ಶಿವಮೊಗ್ಗ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿದ 'ನಾಡಗೀತೆಯಲ್ಲಿ ಮಹಿಳೆಯ ಹೆಸರು'

Update: 2021-02-01 18:27 GMT

ಶಿವಮೊಗ್ಗ, ಫೆ.01: ನಾಡಗೀತೆಯಲ್ಲಿ ಮಹಿಳೆಯ ಹೆಸರೇ ಇಲ್ಲ ಎಂಬ ಆರೋಪದ ಧ್ವನಿ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.

ಸಮ್ಮೇಳನಕ್ಕೆ ಮುಂಚೆಯೇ ಸರ್ವಾಧ್ಯಕ್ಷೆ ಡಾ.ವಿಜಯಾದೇವಿಯವರು ನಾಡಗೀತೆಯಲ್ಲಿ ಕುವೆಂಪು ರವರು ಮಹಿಳೆಯ ಹೆಸರನ್ನು ಹೇಳಿಲ್ಲ. ಅಕ್ಕ ಸೇರಿದಂತೆ ಈ ನಾಡಿನಲ್ಲಿ ಪುರುಷರಷ್ಟೇ ಸಮರ್ಥವಾಗಿ ಮಹಿಳೆಯರು ಸಾಹಿತ್ಯವನ್ನು ರಚಿಸಿದ್ದಾರೆ. ಆದರೆ ರಾಷ್ಟ್ರಕವಿ ಕುವೆಂಪುರವರು ಅದೇಕೆ ಮಹಿಳೆಯ ಹೆಸರು ಕೈಬಿಟ್ಟರು ಗೊತ್ತಿಲ್ಲ ಎಂದು ವಿಷಾದಿಸಿದ್ದರು.

ಸೋಮವಾರ ಬೆಳಗ್ಗೆ ನಡೆದ ಸಮ್ಮೇಳನಾಧ್ಯಕ್ಷರ ಸಂವಾದದ ಗೋಷ್ಠಿಯಲ್ಲಿ ಕೂಡ ಇದು ಪ್ರತಿಧ್ವನಿಸಿತು. ಡಾ.ಎನ್.ಆರ್.ಮಂಜುಳ ಈ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಅವರು ನಾಡಗೀತೆಯಲ್ಲಿ ಮಹಿಳೆಯರ ಸ್ಮರಣೆ ಇಲ್ಲ ಎನ್ನುವುದು ನಿಜ. ಆದರೆ ಸರ್ಕಾರ ಇದನ್ನು ನಾಡಗೀತೆಯಾಗಿ ಮಾಡಿದೆ. ಹಾಗಾಗಿ ಇದನ್ನು ನಾವು ಒಪ್ಪಿಕೊಳ್ಳಬೇಕು. ಎಷ್ಟಾದರೂ ಮಹಿಳೆ ಕ್ಷಮೆಯ ಗುಣವನ್ನು ಹೊಂದಿದ್ದಾಳೆ ಎಂದು ಚರ್ಚೆಯನ್ನು ಅಲ್ಲಿಗೆ ಮೊಟಕುಗೊಳಿಸಿದರು.

ಕವಯತ್ರಿ ಶೀಲಾಸುರೇಶ್ ಕೆರೆಗೆ ಹಾರದಲ್ಲಿ ಮಹಿಳೆಯನ್ನು ಬಲಿಯಾಗಿ ಕೊಡುವುದನ್ನು ನಾವು ಒಪ್ಪಿಕೊಳ್ಳಬೇಕೆ ಎಂಬ ಪ್ರಶ್ನೆಯನ್ನು ಎತ್ತಿದರು. ಇದಕ್ಕೆ ಉತ್ತರ ನೀಡಿದ ಡಾ.ವಿಜಯಾದೇವಿ ಸಾಮಾಜಿಕ ಒಳಿತಿಗಾಗಿ ಬಲಿಯಾಗುವುದು ಬೇರೆ, ಮೌಢ್ಯಕ್ಕೆ ಬಲಿಯಾಗುವುದು ಬೇರೆ. ಸುಮ್ಮನೆ ಬಲಿಯಾಗುವುದನ್ನು ಯಾರು ಒಪ್ಪಲು ಸಾಧ್ಯವಿಲ್ಲ. ತ್ಯಾಗದ ಬಲಿದಾನವನ್ನು ಮತ್ತು ಸಮಾಜದ ಒಳಿತಿಗಾಗಿ ಆ ಕಾಲದಲ್ಲಿ ಆದ ಹೆಣ್ಣಿನ ತ್ಯಾಗವನ್ನು ಒಪ್ಪಿಕೊಳ್ಳುವುದರಲ್ಲಿ ಅರ್ಥವಿದೆ ಎಂದರು.    

