ರಾಜ್ಯ ವಿಧಾನಸಭೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Update: 2021-02-05 12:33 GMT

ಬೆಂಗಳೂರು, ಫೆ.5:  ಏಳು ದಿನಗಳ ಕಾಲ ನಡೆದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಶೇ.90ಕ್ಕೂ ಹೆಚ್ಚು ಕಾರ್ಯಕಲಾಪ ಪೂರ್ಣ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ 9ನೆ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ಮಂಡಿಸಿದ ಅವರು, ಜ.28ರಂದು ರಾಜ್ಯಪಾಲರ ಭಾಷಣದೊಂದಿಗೆ ಆರಂಭಗೊಂಡ ವಿಧಾನಸಭೆಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಏಳು ದಿನಗಳ ಕಾಲ ಅಧಿವೇಶನ ಪೂರ್ಣಗೊಳಿಸಿದ್ದು, 33 ಗಂಟೆ 30 ನಿಮಿಷಗಳ ಕಾಲ ಕಾರ್ಯ ಕಲಾಪ ನಡೆಸಲಾಗಿದೆ ಎಂದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ 20 ಸದಸ್ಯರು 12 ಗಂಟೆ 34 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಇಂದು ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು. ಇತ್ತೀಚಿಗೆ ನಿಧನರಾದವರಿಗೆ ಸಂತಾಪ ಸೂಚಿಸಿ ಅಂಗೀಕರಿಸಲಾಯಿತು. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಲಾಯಿತು. ಇನ್ನು, ರಾಜ್ಯಪಾಲರು ಅನುಮೋದನೆ ನೀಡಿದ ವಿಧೇಯಕಗಳನ್ನು ಮಂಡಿಸಲಾಗಿದೆ ಎಂದು ವಿವರಿಸಿದರು.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ವರದಿಯನ್ನು ಮಂಡಿಸಲಾಗಿದೆ. ಅದೇ ರೀತಿ, ಭರವಸೆ ಸಮಿತಿಯ 8ನೇ ವರದಿ ಮತ್ತು 11 ಅಧಿಸೂಚನೆಗಳನ್ನು, 3 ಅಧ್ಯಾದೇಶಗಳು, 42 ವಾರ್ಷಿಕ ವರದಿಗಳು, 20 ಲೆಕ್ಕ ಪರಿಶೋಧನಾ ವರದಿಗಳು, 2 ಅನುಷ್ಠಾನ ವರದಿಗಳು, 2 ತಪಾಸಣಾ ವರದಿಗಳು ಹಾಗೂ ಒಂದು ವಿಶೇಷ ವರದಿಯನ್ನು ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎರಡು ಅರ್ಜಿಗಳನ್ನು ಜಪ್ಪಿಸಲಾಗಿದ್ದು, ಒಟ್ಟು 14 ವಿಧೇಯಕಗಳನ್ನು ಮಂಡಿಸಲಾಗಿದೆ. ಇನ್ನು, ಕಳೆದ ಬಾರಿ ಅಧಿವೇಶನದಲ್ಲಿ ಬಾಕಿ ಇದ್ದ ಒಂದು ವಿಧೇಯಕ ಸೇರಿದಂತೆ ಒಟ್ಟು 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ನಿಯಮ 60ರಡಿಯಲ್ಲಿ ನೀಡಿದ್ದ ಒಂದು ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾಗೇರಿ ಹೇಳಿದರು.

ಪ್ರಶ್ನೆಗಳು: ಒಟ್ಟು 1320 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, 88 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 897 ಪ್ರಶ್ನೆಗಳ ಉತ್ತರವನ್ನು ಮಂಡಿಸಲಾಗಿದೆ. ಜತೆಗೆ, ನಿಯಮ 351 ಅಡಿಯಲ್ಲಿ 50 ಸೂಚನೆಗಳನ್ನು ಅಂಗೀಕರಿಸಿದ್ದು, 30 ಸೂಚನೆಗಳ ಉತ್ತರವನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 168 ಸೂಚನೆಗಳ ಪೈಕಿ 69 ಸೂಚನೆಗಳನ್ನು ಚರ್ಚಿಸಲಾಗಿದೆ ಹಾಗೂ ಉತ್ತರಗಳನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

ಶೂನ್ಯ ವೇಳೆಯಲ್ಲಿ ಒಟ್ಟು 13 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದ ಅವರು, ಈ ಅವಧಿಯಲ್ಲಿ ಸದನವು ಶೇಕಡ 90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದೆ ಎಂದು ಸ್ಪೀಕರ್ ಪ್ರಕಟಿಸಿ, ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಒಂದು ರಾಷ್ಟ್ರ-ಒಂದು ಚುನಾವಣೆ

ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಇದಕ್ಕಿಂತ ಎರಡು ದಿನಗಳ ಮೊದಲು “ಒಂದು ರಾಷ್ಟ್ರ-ಒಂದು ಚುನಾವಣೆ” ವಿಷಯದ ಕುರಿತು ಚರ್ಚೆ ನಡೆಯಲಿದೆ. ಇದರಲ್ಲಿ ಆಸಕ್ತಿಯಿಂದ ಭಾಗವಹಿಸಿ, ಇದು ದೇಶಕ್ಕೆ ಬೆಳಕು ಚೆಲ್ಲುವಂತೆ ಇರಬೇಕೆಂದು ಸ್ಪೀಕರ್ ಹೇಳಿದರು.

ಫೆ.24ಕ್ಕೆ ಆತ್ಮಾವಲೋಕನ ಸಭೆ

ಕಾಮನ್ ವೆಲ್ತ್ ಸಂಸದೀಯ ಸಂಘ ಕರ್ನಾಟಕ ಶಾಖೆ ವತಿಯಿಂದ ಫೆಬ್ರವರಿ 24ರಂದು ವಿಧಾನಸೌಧದ ಬಾಕ್ವೆಂಟ್ ಹಾಲ್‍ನಲ್ಲಿ ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ವಿಷಯ ಕುರಿತು ಆತ್ಮಾವಲೋಕನ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕಾನೂನು ತಜ್ಞರು, ಹಿರಿಯ ಸಂಸದೀಯ ತಜ್ಞರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಈ ವ್ಯವಸ್ತೆಯ ಬಗ್ಗೆ ಜನರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಲು ಪ್ರಯತ್ನಿಸಲಾಗುವುದು.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News