ಗೋಶಾಲೆ-ಸೈನಿಕ ಶಾಲೆಗಳ ಅಡಕತ್ತರಿಯಲ್ಲಿ ಸರಕಾರಿ ಶಾಲೆ!

Update: 2021-02-05 05:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಮತ್ತು ಲಾಕ್‌ಡೌನ್ ಕಾಲಾವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಪಾತಾಳ ತಲುಪಿತು. ಇಡೀ ದೇಶ ಕೊರೋನ ಜಪ ಮಾಡುತ್ತಿರುವಾಗ, ಕ್ಷಯ ಸೇರಿದಂತೆ ಮಾರಣಾಂತಿಕ ರೋಗಗಳು ಉಲ್ಬಣಗೊಂಡವು. ಲಾಕ್‌ಡೌನ್‌ನಿಂದಾಗಿ ಹೆಚ್ಚಿದ ಬಡತನ, ನಿರುದ್ಯೋಗ ಇತ್ಯಾದಿಗಳು ಕ್ಷಯದಂತಹ ರೋಗಗಳು ಉಲ್ಬಣಗೊಳ್ಳಲು ನೀಡಿದ ಕೊಡುಗೆ ಬಹುದೊಡ್ಡದು. ಕೊರೋನ ಕಾರಣದಿಂದಾಗಿ ಕ್ಷಯ ರೋಗ ಸಂಪೂರ್ಣ ನಿರ್ಲಕ್ಷಕ್ಕೊಳಗಾಯಿತು. ಕ್ಷಯ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಮೀಸಲಿಟ್ಟ ಅನುದಾನಗಳನ್ನೆಲ್ಲ ಕೊರೋನ ವೈರಸ್ ನುಂಗಿ ನೀರು ಕುಡಿಯಿತು. ಈ ನಿಟ್ಟಿನಲ್ಲಿ ಈ ಬಾರಿ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಕುರಿತಂತೆ ಸರಕಾರ ಹೆಚ್ಚಿನ ಕಾಳಜಿವಹಿಸುತ್ತದೆ ಎಂದು ಭಾವಿಸಲಾಗಿತ್ತು. ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಲಾಗಿದೆಯಾದರೂ, ಕೊರೋನ ಲಸಿಕೆಗೆ ಸಿಕ್ಕಿದ ಆದ್ಯತೆ ಉಳಿದ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಔಷಧಿಗಳಿಗೆ ಸಿಕ್ಕಿಲ್ಲ.

ಇದೇ ಸಂದರ್ಭದಲ್ಲಿ, ಲಾಕ್‌ಡೌನ್‌ನಿಂದಾಗಿ ಶಿಕ್ಷಣ ಕ್ಷೇತ್ರ ಕೂಡ ಸಂಪೂರ್ಣ ಸ್ಥಗಿತವಾಗಿತ್ತು. ಆನ್‌ಲೈನ್ ಈ ದೇಶದಲ್ಲಿ ಉಳ್ಳವರಿಗೊಂದು, ಇಲ್ಲದವರಿಗೊಂದು ರೀತಿಯ ಶಿಕ್ಷಣವನ್ನು ನೀಡತೊಡಗಿದೆ. ಸರಕಾರಿ ಶಾಲೆಗಳು ಜನಸಾಮಾನ್ಯರಿಗಾಗಿ ಇನ್ನೂ ಮುಕ್ತವಾಗಿ ತೆರೆದಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗಳನ್ನು ತೊರೆದಿದ್ದಾರೆ. ಅವರನ್ನು ಮರಳಿ ಶಾಲೆಗಳಿಗೆ ಸೇರಿಸುವ ಬಗ್ಗೆ ದೇಶಾದ್ಯಂತ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರದ ಕುರಿತಂತೆ ಸರಕಾರ ಹೆಚ್ಚಿನ ಕಾಳಜಿಯನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತ ಸರಕಾರವು ಮುಂದಿನ ವಿತ್ತ ವರ್ಷದಲ್ಲಿ ಶಿಕ್ಷಣದ ಮೇಲೆ ಮಾಡುತ್ತಿರುವ ವೆಚ್ಚದಲ್ಲಿ 6 ಸಾವಿರ ಕೋಟಿ ರೂ. ಕಡಿತ ಮಾಡಲು ಮುಂದಾಗಿದೆ.

