ಪೊಲೀಸ್ ಸಿಬ್ಬಂದಿಗೂ ಆರೋಗ್ಯ ಭಾಗ್ಯ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Update: 2021-02-02 15:40 GMT

ಬೆಂಗಳೂರು, ಫೆ. 2: ರಾಜ್ಯದಲ್ಲಿರುವ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಸಿಜಿಎಚ್‍ಎಸ್ ಮಾದರಿಯಲ್ಲೆ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ರಾಜೇಗೌಡ ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ಪೊಲೀಸ್ ಕಾನ್‍ಸ್ಟೇಬಲ್‍ಗಳು ಮತ್ತು ಅವರ ಕುಟುಂಬದವರಿಗೆ ರಾಜ್ಯದ 179 ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುತ್ತಿದೆ. ಚಿಕಿತ್ಸೆಯ ಸಂಪೂರ್ಣ ಹಣವನ್ನು ಸರಕಾರವೇ ಭರಿಸುತ್ತಿದೆ. 2019-20ನೆ ಸಾಲಿನ ಫೆಬ್ರವರಿ 21ರ ವರೆಗೂ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವ ಪೊಲೀಸ್ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ಭರಿಸಲಾಗಿದೆ. ಸರಕಾರವೇ ಹಣ ಭರಿಸುತ್ತದೆ. ಇನ್ಸೂರೆನ್ಸ್ ಕಂಪೆನಿ ಯಾವುದೂ ಇಲ್ಲ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಎಲ್ಲ ಪೊಲೀಸರನ್ನು ವಾರಿಯರ್ ಎಂದು ಪರಿಗಣಿಸಿ ಇಲಾಖೆಯಿಂದ ಅವರಿಗೆ ಸಿಗುವ ಇತರ ಪರಿಹಾರಗಳ ಜತೆಗೆ ಹೆಚ್ಚುವರಿಯಾಗಿ 30 ಲಕ್ಷ ರೂ.ನೀಡಲಾಗಿದೆ ಎಂದ ಅವರು, 2019-20 ಮತ್ತು 2020-21ನೆ ಸಾಲಿನಲ್ಲಿ ಕರ್ತವ್ಯದ ಮೇಲಿದ್ದಾಗ ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ 41 ಪೊಲೀಸ್ ಕಾನ್‍ಸ್ಟೇಬಲ್‍ಗಳು ಮೃತಪಟ್ಟಿದ್ದು, ಇವರಲ್ಲಿ ಇದುವರೆಗೂ 21 ಜನರಿಗೆ ಪರಿಹಾರ ನೀಡಿದ್ದೇವೆ.

ಉಳಿದ 19 ಮೃತ ಸಿಬ್ಬಂದಿಗಳ ಕುಟುಂಬಗಳಿಗೂ ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ. ಈ ಪರಿಹಾರವನ್ನು ವಿಮಾ ಕಂಪೆನಿಯಿಂದ ನೀಡಬೇಕಾಗಿರುವುದರಿಂದ ತಡವಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News