ಗಣತಂತ್ರ ದಿನದ ಹಿಂಸಾಚಾರ: ಕಾನೂನಿನಂತೆ ಕ್ರಮ ಕೈಗೊಳ್ಳಲು ಕೇಂದ್ರ, ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ನಿರ್ದೇಶ

Update: 2021-02-02 14:05 GMT

ಹೊಸದಿಲ್ಲಿ,ಫೆ.2: ಗಣತಂತ್ರ ದಿನದಂದು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾನಿರತ ರೈತರು ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದ್ದ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಎಫ್‌ಐಆರ್‌ಗಳಲ್ಲಿ ಕಾನೂನಿನಂತೆ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ಪೊಲೀಸರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ನಿರ್ದೇಶ ನೀಡಿದೆ.

ಜನವರಿ 26ರಿಂದ ಪೊಲೀಸರ ಅಕ್ರಮ ಬಂಧನದಲ್ಲಿರುವ ವ್ಯಕ್ತಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ಪೀಠವು ಈ ನಿರ್ದೇಶವನ್ನು ಹೊರಡಿಸಿತು.

ಇದೊಂದು ಪ್ರಚಾರಾರ್ಥ ಸಲ್ಲಿಸಿರುವ ಅರ್ಜಿಯಂತೆ ಕಂಡು ಬರುತ್ತಿದೆ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸಿಂಘು, ಘಾಝಿಯಾಬಾದ್ ಮತ್ತು ಟಿಕ್ರಿ ಗಡಿಗಳಿಂದ ಜನರನ್ನು ಬಂಧಿಸಲಾಗಿದೆ ಎಂದು ತನಗೆ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಮೂಲಕ ತಿಳಿದುಬಂದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಜನರನ್ನು ತಾವು ಬಂಧಿಸಿದ್ದೇವೆ ಮತ್ತು ಈವರೆಗೆ 22 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಜ.27ರಂದು ತಿಳಿಸಿದ್ದರು ಎಂದು ಕಾನೂನು ಪದವೀಧರ ಹರ್ಮನ್ ಪ್ರೀತ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದರು. ಮಂಗಳವಾರ ವಿಚಾರಣೆ ಸಂದರ್ಭ ಸಿಂಗ್ ಪರ ನ್ಯಾಯವಾದಿ ಆಶಿಮಾ ಮಾಂಡ್ಲಾ ಅವರು,ಮಾಧ್ಯಮ ವರದಿಗಳಂತೆ ಘಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು 44 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು ಸುಮಾರು 120 ಜನರನ್ನು ಬಂಧಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಬಂಧನದ ಮೆಮೊಗಳಿಗೆ ಅಂಕಿತ ಪಡೆದುಕೊಳ್ಳದಿರುವುದು,ಅವರ ಬಂಧುಗಳಿಗೆ ಮಾಹಿತಿ ನೀಡದಿರುವುದು ಮತ್ತು ಅವರನ್ನು ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸದಿರುವುದು ಅಕ್ರಮ ಬಂಧನದ ವ್ಯಾಖ್ಯೆಯಲ್ಲಿ ಸೇರುತ್ತವೆ ಎಂದು ಮಾಂಡ್ಲಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News