2021-22ನೇ ಸಾಲಿನಲ್ಲಿ ಶಿಕ್ಷಣದ ಬಜೆಟನ್ನು ಶೇ.6ರಷ್ಟು ಕಡಿತಗೊಳಿಸಲಾಗಿದ್ದು, 99,311 ಕೋಟಿ ರೂ.ಗಳಿಂದ 93,224 ಕೋಟಿ ರೂ.ಗಳಿಗೆ ಇಳಿಸಿದ್ದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. ಅದರಲ್ಲೂ ಶಾಲಾ ಶಿಕ್ಷಣದ ಮೇಲಿನ ಅನುದಾನದಲ್ಲಿ ಅತ್ಯಧಿಕ ಅಂದರೆ 5 ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. ಇವುಗಳ ನಡುವೆ ಎನ್‌ಜಿಒಗಳು,ಖಾಸಗಿ ಶಾಲೆಗಳು ಹಾಗೂ ರಾಜ್ಯ ಸರಕಾರಗಳ ಪಾಲುದಾರಿಕೆಯೊಂದಿಗೆ 100 ನೂತನ ಸೈನಿಕ ಶಾಲೆಗಳ ಸ್ಥಾಪನೆಯನ್ನು ಕೂಡಾ ಪ್ರಕಟಿಸಿದೆ.ಕೊರೋನ ಹಾವಳಿ ಆರಂಭಗೊಂಡ ಬಳಿಕ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕನಿಷ್ಠ ಆರು ತಿಂಗಳ ಅವಧಿಗೆ ಮುಚ್ಚುಗಡೆಗೊಳಿಸಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಆಗಿರುವ ಹಾನಿಯನ್ನು ಸರಿಪಡಿಸುವುದು ಅಥವಾ ಶಾಲೆಗಳನ್ನು ತೊರೆದಿರುವ ವಿದ್ಯಾರ್ಥಿಗಳ ಮರುಸೇರ್ಪಡೆ ಅಭಿಯಾನ ಅಥವಾ ಶಾಲೆಗೆ ಮರಳುವ ಸಾಧ್ಯತೆ ಇರದ ಮಕ್ಕಳನ್ನು ಮರಳಿ ಕರೆತರುವ ಪ್ರಯತ್ನಗಳಿಗೆ ಯೋಜಿತ ಬೆಂಬಲವನ್ನು ನೀಡುವ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಯಾವುದೇ ಘೋಷಣೆಯನ್ನು ಮಾಡಿಲ್ಲ.

ಇತ್ತ ಉನ್ನತ ಶಿಕ್ಷಣದ ಫಂಡಿಂಗ್ ಏಜೆನ್ಸಿ (ಎಚ್‌ಇಎಫ್‌ಎ)ಗೆ ನೀಡುವ ಆರ್ಥಿಕ ನೆರವನ್ನು ಕೂಡಾ ಕೇಂದ್ರ ಸರಕಾರ ಕಡಿತಗೊಳಿಸಿದ್ದು, ಇದರಿಂದಾಗಿ ಅದರ ಹಲವಾರು ಕಾರ್ಯಯೋಜನೆಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಏಜೆನ್ಸಿಗೆ ಕೇವಲ 1 ಕೋಟಿ ರೂ. ಅನುದಾನವಷ್ಟೇ ದೊರೆತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಭವಿಷ್ಯದ ಕುರಿತಂತೆ ವಿಶ್ವಸಂಸ್ಥೆಯ ಆತಂಕ ನಿಜವಾಗಿದೆ. ಮುಂದಿನ ದಿನಗಳಲ್ಲಿ ಬಡವರ ಪಾಲಿಗೆ ಶಿಕ್ಷಣ ಮುಗಿಲ ಮಲ್ಲಿಗೆಯಾಗಲಿದೆ. ಸರಕಾರದ ಸಾಕಷ್ಟು ಬೆಂಬಲವಿದ್ದಾಗಲೇ ಕುಂಟುತ್ತಾ ಸಾಗುತ್ತಿದ್ದ ಸರಕಾರಿ ಶಾಲೆಗಳ ಮುಂದಿನ ಭವಿಷ್ಯ ಇನ್ನಷ್ಟು ಚಿಂತಾಜನಕವಾಗಲಿದೆ. ಇಂತಹ ಸಂದರ್ಭದಲ್ಲೇ ಸರಕಾರ ದೇಶಾದ್ಯಂತ ಎನ್‌ಜಿಒಗಳು, ಖಾಸಗಿ ಶಾಲೆಗಳು