ಶೃಂಗೇರಿ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ: ಗೃಹ ಸಚಿವ ಬೊಮ್ಮಾಯಿ

Update: 2021-02-02 13:44 GMT

ಬೆಂಗಳೂರು, ಫೆ. 2: ‘ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾರೇ ಆರೋಪಿಗಳಿದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಈ ವಿಚಾರದಲ್ಲಿ ನನಗೆ ಈವರೆಗೆ ಯಾರೂ ಪ್ರಭಾವ ಬೀರಿಲ್ಲ. ಯಾವುದೇ ಒತ್ತಡಗಳಿಗೂ ಮಣಿಯುವ ಪ್ರಶ್ನೆಯೇ ಇಲ್ಲ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮೇಲ್ತುವಾರಿ ವಹಿಸಲು ಸೂಚನೆ ನೀಡಲಿದ್ದು, ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆಯಲ್ಲಿ ಯಾರೇ ದೋಷಿಗಳಿದ್ದರೂ ಕ್ರಮ ಕೈಗೊಳ್ಳಲಾಗುವುದು. ಈ ಹಂತದಲ್ಲಿ ಯಾರನ್ನೂ ಪ್ರಕರಣದಿಂದ ಕೈಬಿಡಲು ಸಾಧ್ಯವಿಲ್ಲ. ನಿಷ್ಪಕ್ಷ ತನಿಖೆ ನಡೆಯಲಿದ್ದು, ತಪ್ಪಿತಸ್ಥರ ಯಾರು ಎಂದು ತನಿಖಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ನಿಷ್ಪಕ್ಷ ತನಿಖೆಗೆ ಆಗ್ರಹ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ರಾಜೇಗೌಡ, ನಾಲ್ಕು ತಿಂಗಳಿನಿಂದ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರವಾಗಿದ್ದು, ಈ ವಿಚಾರವಾಗಿ ಈಗಾಗಲೇ 17 ಜನರ ಬಂಧನವಾಗಿದೆ. ಅದರಲ್ಲಿ ಬಹುತೇಕರು ರಾಜಕೀಯ ಪಕ್ಷ ಮತ್ತು ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ನಿಷ್ಪಕ್ಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಾಲಕಿಯ ಚಿಕ್ಕಮ್ಮನ ಮೇಲೆಯೂ ಪ್ರಕರಣ ದಾಖಲಿಸಿದ್ದು, ಅವರ ಹೆಸರು ಕೈ ಬಿಡಬೇಕು. ಬಾಲ ಕಾರ್ಮಿಕ ಕಾಯ್ದೆಯಡಿ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಪ್ರಕರಣ ದಾಖಲಿಸಲಿ ಎಂದ ಆವರು, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾವಿ ಮೂಲದ ಹದಿನೈದು ವರ್ಷದ ಬಾಲಕಿ ತನ್ನ ತಾಯಿ ನಿಧನ ನಂತರ ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆ ಜತೆ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನೆಲೆಸಿದ್ದಳು. ಈ ಸಂದರ್ಭ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಇದನ್ನು ಮೊಬೈಲ್‍ನಲ್ಲಿ ವಿಡಿಯೊ ಮಾಡಿಕೊಂಡಿದ್ದ. ಅನಂತರ ತಮ್ಮೊಂದಿಗೆ ಸಹಕರಿಸದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬ್ಲಾಕ್‍ಮೇಲ್ ಮಾಡಿ ಮತ್ತೆ ಮತ್ತೆ ಅತ್ಯಾಚಾರವೆಸಗಿದ್ದ ಎಂದು ಹೇಳಲಾಗಿದೆ.

ಆ ವಿಡಿಯೋವನ್ನಿಟ್ಟುಕೊಂಡು ಬೆದರಿಕೆವೊಡ್ಡಿ ಆತನ ಸ್ನೇಹಿತರು, ಪರಿಚಿತರನ್ನು ಕಳಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಲು ಸಹಕರಿಸಿದ್ದ. ತನ್ನ ಮೇಲೆ ಅತ್ಯಾಚಾರವೆಸಗಿದ 15ಕ್ಕೂ ಹೆಚ್ಚು ಮಂದಿಯ ಹೆಸರುಗಳನ್ನು ಬಾಲಕಿ ಹೇಳಿದ್ದು, ಹೆಸರು ಗೊತ್ತಿಲ್ಲದ ಹಲವು ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಬಾಲಕಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದ್ದಳು. ಅಪಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲಿಗರು ಇದ್ದಾರೆ ಎಂದು ಹೇಳಲಾಗುತ್ತಿದ್ದು, ಪ್ರಕರಣವನ್ನು ಮುಚ್ಚಿಹಾಕಲು ರಾಜಕೀಯ ಮುಖಂಡರ ಒತ್ತಡವಿದೆ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News