2 ಲಕ್ಷ ರೂ. ಬಾಂಡ್‌ನಲ್ಲಿ ಮುಚ್ಚಳಿಕೆ ಬರೆದುಕೊಡಿ: ರೈತ ಮುಖಂಡರಿಗೆ ಉ.ಪ್ರದೇಶದ ಜಿಲ್ಲಾಡಳಿತ ಸೂಚನೆ

Update: 2021-02-06 14:32 GMT

ಲಕ್ನೊ, ಫೆ.6: ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಕೈಜೋಡಿಸಿರುವ ಸ್ಥಳೀಯ ರೈತ ಮುಖಂಡರಿಗೆ ನೋಟಿಸ್ ನೀಡಿರುವ ಬಾಘಪತ್ ಜಿಲ್ಲಾಡಳಿತ, ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಶಾಂತಿಯನ್ನು ಖಾತರಿ ಪಡಿಸಲು 2 ಲಕ್ಷ ರೂ. ವೈಯಕ್ತಿಕ ಬಾಂಡ್‌ನಲ್ಲಿ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿತ್ತು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಜನವರಿ 31ರಂದು ಬರೌತ್ ತಾಲೂಕಿನಲ್ಲಿ ನಡೆದಿದ್ದ ಮಹಾಪಂಚಾಯತ್‌ನ ಮುನ್ನಾದಿನ ತನಗೆ ಹಾಗೂ ಇತರ 6 ರೈತ ಮುಖಂಡರಿಗೆ ನೋಟಿಸ್ ಕಳುಹಿಸಲಾಗಿತ್ತು. ಶಾಂತಿ ನೆಲೆಸುವುದನ್ನು ಖಾತರಿ ಪಡಿಸಲು 2 ಲಕ್ಷ ರೂ. ವೈಯಕ್ತಿಕ ಬಾಂಡ್‌ನಲ್ಲಿ, ಇಬ್ಬರ ಜಾಮೀನು ಸಹಿತ ಒಂದು ವರ್ಷ ವಾಯ್ದೆಯ ಮುಚ್ಚಳಿಕೆ ಬರೆದುಕೊಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು ಎಂದು ರಾಷ್ಟ್ರೀಯ ಲೋಕದಳದ ಮಾಜಿ ಶಾಸಕ ವೀರ್‌ಪಾಲ್ ಸಿಂಗ್ ರಾಥಿ ಹೇಳಿದ್ದಾರೆ.

ರೈತರನ್ನು ಬೆಂಬಲಿಸದಂತೆ ತಮ್ಮ ಮೇಲೆ ಒತ್ತಡ ಹೇರಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಬಹುದು ಎಂಬ ಭಯದಲ್ಲಿ ನೋಟಿಸ್ ಜಾರಿಯಾಗಿದೆ. ಆದರೆ ಇದುವರೆಗೂ ಜಿಲ್ಲಾಡಳಿತದ ಎದುರು ಹಾಜರಾಗಿಲ್ಲ. ಕೃಷಿ ಕಾಯ್ದೆಗೆ ಸಂಬಂಧಿಸಿ ತಮ್ಮ ಮೌನ ಪ್ರತಿಭಟನೆ ಮುಂದುವರಿಯಲಿದೆ ಎಂದು ರಾಥಿ ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಹೇಳಿಕೆಯನ್ನು ದಾಖಲಿಸುವಂತೆ ದಿಲ್ಲಿ ಪೊಲೀಸರು ಸಮನ್ಸ್ ನೀಡಿರುವುದಾಗಿ ರಾಥಿ ಹೇಳಿದ್ದಾರೆ. ಬಾಘಪತ್ ಜಿಲ್ಲೆಯಲ್ಲಿ ಸುಮಾರು 200 ರೈತರಿಗೆ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸುವ ನೋಟಿಸ್ ನೀಡಲಾಗಿದೆ. ರಾಜ್ಯದ ಸಾಂಭಾ ಮತ್ತು ಸೀತಾಪುರ ಜಿಲ್ಲೆಯಲ್ಲೂ ಹಲವು ರೈತರಿಗೆ ಇದೇ ರೀತಿಯ ನೋಟಿಸ್ ಲಭಿಸಿದೆ ಎಂದು ಬಾಘಪತ್‌ನ ರೈತ ಮುಖಂಡ ಸಂಜೀವ್ ಚೌಧರಿ ಹೇಳಿದ್ದಾರೆ. ರಾಥಿ ಹಾಗೂ ಇತರರು ತಮ್ಮ ಭಾಷಣದ ಮೂಲಕ ಪ್ರತಿಭಟನಾ ನಿರತ ರೈತರನ್ನು ಪ್ರಚೋದಿಸಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ನೋಟಿಸ್ ರವಾನಿಸಲಾಗಿತ್ತು ಎಂದು ಬರೌತ್ ಠಾಣಾಧಿಕಾರಿ ಅಜಯ್‌ಕುಮಾರ್ ಶರ್ಮ ಹೇಳಿದ್ದಾರೆ. ಆದರೆ ನೋಟಿಸ್ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ. ಮುಂಬರುವ ಪಂಚಾಯತ್ ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು, ಇದುವರೆಗೆ 700 ಜನರಿಗೆ ನೋಟಿಸ್ ಜಾರಿಯಾಗಿದೆ. ಈ ಪ್ರಕ್ರಿಯೆ ಮುಂದುವರಿದಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News