ಹಾಗೂ ರಾಜ್ಯಗಳ ಪಾಲುದಾರಿಕೆಯೊಂದಿಗೆ 100 ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಒಂದೆಡೆ ರಾಜ್ಯ ಸರಕಾರಗಳು ಸರಕಾರಿ ಶಾಲೆಗಳನ್ನು ನಿರ್ಲಕ್ಷಿಸಿ ಗೋಶಾಲೆಗಳಿಗಾಗಿ ವಿವಿಧ ಅನುದಾನಗಳನ್ನು ಬಿಡುಗಡೆ ಮಾಡುತ್ತಿವೆ. ಇತ್ತ ಕೇಂದ್ರ ಸರಕಾರ, ಇರುವ ಶಾಲೆಗಳನ್ನು ಮೇಲೆತ್ತುವ ಬಗ್ಗೆ ತಲೆಕೆಡಿಸಿಕೊಳ್ಳದೆ ಹೆಚ್ಚುವರಿ ಸೈನಿಕ ಶಾಲೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಸೈನಿಕ ಶಾಲೆಗಳು, ಸೈನಿಕ್ ಸ್ಕೂಲ್ ಸೊಸೈಟಿಯ ಮೇಲುಸ್ತುವಾರಿಯಲ್ಲಿರುವ ಮಿಲಿಟರಿ ಶಿಕ್ಷಣ ಶಾಲೆಗಳಾಗಿದ್ದು, ರಕ್ಷಣಾ ಇಲಾಖೆಯ ಅಧೀನದಲ್ಲಿರುತ್ತವೆ. ಪ್ರಸಕ್ತ ಭಾರತದಾದ್ಯಂತ 33 ಸೈನಿಕ ಶಾಲೆಗಳಿವೆ. 1960ರಲ್ಲಿ ಆಗಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರು ಜಾರಿಗೊಳಿಸಿದ ನೀತಿಗೆ ಅನುಗುಣವಾಗಿ ಈ ಸೈನಿಕ ಶಾಲೆಗಳು ಆಸ್ತಿತ್ವಕ್ಕೆ ಬಂದಿವೆ. ಈ ಸೈನಿಕ ಶಾಲೆಗಳಿಗೆ ಕೇಂದ್ರ ಸರಕಾರವು ಆರ್ಥಿಕ ನಿಧಿಯನ್ನು ಪೂರೈಸುತ್ತಿದ್ದು, ಆಯಾ ರಾಜ್ಯಗಳ ಸರಕಾರಗಳು ಮೂಲಸೌಕರ್ಯಗಳು, ವೆಚ್ಚ ಹಾಗೂ ವಿದ್ಯಾರ್ಥಿವೇತನಗಳನ್ನು ನೀಡುತ್ತವೆ.ಸೈನಿಕ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ವಾರ್ಷಿಕ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅವರನ್ನು ಪ್ರೌಢ ಶಾಲಾ ಮಟ್ಟದಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಈ ವಿದ್ಯಾರ್ಥಿಗಳು ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಅವರಿಗೆ ದಿನಚರಿಯ ಶಿಕ್ಷಣದ ಜೊತೆಗೆ ಶಾಲೆಗಳಲ್ಲಿ ಕ್ರೀಡೆ, ಸಾಹಸ ಚಟುವಟಿಕೆಗಳು, ಪಠ್ಯೇತರ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಸಶಸ್ತ್ರ ಪಡೆಗಳಿಗೆ ಭಾವೀ ಸೇನಾಧಿಕಾರಿಗಳನ್ನು ಸೃಷ್ಟಿಸುವುದೇ ಮಿಲಿಟರಿ ಶಾಲೆಗಳ ಉದ್ದೇಶವಾಗಿವೆ. ತೀರಾ ಇತ್ತೀಚಿನವರೆಗೆ ಮಿಲಿಟರಿ ಶಾಲೆಗಳಲ್ಲಿ ಕೇವಲ ಹುಡುಗರಿಗೆ ಮಾತ್ರವೇ ಪ್ರವೇಶಾವಕಾಶವಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶಾವಕಾಶ ನೀಡಲಾಗುತ್ತದೆ.

