಶಾಸಕನಾಗಿ ಆಯ್ಕೆಯಾಗಿ ಇಂದು ಈ ಸ್ಥಾನದಲ್ಲಿ ಕುಳಿತಿದ್ದೇನೆ. ಈ ತರಹದ ಶಿಷ್ಠಾಚಾರ ಉಲ್ಲಂಘನೆ ಸರಿಯಲ್ಲ, ಈ ತರಹದ ಘಟನೆಗಳ ಕುರಿತು ಹಲವು ಶಾಸಕರು ತಮ್ಮ ಗಮನಕ್ಕೆ ತಂದಿದ್ದು ಇಂತಹ ತಪ್ಪುಗಳಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡುತ್ತೇನೆ'

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News