ವರದಕ್ಷಿಣೆ ಕಿರುಕುಳ ಆರೋಪ: ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳಾ ಐಪಿಎಸ್ ಅಧಿಕಾರಿ

Update: 2021-02-06 14:24 GMT

ಬೆಂಗಳೂರು, ಫೆ.6: ಪತಿ ವರದಕ್ಷಿಣೆ ತರಲು ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ನೀಡಿದ ದೂರಿನ ಮೇರೆಗೆ ಪತಿ ನಿತೀನ್ ಸುಭಾಶ್ ಹಾಗೂ ಕುಟುಂಬಸ್ಥರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವರ್ಟಿಕಾ ಕಟಿಯಾರ್ 2011ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ (ಐಎಫ್‍ಎಸ್) ಅಧಿಕಾರಿ ನಿತಿನ್ ಸುಭಾಶ್ ಅವರೊಂದಿಗೆ ವಿವಾಹವಾಗಿದ್ದರು. ನಿತಿನ್ ಹೊಸದಿಲ್ಲಿಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಪತಿ ಮದ್ಯ ಸೇವನೆ ಮತ್ತು ಧೂಮಪಾನ ಮಾಡುವ ಅತಿಯಾದ ಚಟ ಬೆಳೆಸಿಕೊಂಡಿದ್ದರು. ಇದನ್ನು ತ್ಯಜಿಸುವಂತೆ ಹಲವು ಬಾರಿ ಹೇಳಿದಾಗಲೂ ಜಗಳ ಮಾಡಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು. ದೀಪಾವಳಿಗೆ ಉಡುಗೊರೆ ನೀಡಲಿಲ್ಲ ಎಂದು ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಹೀಗೆ, ಹಲವು ಬಾರಿ ಕಿರುಕುಳ, ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News