ಮಮತ ಹೆಗಡೆ ಅಕ್ಕ ಮಹಾದೇವಿಯ 3 ಷರತ್ತುಗಳ ಬಗ್ಗೆ ಧ್ವನಿ ಎತ್ತಿದರು. ಇದು ತಪ್ಪೇ ಸರಿಯೇ ಎಂಬ ಬಗ್ಗೆ ಜಿಜ್ಞಾಸೆಯಿದೆ ಎಂದರು. ವಿಜಯಾದೇವಿಯವರು ಈ ಪ್ರಶ್ನೆಗೂ ಉತ್ತರ ನೀಡಿ ಅಕ್ಕನ ಪ್ರಶ್ನೆಗಳು ಸರಿಯಾಗಿಯೇ ಇದೆ. ಆ ಕಾಲದಲ್ಲಿ ರಾಜನ ತೀರ್ಮಾನ ಸರಿಯಿದ್ದಿರಬಹುದು. ಆದರೆ ಅದು ಒಂದು ಹೆಣ್ಣಿನ ಇಚ್ಚೆಗೆ ವಿರುದ್ಧವಾದದ್ದು. ಅಕ್ಕನಿಗೆ ಕೌಶಿಕ ರಾಜನ ಜೊತೆ ಮದುವೆಯೆ ಇಷ್ಟವಿರಲಿಲ್ಲ ಅಂದ ಮೇಲೆ ಆಕೆ ಸಹಜವಾಗಿಯೇ ಈ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದರು.

ಲಕ್ಷ್ಮೀಶಾಸ್ತ್ರಿ ತಮ್ಮ ಬೆಳವಣಿಗೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡದ ಅಸ್ಮಿತೆ ನನ್ನನ್ನು ರೂಪಿಸಿದೆ. ಕನ್ನಡ ಸಾಹಿತ್ಯವೇ ನನ್ನ ಬೆಳವಣಿಗೆಗೆ ಕಾರಣವಾಗಿದೆ. ಬರಗೂರು ರಾಮಚಂದ್ರಪ್ಪ ಮುಂತಾದವರ ಮಾರ್ಗದರ್ಶನ ನನಗಿದೆ. ಕನ್ನಡ ನನ್ನ ಬೆಳೆಸಿದೆ, ಬೆಳೆಸುತ್ತಿದೆ ಎಂದರು.

ಶಾಲಿನಿಯವರು, ತಮ್ಮ ಸಾಹಿತ್ಯ ವಚನ ಸಾಹಿತ್ಯದ ಮೇಲೆಯೇ ಹೆಚ್ಚಾಗಿದೆ. ಇದನ್ನು ಬಿಟ್ಟು ಬೇರೆ ಪ್ರಕಾರಕ್ಕೆ ತಾವು ಹೊಂದಿಕೊಳ್ಳಲಿಲ್ಲವೇ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ವಿಜಯಾದೇವಿ ಒಂದು ವಿಷಯದ ಮೇಲೆ ಸಾಕಷ್ಟು ಅಧ್ಯಯನ ಮಾಡಿದರೆ ಅದರ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯ. ಆದರೆ ತಾವು ನೂರಾರು ಲೇಖನಗಳನ್ನು ಪ್ರಕಟಿಸಿದ್ದು, ಅವು ವಚನ ಸಾಹಿತ್ಯದ ಆಚೆ ಇವೆ ಎಂದರು.

ಸಂವಾದದಲ್ಲಿ ರುಕ್ಮಿಣಿ ಆನಂದ, ವಿನೋದ ಆನಂದ್, ಶಾಲಿನಿ ರಾಮಸ್ವಾಮಿ, ಜಿ.ಎಸ್.ಸರೋಜ, ಪದ್ಮಾಸುರೇಶ್, ಕೆ.ವೈ.ರಾಮಚಂದ್ರಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಕ.ಸಾ.ಪ.ಗೌರವ ಕಾರ್ಯದರ್ಶಿ ರುದ್ರಮುನಿ ಎನ್.ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹೆಚ್.ಎನ್.ಮಹಾರುದ್ರ ಆಶಯ ನುಡಿಗಳನ್ನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಉಪಸ್ಥಿತರಿದ್ದರು. ಹಾಲೇಶ್ ನವಿಲೆ ಸ್ವಾಗತಿಸಿದರು, ರಂಜನಿ ದತ್ತಾತ್ರಿ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News