ಹಾಸನಕ್ಕೆ ವಿಮಾನ ನಿಲ್ದಾಣ, ಕನಕಪುರಕ್ಕೆ ವೈದ್ಯಕೀಯ ಕಾಲೇಜು: ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟ

Update: 2021-02-05 17:13 GMT

ಬೆಂಗಳೂರು, ಫೆ. 5: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಹಾಸನಕ್ಕೆ ವಿಮಾನ ನಿಲ್ದಾಣ ಮತ್ತು ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಬಾಗಲಕೋಟೆ ಜಿಲ್ಲೆಗೂ ವೈದ್ಯಕೀಯ ಕಾಲೇಜನ್ನು ನೀಡಲಾಗುವುದು ಎಂದರು. ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲೇ ವಿಮಾನ ನಿಲ್ದಾಣ ಮಾಡಲಿಲ್ಲ. ಇದೀಗ ಅವರು ಮನವಿ ಮಾಡಿದ್ದು, ನಮ್ಮ ಅವಧಿಯಲ್ಲಿ ನಿರ್ಮಿಸಿ ಉದ್ಘಾಟನೆ ಮಾಡುತ್ತೇವೆ ಎಂದರು.

ಅದೇ ರೀತಿಯಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಸುಮಾರು 600 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಲಿದ್ದು, ಇನ್ನು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನಮ್ಮ ಅವಧಿಯಲ್ಲಿ ಉದ್ಘಾಟನೆ ಮಾಡಲಿದ್ದೇವೆ ಎಂದು ಯಡಿಯೂರಪ್ಪ ಘೋಷಿಸಿದರು. ಪ್ರತಿಪಕ್ಷ ನಾಯಕರೇ ನೀವೇ ನಮ್ಮನ್ನು ಅಭಿನಂದಿಸುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಕಾಯ್ದೆಗೆ ತಿದ್ದುಪಡಿ: ಭ್ರಷ್ಟರ ಕೂಪವೇ ಆಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳನ್ನು ಬೇರೆ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ 1950ರ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಯಡಿಯೂರಪ್ಪ, ಆ ಮೂಲಕ ಬಿಡಿಎ ಭ್ರಷ್ಟಾಚಾರ ನಿಯಂತ್ರಣಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News