ನೂರು ಕೇಸು ಹಾಕಿದರೂ ಎದುರಿಸುತ್ತೇನೆ, ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ

Update: 2021-02-05 12:28 GMT

ಬೆಂಗಳೂರು, ಫೆ. 5: ‘ನನ್ನ ವಿರುದ್ಧ ಇನ್ನೂ ನೂರು ಕೇಸುಗಳನ್ನು ಹಾಕಿದರೂ ಅವುಗಳನ್ನು ಎದುರಿಸುವ ಶಕ್ತಿ ನನಗಿದೆ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ನಾನು ಅಧಿಕಾರದಲ್ಲಿ ಇರುತ್ತೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗುಡುಗಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಸಿದ್ದರಾಮಯ್ಯ ಅವರೇ ನಿಮಗೆ ಶಕ್ತಿ, ತಾಕತ್ತು ಇದ್ದರೆ ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರಗಳ ಉಪಚುನಾವಣೆ ಮತ್ತು ಮುಂಬರಲಿರುವ ವಿಧಾನಸಭೆ ಚುನಾವಣೆಯನ್ನು ಗೆದ್ದು ಬನ್ನಿ ಎಂದು ಸವಾಲು ಹಾಕಿದರು.

‘ಬೆಳಗಾವಿ ಲೋಕಸಭೆ ಸೇರಿದಂತೆ ಮೂರು ಕ್ಷೇತ್ರಗಳ ಉಪಚುನಾವಣೆ ಬಿಜೆಪಿ ಗೆಲುವು ನಿಶ್ಚಿತ. ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದ್ದು, ನೀವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತೇನೆ. ಈಗಾಗಲೇ ನಾಡಿನ ಜನತೆ ತೀರ್ಮಾನ ಮಾಡಿದ್ದಾರೆ' ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

‘ನನ್ನ ವಿರುದ್ಧ ಅನೇಕ ಪ್ರಕರಣಗಳಿವೆ. ಆದರೆ, ನನಗೆ ನಿಮಗೆ(ಸಿದ್ದರಾಮಯ್ಯ) ಇರುವಷ್ಟು ಬುದ್ಧಿವಂತಿಕೆ ಇಲ್ಲ. ನಿಮ್ಮ ಅಧಿಕಾರ ಅವಧಿಯಲ್ಲಿ ಏನೇನು ಮಾಡಿದ್ದೀರಿ ಎಂಬುದು ನನಗೆ ಗೊತ್ತು. ನಿಮ್ಮ ರಾಷ್ಟ್ರೀಯ ಮುಖಂಡರ ಮೇಲೆ ಆರೋಪ ಇಲ್ಲವೇ?' ಎಂದು ಪ್ರಶ್ನಿಸಿದ ಯಡಿಯೂರಪ್ಪ, ‘ನಿಮ್ಮ ಅವಧಿಯಲ್ಲಿ ನೀವೇ ಸೃಷ್ಟಿಸಿದ ಎಸಿಬಿ, ನೀವೂ ರೀಡೂ ಹೆಸರಿನಲ್ಲಿ ನಡೆಸಿದ ಡಿ-ನೋಟಿಫೈ ಮಾಡಿಲ್ಲವೇ? ಯಾವ ನಾಯಕ ಜಾಮೀನಿನ ಮೇಲೆ ಇಲ್ಲ ಹೇಳಿ' ಎಂದು ಆಕ್ರೋಶ ಹೊರಹಾಕಿದರು.

‘ಆರ್‍ಟಿಐ ಅರ್ಜಿ ಹಾಕಿ ಮುಖ್ಯಮಂತ್ರಿ ಹಾಗೂ ಸಚಿವರ ಮೇಲೆ ಕೇಸು ಹಾಕುವುದು ಸಾಮಾನ್ಯ ಆಗಿದೆ. ಆದರೆ, ನಾನು ಮನಸು ಮಾಡಿದರೆ ಸುಳ್ಳು ಕೇಸು ಹಾಕಿ ಏನು ಬೇಕಾದರೂ ಮಾಡಬಹುದು. ನೀವು ಬೆಳಗಿನ ಸ್ವಪ್ನದಲ್ಲಿಯೂ ನನ್ನ ರಾಜೀನಾಮೆ ಕೇಳುತ್ತಿದ್ದೀರಿ ಎಂದ ಅವರು, ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಹೇಳಿದ್ದೀರಿ. ನಮ್ಮದು ಅನೈತಿಕ ಸರಕಾರ ಅಂದಿದ್ದೀರಿ. ಆದರೆ, ಬಹುಮತ ಇಲ್ಲದಿದ್ದರೂ ಜೆಡಿಎಸ್ ಜೊತೆ ನೀವು ಸರಕಾರ ಮಾಡಿದ್ದು ಅನೈತಿಕವಲ್ಲವೇ?' ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

‘ಆಪರೇಷನ್ ಕಮಲದ ಜನಕ ಯಡಿಯೂರಪ್ಪ ಎಂದಿದ್ದೀರಿ'. ಆದರೆ, ‘ನೀವು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಆಪರೇಷನ್ ಅಲ್ಲವೇ?' ನಮ್ಮ ಸರಕಾರ ರಸ್ತೆಯಲ್ಲಿ ಕೆಟ್ಟು ನಿಂತ ಡಕೋಟಾ ಬಸ್ ಎಂದಿದ್ದೀರಿ? ಪ್ರತಿಪಕ್ಷಗಳ ರಚನಾತ್ಮಕ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಟೀಕೆ ಹೆಸರಿನಲ್ಲಿ ಬೆಂಕಿ ಉಗುಳುವ ಬದಲು ಅಭಿವೃದ್ಧಿ ನಿಟ್ಟಿನಲ್ಲಿ ಬೆಳಕು ಚೆಲ್ಲಬೇಕು ಎಂದು ಕೋರಿದರು.

ಇನ್ನು ಕೆಲವೇ ದಿನಗಳಲ್ಲಿ ಉಪಚುನಾವಣೆಗಳು ಬರಲಿದ್ದು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ. ಏಕೆ ಹೇಳುತ್ತಿದ್ದೇನೆ ಎಂದರೆ ನೀವು ಇನ್ನಾದರೂ ಟೀಕೆ ಮಾಡುವುದನ್ನು ಬಿಟ್ಟು ಸರಕಾರಕ್ಕೆ ರಚನಾತ್ಮಕ ಸಲಹೆ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡುವೆ ಎಂದರು.

ವಿಧಾನಸಭೆ ವಿಸರ್ಜಿಸಿ ಬನ್ನಿ ಚುನಾವಣೆಗೆ ಹೋಗೋಣ: ‘ಯಡಿಯೂರಪ್ಪನವರೇ ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. ನೀವೂ ನನ್ನ ಸವಾಲನ್ನು ಸ್ವೀಕರಿಸಿ. ಈ ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಹೋಗೋಣ ಬನ್ನಿ. ರಾಜ್ಯದ ಜನತೆ ಕಾಂಗ್ರೆಸ್ ಗೆಲ್ಲಿಸುತ್ತಾರೋ ಅಥವಾ ಬಿಜೆಪಿಯನ್ನು ಗೆಲ್ಲಿಸುತ್ತಾರೋ ಗೊತ್ತಾಗಲಿದೆ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News