ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟು

Update: 2021-02-02 16:04 GMT

ಬೆಂಗಳೂರು, ಫೆ. 2: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ‘ಮುಖ್ಯಮಂತ್ರಿ ಜೊತೆಗೆ ಸಮಾಲೋಚನೆ ನಡೆಸಿ ಶೀಘ್ರವೇ ಬಿಕ್ಕಟ್ಟು ಪರಿಹಾರಕ್ಕೆ ಸರಕಾರ ಕ್ರಮ ವಹಿಸಲಿದೆ' ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ ಕರುಣಾಕರ ರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಶಿವರಾಮ್ ಹೆಬ್ಬಾರ್, ಈಗಾಗಲೇ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಶಮನಕ್ಕೆ ರಾಜ್ಯ ಸರಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಸೇರಿದಂತೆ ಹಲವು ಸುತ್ತಿನ ಸಭೆ ನಡೆಸಿದ್ದರೂ, ಕಾರ್ಮಿಕರು ತಮ್ಮ ಹಠವನ್ನು ಬಿಡುತ್ತಿಲ್ಲ. ಹೀಗಾಗಿ ಸುದೀರ್ಘ 85 ದಿನಗಳಿಂದ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. 3,500 ಮಂದಿ ಕಾರ್ಮಿಕರ ಪೈಕಿ ಈಗಾಗಲೇ 1,800ಕ್ಕೂ ಹೆಚ್ಚು ಕಾರ್ಮಿಕರು ಕರ್ತವ್ಯಕ್ಕೆ ಮರಳಿದ್ದು, ಉಳಿದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಮಧ್ಯೆ ಆಡಳಿತ ಮಂಡಳಿ 60ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಅಮಾನತ್ತುಗೊಳಿಸಿ ವಿಚಾರಣೆ ನಡೆಸುತ್ತಿದೆ. ಕೆಲವರನ್ನು ವಜಾ ಮಾಡಿದೆ ಎಂದರು.

ಅಮಾನತ್ತು ಮಾಡಿರುವ ಕಾರ್ಮಿಕರ ವಿಚಾರಣೆ ನಡೆಸಿದೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿರುವುದು ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ. ಹೀಗಾಗಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಮುಖಂಡರನ್ನು ಆಹ್ವಾನಿಸಿ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸುತ್ತೇವೆ ಎಂದು ಶಿವರಾಂ ಹೆಬ್ಬಾರ್ ಸದನಕ್ಕೆ ಭರವಸೆ ನೀಡಿದರು.

ಆರಂಭಕ್ಕೆ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಮಿಕರ ಹೋರಾಟದ ಸ್ಥಳಕ್ಕೆ ನಾನೂ ಖುದ್ಧ ಭೇಟಿ ನೀಡಿದ್ದೆ. ಜಪಾನ್ ಮೂಲದ ಕಾರ್ಖಾನೆ ಆಡಳಿತ ಮಂಡಳಿ ನಮ್ಮ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ತಮ್ಮದೇ ಆದ ಕಾನೂನುಗಳನ್ನು ಕಾರ್ಮಿಕರ ಮೇಲೆ ಹೇರುತ್ತಿರುವುದು ಮತ್ತು ಒತ್ತಡ ಹೇರುವುದು ಸರಿಯಲ್ಲ.

ಕಾನೂನು ರೀತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಸರಕಾರ ಕ್ರಮ ವಹಿಸಬೇಕು. ಕಾರ್ಮಿಕರಿಗೆ ಸೌಹಾರ್ದತೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. 64 ಮಂದಿ ಕಾರ್ಮಿಕರ ಅಮಾನತ್ತು, 8 ಮಂದಿ ಕಾರ್ಮಿರನ್ನು ವಜಾ ಮಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಸಭೆ ನಡೆಸಿ ಬಿಕ್ಕಟ್ಟು ಪರಿಹರಿಸಬೇಕು ಎಂದು ಒತ್ತಾಯಿಸಿದರು.

‘ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ಮೇಲೆ ಆಡಳಿತ ಮಂಡಳಿ ಒತ್ತಡ ಹೇರುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಸರಿಯಲ್ಲ. ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಇತ್ಯರ್ಥಕ್ಕೆ ಸರಕಾರ ಕ್ರಮ ವಹಿಸದಿದ್ದರೆ ಆರ್ಥಿಕ ಸಮಸ್ಯೆ ಮತ್ತಷ್ಟು ಬಿಗುಡಾಯಿಸಲಿದೆ'

-ಕರುಣಾಕರ ರೆಡ್ಡಿ, ಬಿಜೆಪಿ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News