ಶೃಂಗೇರಿ ಬಾಲಕಿಯ ಅತ್ಯಾಚಾರ ಪ್ರಕರಣ: ಸಿಪಿಐ ಅಮಾನತು ಬೆನ್ನಲ್ಲೇ ಪಿಎಸ್‌ಐ ವರ್ಗಾವಣೆ

Update: 2021-02-06 17:40 GMT

ಚಿಕ್ಕಮಗಳೂರು, ಫೆ.6: ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚುವಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ತನಿಖಾಧಿಕಾರಿಯನ್ನು ಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಠಾಣೆಯ ಪಿಎಸ್‌ಐ ಕೀರ್ತಿಕುಮಾರ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

ಪಿಎಸ್‌ಐ ಕೀರ್ತಿಕುಮಾರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟ ಠಾಣೆಗೆ ವರ್ಗಾಯಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದು, ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಶೃತಿ ಅವರನ್ನು ನೇಮಕ ಮಾಡಲಾಗಿದೆ.

ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತರಿದ್ದು, ಪೊಲೀಸರು ರಾಜಕಾರಣಿಗಳು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆಂದು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಸಂಘಸಂಸ್ಥೆಗಳು ಆರೋಪಿಸಿದ್ದು, ಶೃಂಗೇರಿ ಪೊಲೀಸರ ಕಾರ್ಯವೈಖರಿ ವಿರುದ್ಧ ದೂರುದಾರ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. 

ಈ ಬೆಳವಣಿಗೆಗಳ ಬೆನ್ನಲ್ಲೇ ಶುಕ್ರವಾರ ಪ್ರಕರಣದ ತನಿಖಾಧಿಕಾರಿ ಹಾಗೂ ಸಿಪಿಐ ಆಗಿದ್ದ ಸಿದ್ದರಾಮಪ್ಪ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಆದೇಶಿಸಿದ್ದರು. ಶನಿವಾರ ಶೃಂಗೇರಿ ಠಾಣೆಯ ಪಿಎಸ್‌ಐ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಎಎಸ್ಪಿ ಶೃತಿ ಅವರು ಸದ್ಯ ಹೊಸ ತಂಡದೊಂದಿಗೆ ತನಿಖೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ಪ್ರಕರಣದಲ್ಲಿ 17 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಒಟ್ಟು 30ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಪ್ರಕರಣದಲ್ಲಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಪೊಲೀಸರು ಇದುವರೆಗೆ 8 ಮಂದಿ ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತರು ಹೆಚ್ಚು ಇರುವುದರಿಂದ ಪೊಲೀಸರು ಬಿಜೆಪಿ ಸರಕಾರದಲ್ಲಿರುವ ಶಾಸಕರು, ಪ್ರಭಾವಿಗಳ ಒತ್ತಡದಿಂದಾಗಿ ಬಾಲಕಿ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪ ವಿರೋಧ ಪಕ್ಷಗಳಿಂದ ಕೇಳಿ ಬಂದಿತ್ತು.

ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದು, ಶುಕ್ರವಾರ ಶೃಂಗೇರಿ ಪಟ್ಟಣದಲ್ಲಿ ಸಾರ್ವಜನಿಕರು ಧರಣಿ ನಡೆಸಿ ಠಾಣೆಗೆ ಮುತ್ತಿಗೆ ಹಾಕಲೂ ಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News