ಆದರೆ ಎನ್‌ಜಿಒಗಳು ಅಥವಾ ಖಾಸಗಿ ಶಾಲೆಗಳಿಗೆ ಮಿಲಿಟರಿ ಶಾಲೆಗಳಲ್ಲಿ ಪಾಲುದಾರಿಕೆಯನ್ನು ನೀಡುವುದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆಯೆಂದು ಕೆಲವು ನಿವೃತ್ತ ಸೇನಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಎನ್‌ಜಿಒಗಳು ಹಾಗೂ ಖಾಸಗಿ ಶಾಲೆಗಳ ಪಾಲುದಾರಿಕೆಯಿಂದಾಗಿ ಮಿಲಿಟರಿ ಶಾಲೆಗಳು ಲಾಭೋದ್ದೇಶದ ಶಿಕ್ಷಣಸಂಸ್ಥೆಗಳಾಗುವ ಅಪಾಯವಿದೆ. ಅದಕ್ಕೆ ಅವಕಾಶ ನೀಡಕೂಡದು ಎಂದು ನಿವೃತ್ತ ಸೇನಾಧಿಕಾರಿ ಲೆ.ಜ. ರಾಜೇಂದ್ರ ನಿಂಭೋರ್ಕರ್ ಹೇಳುತ್ತಾರೆ. ‘ಎನ್‌ಜಿಒ ಪಾಲುದಾರಿಕೆಯೊಂದಿಗೆ ಸೈನಿಕ ಶಾಲೆಗಳು’ ಎನ್ನುವ ಸರಕಾರದ ಹೊಸ ತಂತ್ರವನ್ನು ನಾವು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಆರೆಸ್ಸೆಸ್ ಈಗಾಗಲೇ ‘ಸೈನಿಕ ಶಾಲೆ’ಗಳನ್ನು ನಿರ್ಮಾಣ ಮಾಡುವ ಬಗ್ಗೆ ತೀವ್ರ ಆಸಕ್ತಿಯನ್ನು ಹೊಂದಿದೆ ಮತ್ತು ಅದನ್ನು ಈಗಾಗಲೇ ಬೇರೆ ಬೇರೆ ರೂಪಗಳಲ್ಲಿ ಅನುಷ್ಠಾನಕ್ಕೆ ತರುತ್ತಿದೆ. ಸೈನಿಕ ಶಾಲೆ ನಿರ್ಮಾಣದ ಬಗ್ಗೆ ಆರೆಸ್ಸೆಸ್ ಮುಖಂಡರು ಹೇಳಿಕೆಗಳನ್ನೂ ನೀಡಿದ್ದಾರೆ. ಎನ್‌ಜಿಒ ಪಾಲುದಾರಿಕೆಯೊಂದಿಗೆ ಸೈನಿಕ ಶಾಲೆಗಳ ನಿರ್ಮಾಣ ಮಾಡಲು ಹೊರಟಿರುವ ಸರಕಾರದ ಪಾಲಿನ ‘ಎನ್‌ಜಿಒ’ ಯಾವುದು ಎನ್ನುವುದನ್ನು ಊಹಿಸುವುದು ಕಷ್ಟವೇನಿಲ್ಲ. ಮಾಲೆಗಾಂವ್ ಸ್ಫೋಟದಲ್ಲಿ ನಿವೃತ್ತ ಸೇನಾಧಿಕಾರಿಯ ಕೈವಾಡ ಬಹಿರಂಗವಾದಾಗಲೇ, ಕೇಸರಿ ಉಗ್ರವಾದಿಗಳು ಸೇನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಎನ್‌ಜಿಒಗಳ ಪಾಲುದಾರಿಕೆ ಈ ನಿಟ್ಟಿನಲ್ಲಿ ಆರೆಸ್ಸೆಸ್‌ನ ದಾರಿಯನ್ನು ಇನ್ನಷ್ಟು ಸುಗಮ ಮಾಡಿಕೊಡಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕ ಶಾಲೆಗಳ ಸ್ಥಾಪನೆಗೆ ಆದ್ಯತೆ ನೀಡುವ ಬದಲು ದೇಶಾದ್ಯಂತದ ಶಾಲೆಗಳಲ್ಲಿ ಈಗಾಗಲೇ ಇರುವ ಎನ್‌ಸಿಸಿಯನ್ನು ಪುನಾರಚಿಸಬೇಕು ಹಾಗೂ ಅವುಗಳ ಮೂಲಕ ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿಯನ್ನು ನೀಡಬೇಕೆಂದು ನಿವೃತ್ತ ಲೆ.ಜ.ಡಿ.ಬಿ. ಶೇಕತ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಎನ್‌ಜಿಒಗಳ ಪಾಲುದಾರಿಕೆಯ ಮೂಲಕ ನಡೆಸಲ್ಪಡುವ ಸೈನಿಕ ಶಾಲೆಗಳು ದೇಶದ ಹಿತಾಸಕ್ತಿಗೆ ಮುಳುವಾಗುವ ಎಲ್ಲ ಅಪಾಯಗಳೂ ಇವೆ ಎಂದು ನಿವೃತ್ತ ಸೇನಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ಒಂದೆಡೆ ಗೋಶಾಲೆ, ಇನ್ನೊಂದೆಡೆ ಸೈನಿಕ ಶಾಲೆಗಳ ನಡುವೆ ಸರಕಾರಿ ಶಾಲೆಗಳು ಬಜೆಟ್‌ನಲ್ಲಿ ಕೇಳುವವರಿಲ್ಲದೆ ಬೀದಿಗೆ ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News