ರಾಜ್ಯದಲ್ಲಿ ‘ಹುಕ್ಕಾಬಾರ್' ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಬೊಮ್ಮಾಯಿ

Update: 2021-02-02 11:35 GMT

ಬೆಂಗಳೂರು, ಫೆ. 2: ಉದ್ಯಾನನಗರಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿನ ‘ಹುಕ್ಕಾಬಾರ್'ಗಳನ್ನು ನಿಷೇಧಿಸಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗೃಹ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಸೌಮ್ಯಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಯುವಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಹುಕ್ಕಾಬಾರ್ ಗಳನ್ನು ನಿಷೇಧಿಸುವ ಸಂಬಂಧ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಕಾನೂನುಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಈಗಾಗಲೇ ಹುಕ್ಕಾಬಾರ್ ಗಳ ವಿಷಯದಲ್ಲಿ ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಅವರು, ಹುಕ್ಕಾಬಾರ್ ಗಳ ನಿಯಂತ್ರಣಕ್ಕೆ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜನಜಾಗೃತಿ ಅಗತ್ಯ: ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಅಗತ್ಯ. ಪೋಷಕರು ತಮ್ಮ ಮಕ್ಕಳ ಬಗ್ಗೆ, ವಿದ್ಯಾರ್ಥಿಗಳು ತಮ್ಮ ಸಹಪಾಠಿ ಸ್ನೇಹಿತರ ಬಗ್ಗೆ, ಶಿಕ್ಷಕರು ಸೇರಿದಂತೆ ಸಾಮಾನ್ಯ ಜನರು ಪೊಲೀಸರೊಂದಿಗೆ ಕೈಜೋಡಿಸಬೇಕು. ಶಾಲಾ-ಕಾಲೇಜುಗಳು, ವಿದೇಶಿಯರು ವಾಸವಾಗಿರುವ ಪ್ರದೇಶಗಳು, ಕೊಳಚೆ ಪ್ರದೇಶಗಳು, ಸಾರ್ವಜನಿಕ ಸಭೆ, ಮೆರವಣಿಗೆ ಮಾಡಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಮಾದಕ ವಸ್ತುಗಳ ನಿಯಂತ್ರಣ ಕೇವಲ ಸರಕಾರ, ಪೊಲೀಸರ ಕೆಲಸವಲ್ಲ. ಬದಲಿಗೆ ಜನರೇ ಮುಂದೆ ನಿಂತು ಮಾಡಬೇಕಾದ ಕೆಲಸ. ಮಾದಕ ವಸ್ತುಗಳ ಹಾವಳಿ ಹೆಚ್ಚಿದ್ದು, ಇದನ್ನು ತಡೆಯಲು ಪೋಷಕರಿಂದ ಹಿಡಿದು ಎಲ್ಲರೂ ಸಹಕಾರ ನೀಡಬೇಕು ಎಂದ ಅವರು, ಬಿಸ್ಕೆಟ್, ಚಾಕಲೇಟ್ ರೂಪದಲ್ಲಿ ಮಾದಕ ವಸ್ತುಗಳು ಬರುತ್ತಿದ್ದು, ಅವುಗಳ ಸಂಪೂರ್ಣ ನಿಯಂತ್ರಣಕ್ಕೆ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರೂ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಯಲು ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಡ್ರಗ್ಸ್ ವಿರುದ್ಧದ ಸಮರ ನಿರಂತರವಾಗಿರುತ್ತದೆ. 2016ರಲ್ಲಿ ಕೇವಲ 127 ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, 2020ರಲ್ಲಿ 2,786 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಐದು ವರ್ಷಗಳಲ್ಲಿ ಜಪ್ತಿ ಮಾಡಿದಷ್ಟು ಮಾದಕ ವಸ್ತುಗಳನ್ನು ಕೇವಲ ಐದೇ ತಿಂಗಳಲ್ಲೆ ನಮ್ಮ ಸರಕಾರ ಮಾಡಿದೆ ಎಂದು ತಿಳಿಸಿದರು.

ಕಾನೂನು ಬಿಗಿ: ಮಾದಕ ವಸ್ತುಗಳ ನಿಯಂತ್ರಣಕ್ಕೆ ಕೇಂದ್ರದ ಕಾನೂನಿನಲ್ಲಿದ್ದ ಕೆಲ ಲೋಪಗಳನ್ನು ಸರಿಪಡಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರು ಜೈಲಿನಿಂದ ಒಂದು ವರ್ಷ ಕಾಲ ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಇದೇ ಮೊದಲ ಬಾರಿಗೆ ಡಾರ್ಕ್‍ವೆಬ್ ಆನ್‍ಲೈನ್ ಮೂಲಕ ಸರಬರಾಜು ಆಗುತ್ತಿದ್ದ ಮಾದಕ ವಸ್ತುಗಳ ಮೇಲೆ ನಿಗಾ ಇರಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಮಾದಕ ವಸ್ತುಗಳ ವಿರುದ್ಧ ಜನಜಾಗೃತಿಗೆ ಅಧಿವೇಶನದ ಬಳಿಕ ಮಾಧ್ಯಮಗಳ ಸಹಕಾರ ಅಗತ್ಯವಿದ್ದು, ಅವರುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದ ಅವರು, ಔಷಧಾಲಯಗಳಲ್ಲಿ ಮಾದಕ ವಸ್ತುಗಳ ದೊರೆಯುವಂತಹ ಪರಿಸ್ಥಿತಿಯನ್ನು ತಪ್ಪಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ‘ಸೀಜನ್' ಆಗದಿರಲಿ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸೌಮ್ಯಾರೆಡ್ಡಿ, ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳು ಒಂದು ರೀತಿಯಲ್ಲಿ ಮಾವಿನಹಣ್ಣು, ಅವರೇಕಾಯಿ ಸೀಜನ್(ಸುಗ್ಗಿಕಾಲ) ರೀತಿಯಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಸಮರ್ಪಕ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಯುವಜನರ ಪರಿಸ್ಥಿತಿ ಹೇಳತೀರದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News