ಭಾರತ-ಚೀನಾ ನಡುವೆ 9 ಸುತ್ತಿನ ಮಾತುಕತೆಯ ಬಳಿಕವೂ ಗಮನಾರ್ಹ ಪ್ರಗತಿ ಸಾಧ್ಯವಾಗಿಲ್ಲ: ಜೈಶಂಕರ್

Update: 2021-02-06 14:25 GMT

ಅಮರಾವತಿ, ಫೆ.6: ಗಡಿ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಭಾರತ-ಚೀನಾ ದೇಶಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಇದುವರೆಗೆ ಗಮನಾರ್ಹ ಪ್ರಗತಿ ಸಾಧ್ಯವಾಗಿಲ್ಲ ಎಂದು ವಿದೇಶ ವ್ಯವಹಾರ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಪೂರ್ವ ಲಡಾಖ್‌ನಲ್ಲಿ ಸೇನೆ ವಾಪಸಾತಿ ಕುರಿತ ಮಾತುಕತೆ ಭವಿಷ್ಯದಲ್ಲೂ ಮುಂದುವರಿಯಲಿದೆ. ಇದುವರೆಗೆ ಮಾತುಕತೆಯಲ್ಲಿ ಪ್ರಸ್ತಾವವಾದ ಯಾವುದೇ ವಿಷಯ ವಾಸ್ತವಿಕವಾಗಿ ಕಾರ್ಯರೂಪಕ್ಕೆ ಬಂದಿರುವುದು ಗೋಚರಿಸುತ್ತಿಲ್ಲ ಎಂದರು.

ಸೇನೆ ವಾಪಸಾತಿಯ ಕುರಿತ ಮಾತುಕತೆ ಅತ್ಯಂತ ಜಟಿಲವಾಗಿದೆ. ಇದು ಸೈನ್ಯವನ್ನು ಅವಲಂಬಿಸಿರುವುದರಿಂದ ಎಲ್ಲಿ, ಏನಾಗುತ್ತಿದೆ ಎಂಬ ಪ್ರಾದೇಶಿಕ ಸ್ಥಿತಿಯ ಬಗ್ಗೆ ಪರಿಜ್ಞಾನ ಇರಬೇಕಾಗುತ್ತದೆ. ಈ ಕೆಲಸವನ್ನು (ಸೇನೆ ವಾಪಸಾತಿಯ ಕುರಿತ ಪ್ರಕ್ರಿಯೆ ಅಂತಿಮಗೊಳಿಸುವುದು) ಸೇನೆಯ ಕಮಾಂಡರ್‌ಗಳು ನಡೆಸುತ್ತಿದ್ದಾರೆ ಎಂದವರು ಹೇಳಿದ್ದಾರೆ. ತಾನು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ವರ್ಷ ಚೀನಾದ ವಿದೇಶ ಸಚಿವ ಹಾಗೂ ರಕ್ಷಣಾ ಸಚಿವರೊಂದಿಗೆ ನಡೆಸಿದ ಮಾತುಕತೆಯಲ್ಲಿ, ಪೂರ್ವ ಲಡಾಖ್‌ನ ಕೆಲವು ಭಾಗಗಳಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಲಾಗಿತ್ತು. ಮಾತುಕತೆ ಫಲಪ್ರದವಾಗಬಹುದು ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಇದು ಸಾಧ್ಯವಾಗಿಲ್ಲ. ಆದ್ದರಿಂದ ಕಮಾಂಡರ್ ಮಟ್ಟದ ಮಾತುಕತೆ ಮತ್ತೆ ಮುಂದುವರಿಯಲಿದೆ ಎಂದು ಜೈಶಂಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News