ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣ: ವಕೀಲೆ ಮೀರಾ ಬಂಧನ ಸಾಧ್ಯತೆ ?

Update: 2021-02-06 14:40 GMT

ಬೆಂಗಳೂರು, ಫೆ.6: ಸಾಹಿತಿ, ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿರುವ ಪ್ರಕರಣ ಸಂಬಂಧ ಆರೋಪಿ, ವಕೀಲೆ ಮೀರಾ ರಾಘವೇಂದ್ರರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ಮೀರಾ ರಾಘವೇಂದ್ರ ವಿರುದ್ಧ ಹಲಸೂರು ಗೇಟ್ ಠಾಣಾ ಪೊಲೀಸರು, ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯವುದು), 504(ಅವಾಚ್ಯವಾಗಿ ನಿಂದನೆ), 506(ಕೊಲೆ ಬೆದರಿಕೆ) ಅಡಿ ಎಫ್‍ಐಆರ್ ದಾಖಲಿಸಿದ್ದಾರೆ. ಇದರ ನಡುವೆ ಆಕೆಗೆ ನೋಟಿಸ್ ರವಾನೆ ಮಾಡಿರುವ ಪೊಲೀಸರು, ನೋಟಿಸ್ ತಲುಪಿದ ಮೂರು ದಿನಗಳಲ್ಲಿ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಒಂದು ವೇಳೆ ಗೈರು ಹಾಜರಿಯಾದಲ್ಲಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಆರೋಪಿ ಸ್ಥಾನದಲ್ಲಿರುವ ಮೀರಾ ಠಾಣೆಗೆ ಹಾಜರಾಗದಿದ್ದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರಚಾರಕ್ಕೆ ಕೃತ್ಯ?: ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೀರಾ ರಾಘವೇಂದ್ರ, ಬೆರಳೆಣಿಕೆಯಷ್ಟು ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ತದನಂತರ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದು. ಜತೆಗೆ, ರಾಜಕೀಯವಾಗಿ ಬೆಳೆಯುವ ಉದ್ದೇಶ ಇಟ್ಟುಕೊಂಡಿದ್ದರು. ಹಾಗೇ, ರಾಷ್ಟ್ರೀಯ ಪಕ್ಷವೊಂದರಿಂದ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಹಾಗೂ ಪ್ರಚಾರಕ್ಕಾಗಿ ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದಿರುವುದಾಗಿ ಹೇಳಲಾಗುತ್ತಿದೆ.

ಬಂಧನಕ್ಕೆ ದಸಂಸ ಒತ್ತಾಯ: ಸಾಹಿತಿ, ಚಿಂತಕ ಪ್ರೊ. ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದಿರುವ ಪ್ರಕರಣ ಸಂಬಂಧಿಸಿದಂತೆ ಆರೋಪಿ ವಕೀಲೆ ಮೀರಾ ರಾಘವೇಂದ್ರರನ್ನು ಈ ಕೂಡಲೇ ಬಂಧಿಸುವಂತೆ ದಲಿತ ಸಂಘರ್ಷ ಸಮಿತಿ(ಸಮತಾವಾದ) ರಾಜ್ಯಾಧ್ಯಕ್ಷ ಎಚ್.ಮಾರಪ್ಪ ಆಗ್ರಹಿಸಿದರು.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಚಾರ ಪಡೆಯಲು ನ್ಯಾಯಾಲಯವನ್ನೇ ಮೆಟ್ಟಿಲಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿ ಸಂವಿಧಾನ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ದೂರಿದರು.

ಭಗವಾನ್ ಅವರು ತಪ್ಪು ಮಾಡಿದ್ದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿ. ನಮ್ಮ ಅಭ್ಯಂತರವೇನಿಲ್ಲ. ಆದರೆ, ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿಯುವ ಮೂಲಕ, ಕಪ್ಪುಕೋಟನ್ನು ಧರಿಸಿ ನ್ಯಾಯಾಲಯದ ಮಾನತೆಗೆಯುವ, ನ್ಯಾಯದೇವತೆಯ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ಮೀರಾ ರಾಘವೇಂದ್ರ ಪ್ರಚಾರಕ್ಕಾಗಿ, ಬಿಜೆಪಿ ಸರಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ವೈಯಕ್ತಿಕವಾಗಿ ಟೀಕೆಗಳನ್ನು ವ್ಯಕ್ತಪಡಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಅದನ್ನು ಬಿಟ್ಟು ಈ ರೀತಿ ಅಸಭ್ಯವಾಗಿ ವರ್ತಿಸಿ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಇದಕ್ಕೆ ಎದೆಗುಂದುವುದಿಲ್ಲ. ಭಗವಾನ್ ಅವರಿಗೆ ನೈತಿಕ ಸ್ಥೈರ್ಯ ನೀಡುತ್ತೇವೆ ಎಂದು ತಿಳಿಸಿದರು.

ಬಿಎಸ್ಪಿ ಖಂಡನೆ, ಪ್ರತಿಭಟನೆ ಎಚ್ಚರಿಕೆ
ಪ್ರೊ.ಭಗವಾನ್ ಅವರ ಮೇಲೆ ಕೋರ್ಟ್ ಆವರಣದೊಳಗೆ ಮಸಿ ಬಳಿದು, ನ್ಯಾಯಾಂಗ ವ್ಯವಸ್ಥೆಯನ್ನೇ ಅಪಮಾನ ಮಾಡಿರುವ ಮೀರಾ ರಾಘವೇಂದ್ರಗೆ ವಕೀಲ ವೃತ್ತಿ ನಡೆಸದಂತೆ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಬಿಎಸ್‍ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀರಾ ರಾಘವೇಂದ್ರ ಮಸಿ ಬಳಿದದ್ದು ವಕೀಲರ ವೃತ್ತಿ ಸಂಹಿತೆಗೆ ಅಪಚಾರ. ನ್ಯಾಯಾಲಯದ ಅಂಗಳದಲ್ಲಿ ಸಮವಸ್ತ್ರ ಧರಿಸಿರುವುದನ್ನೆ ಮರೆತು ಪ್ರೊ. ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ವಕೀಲರ ವೃತ್ತಿಯ ವಿರುದ್ಧವೆಸಗಿರುವ ಅನಾಚಾರ ಎಂದು ಹೇಳಿದರು.

ನ್ಯಾಯಾಲಯದ ಆವರಣದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ಅಲ್ಲದೆ, ಪ್ರಕಣವೊಂದರ ಸಂಬಂಧ ಭಗವಾನ್ ಅವರು ಕಾನೂನಿಗೆ ಬೆಲೆ ಕೊಟ್ಟು ಮೈಸೂರಿಂದ ಬೆಂಗಳೂರಿಗೆ ಬಂದು ಕೋರ್ಟಿಗೆ ಹಾಜರಾಗಿದ್ದಾರೆ. ಕರಿಕೋಟ್ ಹಾಕಿರುವ ವಕೀಲೆ ಈ ರೀತಿ ಮಾಡುವುದು ಸರಿಯಲ್ಲ. ನ್ಯಾಯ ಕೊಡಿಸುವ ವಕೀಲರು ಈ ರೀತಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News