ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ

Update: 2021-02-02 11:59 GMT

ಬೆಂಗಳೂರು, ಫೆ.2: ರಾಜ್ಯ ವ್ಯಾಪಿಯ ನಾಲ್ಕು ಸಾರಿಗೆ ನಿಗಮಗಳ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ರಾಜ್ಯ ಸರಕಾರ ಈಡೇರಿಸದಿದ್ದರೆ, ಮತ್ತೆ ಮುಷ್ಕರ ನಡೆಸಲಾಗುವುದೆಂದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನೌಕರರಿಂದ ಸರಕಾರಕ್ಕೆ ಒಂದೂವರೆ ತಿಂಗಳ ಗಡುವು ನೀಡಲಾಗಿದೆ. ಒಂದೂವರೆ ತಿಂಗಳೊಳಗೆ 9 ಬೇಡಿಕೆಯನ್ನು ಈಡೇರಿಸದಿದ್ದರೆ ಮತ್ತೆ ಮುಷ್ಕರ ಕೈಗೊಳ್ಳುತ್ತೇವೆ ಎಂದರು.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ ನಲ್ಲಿ ನಡೆಸಿದ ಮುಷ್ಕರದ ಸಂದರ್ಭದಲ್ಲಿ ಮೂರು ತಿಂಗಳಿನಲ್ಲಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರಕಾರ 45 ದಿನವಾದರೂ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಹೇಳಿದರು.

ಉಳಿದ 45 ದಿನಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಹೋರಾಟಕ್ಕೆ ಇಳಿಯವುದು ಅನಿವಾರ್ಯವಾಗುತ್ತದೆ. ಅಲ್ಲದೆ, ಇನ್ನು 45 ದಿನಗಳು ಕಾಲಾವಕಾಶವಿದೆ. ಸರಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಈ ಸಂಬಂಧ ಸರಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು.

ಸಾರಿಗೆ ಸಚಿವರು ಆರೋಗ್ಯ ವಿಮೆ ಯೋಜನೆ, ತರಬೇತಿ ಅವಧಿ ಒಂದು ವರ್ಷಕ್ಕೆ ಇಳಿಕೆ, ಭತ್ತೆ ನೀಡುವುದು ಸೇರಿದಂತೆ ಮೂರು ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಆದರೆ, ಅದಾವುದರ ಬಗ್ಗೆಯೂ ಸ್ಪಷ್ಟನೆ ಇಲ್ಲ, ವೇತನವನ್ನು ಕೂಡ ಅರ್ಧ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಷ್ಕರದ ವೇಳೆ ನೌಕರರ ಮೇಲೆ ದಾಖಲಿಸಿರುವ ಪೊಲೀಸ್ ದೂರುಗಳನ್ನು ಹಿಂಪಡೆಯಬೇಕು. ನೌಕರರ ಆಮಾನತು ಆದೇಶವನ್ನು ಹಿಂಪಡೆಯಬೇಕು, ಅವೈಜ್ಞಾನಿಕ ಪಾಳಿ ಪದ್ದತಿ ರದ್ದುಪಡಿಸಬೇಕು, ಅನುಚಿತವಾಗಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ, ಮಹಿಳಾ ಸಿಬ್ಬಂದಿಗಳು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಸೃಷ್ಟಿ ಮಾಡುವುದು, ಅರ್ಧ ವೇತನ ಮತ್ತು ತಡವಾಗಿ ನೀಡುವ ವೇತನವನ್ನು ಕೈಬಿಟ್ಟು ಸಮಯಕ್ಕೆ ಸರಿಯಾಗ ವೇತನ ನೀಡುವುದು ಹೀಗೆ ಹಲವು ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸಿದ್ದೇವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷೆ ಚಂಪಕಾವತಿ ಸೇರಿದಂತೆ ಪ್ರಮುಖರಿದ್ದರು.

ತುರ್ತು ವೇತನ ನೀಡಿ

ಡಿಸೆಂಬರ್ ಮಾಸದ ವೇತನವನ್ನು ರಾಜ್ಯ ಸರಕಾರ ನಾಲ್ಕು ಸಾರಿಗೆ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ. ಇದರಿಂದ ನೌಕರರಿಗೆ ಕಷ್ಟಕರವಾಗಿದ್ದು, ಈ ಕೂಡಲೇ ವೇತನ ಬಿಡುಗಡೆ ಮಾಡಬೇಕು.

-ಕೋಡಿಹಳ್ಳಿ ಚಂದ್ರಶೇಖರ್, ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News