ಮಾಜಿ ಸಿಎಂ ಧರಂಸಿಂಗ್ ಸಂಬಂಧಿಯ ಕೊಲೆ ಪ್ರಕರಣ: ಓರ್ವ ಆರೋಪಿ ಆತ್ಮಹತ್ಯೆ

Update: 2021-02-02 11:55 GMT

ಬೆಂಗಳೂರು, ಫೆ.2: ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ಸಂಬಂಧಿ ಸಿದ್ದಾರ್ಥ್ ದೇವೇಂದರ್ ಸಿಂಗ್ ಕೊಲೆಗೈದ ಪ್ರಕರಣದ ಆರೋಪಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಿರುಪತಿಯ ಕಾರ್ಲಗುಂಟದ ಚೆನ್ನಾರೆಡ್ಡಿ ಎಂಬವರ ಪುತ್ರ ಶ್ಯಾಂಸುಂದರ್ ರೆಡ್ಡಿ(28) ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೋರ್ವ ಆರೋಪಿ ವಿನೋದ್ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಮೃತ ಶ್ಯಾಂಸುಂದರ್ ರೆಡ್ಡಿ ಬಿ.ಟೆಕ್ ವ್ಯಾಸಂಗ ಮಾಡಿದ್ದು 2014 ರಿಂದ ಉದ್ಯೋಗಕ್ಕಾಗಿ ಚೆನ್ನೈ ಇನ್ನಿತರ ಕಡೆಗಳಲ್ಲಿ ಅಲೆದಾಡಿ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ವಿನೋದ್ ಜೊತೆ ಕೆಲವು ದಿನಗಳಕಾಲ ವಾಸವಿದ್ದ. ವಿನೋದ್ ಸಹ ತಿರುಪತಿಯ ಕಾರ್ಲಗುಂಟ ನಿವಾಸಿಯಾಗಿದ್ದಾನೆ. ವಾರದ ಹಿಂದೆ ವಿನೋದ್ ಮತ್ತು ಶ್ಯಾಂಸುಂದರ್ ರೆಡ್ಡಿ ಇಬ್ಬರೂ ತಿರುಪತಿಗೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೂ ಮೊದಲು ಜ.19 ರಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಹತ್ಯೆಯಾಗಿದ್ದು, ಆ ಕೊಲೆ ಪ್ರಕರಣದಲ್ಲಿ ಈ ಇಬ್ಬರ ಕೈವಾಡವಿದೆ ಎಂದು ಪೊಲೀಸರು ಗುರುತಿಸಿದ್ದಾರೆ.

ಕೊಲೆ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ಬರುತ್ತಾರೆಂದು ಹೆದರಿ ವಿನೋದ್ ಮತ್ತು ಶ್ಯಾಂಸುಂದರ್ ಆತ್ಮಹತ್ಯೆಗೆ ಶರಣಾಗಲು ತೀರ್ಮಾನಿಸಿ, ನಾಲ್ಕು ದಿನಗಳ ಹಿಂದೆ ತನ್ನ ಶರ್ಟ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿರುಪತಿ ಶ್ರೀನಿವಾಸಂ ಹಿಂಬದಿಯಿರುವ ತಾಳ್ಲಪಾಕ ಕೆರೆಯ ಬಳಿಯ ಮುಳ್ಳಿನಕಂಟಿಯಲ್ಲಿ ಶ್ಯಾಂಸುಂದರ್ ದೇಹಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸೋಮವಾರ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್‍ನನ್ನು ಅಮೃತಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೂರಿನ ನಲ್ಲಮಲ್ಲ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಿದ್ದಾರೆ. ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಪಡೆದ ಬಳಿಕ ಹೂತಿರುವ ಶವ ಹೊರತೆಗೆದಿದ್ದಾರೆ.

ಹಲವರು ಸೇರಿ ಕೃತ್ಯ: ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದು, ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ, ಎಲ್ಲ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News