ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಜೋಳ, ರಾಗಿ, ತೊಗರಿಬೇಳೆ ವಿತರಣೆ: ಸಚಿವ ಉಮೇಶ್ ಕತ್ತಿ

Update: 2021-02-06 14:35 GMT

ಬೆಳಗಾವಿ, ಫೆ. 6: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಬಿಳಿಜೋಳ, ರಾಗಿ, ಹೆಸರುಕಾಳು, ತೊಗರಿಬೇಳೆ ವಿತರಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಇಲಾಖೆಯ ಪ್ರಗತಿಪರಿಶೀಲನಾ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಹಾರ ಭದ್ರತೆ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ 5 ಕೆ.ಜಿ.ಅಕ್ಕಿ ವಿತರಿಸಲಾಗುತ್ತಿದೆ. ಅಕ್ಕಿಯ ಜೊತೆಗೆ ಇತರ ಧಾನ್ಯ ವಿತರಿಸುವ ಯೋಜನೆಯಿದೆ ಎಂದರು.

ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ಬಿಳಿಜೋಳ, ತೊಗರಿ, ಹೆಸರುಕಾಳು ವಿತರಿಸಲಾಗುವುದು. ದಕ್ಷಿಣ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ರಾಗಿ, ಹೆಸರುಕಾಳು ಹಾಗೂ ತೊಗರಿ ವಿತರಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇವೆ. ಎಪ್ರಿಲ್‍ನಿಂದ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಪಡಿತರ ಅಕ್ಕಿ ನೀಡುತ್ತಿರುವುದರಿಂದ ಉಪಯೋಗಕ್ಕಿಂತ ದುರ್ಬಳಕೆ ಹೆಚ್ಚುತ್ತಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಕಳುಹಿಸುತ್ತಿರುವ ಬಗ್ಗೆಯೂ ದೂರುಗಳು, ವರದಿಗಳು ಬರುತ್ತಿವೆ. ಅಕ್ಕಿಯ ಜೊತೆಗೆ ಇತರ ಧಾನ್ಯಗಳನ್ನು ವಿತರಿಸಿದರೆ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.

ಪಂಜಾಬ್ ಅಕ್ಕಿ ಖರೀದಿಗೆ ಬ್ರೇಕ್?: ಸ್ಥಳೀಯವಾಗಿಯೇ ಅಕ್ಕಿ ಖರೀದಿ ಆಹಾರ ಭದ್ರತೆ ಯೋಜನೆಯಡಿ ವಿತರಿಸಲಾಗುತ್ತಿದ್ದ ಅಕ್ಕಿಯನ್ನು ಪಂಜಾಬಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹೀಗಾಗಿ ಆಹಾರ ಭದ್ರತೆ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ರಾಜ್ಯದಲ್ಲೇ ಖರೀದಿಸಬೇಕು ಎಂಬ ಉದ್ದೇಶ ನಮ್ಮದು. ಇದರಿಂದ ನಮ್ಮ ರಾಜ್ಯದ ಭತ್ತ ಬೆಳೆಯುವ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ರಾಜ್ಯದಲ್ಲೆ ಅಕ್ಕಿ ಖರೀದಿಸಿ ವಿತರಣೆ ಸಂಬಂಧ ಸರಕಾರದ ಮಟ್ಟದಲ್ಲಿ ಚರ್ಚಿಸಬೇಕಿದೆ. ಶೀಘ್ರವೇ ದಿಲ್ಲಿಗೆ ತೆರಳಿ ಕೇಂದ್ರ ನಾಯಕರ ಜೊತೆಗೂ ಚರ್ಚಿಸಲಾಗುವುದು. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ ರಾಜ್ಯದಲ್ಲೇ ಅಕ್ಕಿ ಖರೀದಿಸಲಾಗುವುದು. ಇನ್ನು ಮುಂದೆ ಕಾಳಸಂತೆಗೆ ಅಕ್ಕಿ ಸಾಗಾಟವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅನಧಿಕೃತ ಪಡಿತರ ಚೀಟಿ ರದ್ದು: ಅನರ್ಹ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಸೂಚನೆ ನೀಡಲಾಗಿದೆ. ಈ ಸಂಬಂಧ ತಹಶೀಲ್ದಾರ್, ಪಿಡಿಒ, ಗ್ರಾಪಂ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರತಿಗ್ರಾಮಗಳಲ್ಲಿ ಸರ್ವೆ ಮಾಡಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಅನಧಿಕೃತ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗುವುದು. ಮಾರ್ಚ್ 31ರೊಳಗೆ ಅನಧಿಕೃತ ಪಡಿತರ ಚೀಟಿದಾರರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದ ಅವರು, ಬಿಪಿಎಲ್ ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದಿದ್ದರೆ ಅಂತಹ ಫಲಾನುಭವಿಗಳ ಕಾರ್ಡ್ ಗಳನ್ನು ರದ್ದುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News