ಮೃತಪಟ್ಟ ರೈತನ ಮೇಲೆ ರಾಷ್ಟ್ರಧ್ವಜ ಹೊದಿಸಿದ ಪ್ರಕರಣ: ಕುಟುಂಬದ ವಿರುದ್ಧ ಕೇಸು ದಾಖಲು

Update: 2021-02-05 16:58 GMT
ಸಾಂದರ್ಭಿಕ ಚಿತ್ರ

ಪಿಲಿಬಿಟ್ (ಉತ್ತರಪ್ರದೇಶ), ಫೆ. 5: ಗಾಝಿಪುರ ಪ್ರತಿಭಟನಾ ಸ್ಥಳದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ರೈತನ ಅಂತ್ಯಕ್ರಿಯ ಸಂದರ್ಭ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಆರೋಪದಲ್ಲಿ ರೈತನ ತಾಯಿ, ಸಹೋದರ ಹಾಗೂ ಇನ್ನೋರ್ವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ರೈತನ ಅಂತ್ಯಕ್ರಿಯೆ ಸಂದರ್ಭ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತದ ಧ್ವಜ ಸಂಹಿತೆಯ ಪ್ರಕಾರ ನಾಗರಿಕರ ಅಂತ್ಯಕ್ರಿಯೆ ಸಂದರ್ಭ ತ್ರಿವರ್ಣ ಧ್ವಜವನ್ನು ಹೊದಿಸುವುದು ಅಪರಾಧ.

‘‘ಸೆಹ್ರವೌ ಪ್ರದೇಶದ ಬರಿ ಬುಝಿಯಾ ಗ್ರಾಮದ ನಿವಾಸಿಯಾಗಿರುವ ಬಲ್ಜೀಂದ್ರ ಅವರು ಜನವರಿ 23ರಂದು ನಡೆದ ರೈತರ ಪ್ರತಿಭಟನೆಯಲ್ಲಿ ತನ್ನ ಗೆಳೆಯರೊಂದಿಗೆ ಪಾಲ್ಗೊಂಡಿದ್ದರು. ಜನವರಿ 25ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟರು. ವ್ಯಕ್ತಿಯ ಗುರುತು ಸಿಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಫೆಬ್ರವರಿ 2ರಂದು ರೈತನ ಕುಟುಂಬಕ್ಕೆ ವಿಷಯ ತಿಳಿಯಿತು. ಅನಂತರ ಅವರು ಮೃತದೇಹವನ್ನು ಕೊಂಡೊಯ್ದಿದ್ದರು’’ ಎಂದು ಪೊಲೀಸ್ ಅಧೀಕ್ಷಕ ಜೈ ಪ್ರಕಾಶ್ ಯಾದವ್ ತಿಳಿಸಿದ್ದಾರೆ.

ಯೋಧರ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸುವಂತೆ ಕುಟುಂಬ ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಗುರುವಾರ ಅಂತ್ಯಕ್ರಿಯೆ ನಡೆಸಿತ್ತು. ಈ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅನಂತರ ಬಲ್ಜೀಂದ್ರ ಅವರ ತಾಯಿ ಜಸ್ವೀರ್ ಕೌರ್, ಸಹೋದರ ಗುರ್ವಿಂದರ್ ಹಾಗೂ ಇನ್ನೋರ್ವ ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು ಎಂದು ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News