ರಾಜ್ಯದ 36 ಸ್ಥಳಗಳಲ್ಲಿ ಎಸಿಬಿ ದಾಳಿ: ಸರಕಾರಿ ಅಧಿಕಾರಿಗಳ ಬಳಿ ಬಹುಕೋಟಿ ಮೌಲ್ಯದ ಸಂಪತ್ತು ಪತ್ತೆ

Update: 2021-02-02 15:36 GMT

ಬೆಂಗಳೂರು, ಫೆ.2: ಆದಾಯಕ್ಕಿಂತ ಅಧಿಕ ಸಂಪಾದನೆ ಆರೋಪ ಬೆನ್ನಲ್ಲೇ ರಾಜ್ಯದ ಏಳು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ 36 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಎಸಿಬಿ ತನಿಖಾಧಿಕಾರಿಗಳು, ಅಕ್ರಮ ಬಹುಕೋಟಿ ಸಂಪತ್ತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಎಸಿಬಿ ಪಶ್ಚಿಮ ವಲಯದ ಎಸ್ಪಿ ಭೋಪಯ್ಯ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಗರ ಮತ್ತು ಗ್ರಾಮಾಂತರ ಯೋಜನೆಯ ನಿರ್ದೇಶಕ ಕೆ.ವಿ.ಜಯರಾಜ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 2 ವಾಸದ ಮನೆ, 3 ನಿವೇಶನ, 11 ಲಕ್ಷ ರೂ. ನಗದು 10 ಲಕ್ಷ ವಿಮಾ ಬಾಂಡ್‍ಗಳು, ಬ್ಯಾಂಕ್ ಖಾತೆಗಳಲ್ಲಿ 77 ಲಕ್ಷ ರೂ.ಗಳು, ಪತ್ನಿಯ ಹೆಸರಿನಲ್ಲಿ 20 ಲಕ್ಷ ಠೇವಣಿ, 191 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ಸಾಮಾನುಗಳು ಪತ್ತೆಯಾಗಿದೆ.

ಉತ್ತರ ವಲಯದ ಎಸಿಬಿ ಎಸ್ಪಿ ನ್ಯಾಮೇಗೌಡ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ದೇವರಾಜ ಕಲ್ಮೇಶ ಶಿಗ್ಗಾವಿ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, 2 ವಾಸದ ಮನೆಗಳು, 2 ನಿವೇಶನಗಳು, 2 ಕಾರುಗಳು, 26 ಎಕರೆ ಕೃಷಿ ಜಮೀನು, 59.84 ಲಕ್ಷ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 30 ಲಕ್ಷ ರೂ. ಠೇವಣಿ, 500 ಗ್ರಾಂ ಚಿನ್ನಾಭರಣ, 4 ಕೆಜಿ ಬೆಳ್ಳಿ ಸಾಮಾನುಗಳು, ಸುಮಾರು 3 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಕೇಂದ್ರ ವಲಯದ ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 3 ವಾಸದ ಮನೆಗಳು, 3 ಫ್ಲಾಟ್‍ಗಳು, 3 ನಿವೇಶನಗಳು, 1 ಖಾಸಗಿ ಆಸ್ಪತ್ರೆ, 2 ಕಾರುಗಳು, 1 ಬೈಕ್, ಬ್ಯಾಂಕ್ ಖಾತೆಗಳಲ್ಲಿ 61.21 ಲಕ್ಷ ರೂ. ಠೇವಣಿ, 1 ಎಕರೆ 13 ಗಂಟೆ ಕೃಷಿ ಜಮೀನು ಪತ್ತೆಯಾಗಿದೆ.

ಅದೇ ರೀತಿ, ಬೆಂಗಳೂರು ನಗರ ವಿಭಾಗದ ಎಸಿಬಿ ಎಸ್ಪಿ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಬೆಂಗಳೂರಿನ ಸಹಕಾರ ಸೌಧದ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ.ಪಾಂಡುರಂಗ ಗರಗ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 2 ವಾಸದ ಮನೆಗಳು, 1 ಫ್ಲಾಟ್, 3 ಕಾರುಗಳು, 1 ಟ್ರ್ಯಾಕ್ಟರ್, 3 ಬೈಕ್, 1 ಕೆಜಿ 166 ಗ್ರಾಂ ಚಿನ್ನಾಭರಣ, 20 ಲಕ್ಷ ವಿಮಾ ಪಾಲಿಸಿಗಳು, 31 ಕೆಜಿ ಬೆಳ್ಳಿ ಸಾಮಾನುಗಳು, 10 ಎಕರೆ ಕೃಷಿ ಜಮೀನು, 4.44 ಲಕ್ಷ ರೂ.ನಗದು, ಸುಮಾರು 20 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಪೂರ್ವ ವಲಯದ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 2 ವಾಸದ ಮನೆಗಳು, 1 ಫಾರ್ಮ್ ಹೌಸ್, 2 ನಿವೇಶನಗಳು, 2 ಕಾರುಗಳು, 1 ಟ್ರ್ಯಾಕ್ಟರ್, 1 ಬೈಕ್, 850 ಗ್ರಾಂ ಚಿನ್ನಾಭರಣ, 3.500 ಕೆಜಿ ಬೆಳ್ಳಿ ಸಾಮಾನುಗಳು, 4.87 ಲಕ್ಷ ರೂ. ನಗದು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 5 ಲಕ್ಷ ರೂ. 63 ಲಕ್ಷ ರೂ.ಗಳ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಈಶಾನ್ಯ ವಲಯದ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ್ ನೇತೃತ್ವದಲ್ಲಿ ಮಾಗಡಿ ಉಪ ವಿಭಾಗ ಲೋಕೋಪಯೋಗಿ ಕಿರಿಯ ಇಂಜಿನಿಯರ್ ಚನ್ನಬಸಪ್ಪ ಮಾಲಕತ್ವದ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 8 ಫ್ಲಾಟ್‍ಗಳು, 1 ಸೂಪರ್ ಮಾರ್ಟ್, 1 ಫಾರ್ಮ್ ಹೌಸ್, 2 ಕಾರುಗಳು, 2 ದ್ವಿಚಕ್ರ ವಾಹನಗಳು, 1,02,790 ರೂ. ನಗದು, 125 ಗ್ರಾಂ ಚಿನ್ನಾಭರಣ, 650 ಗ್ರಾಂ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ.

ಇನ್ನು, ಬಳ್ಳಾರಿ ವಲಯದ ಪೊಲೀಸ್ ಅಧೀಕ್ಷಕ ಗುರುನಾಥ್ ಮತ್ತೂರ್ ಅವರ ನೇತೃತ್ವದಲ್ಲಿ ಕಿಮ್ಸ್‍ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ 1 ವಾಸದ ಮನೆ, 4 ನಿವೇಶನಗಳು, 2 ಕಾರುಗಳು, 2 ದ್ವಿಚಕ್ರ ವಾಹನಗಳು, 800 ಗ್ರಾಂ ಚಿನ್ನಾಭರಣ, 9 ಕೆಜಿ 300 ಗ್ರಾಂ ಬೆಳ್ಳಿ ಸಾಮಾನುಗಳು, 1.94 ಲಕ್ಷ ರೂ. ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News