ಲಂಚ ಪಡೆದ ಆರೋಪ: ಇನ್‍ಸ್ಪೆಕ್ಟರ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು

Update: 2021-02-06 17:08 GMT

ಬೆಂಗಳೂರು, ಫೆ.6: 10 ಲಕ್ಷ ರೂ. ಲಂಚ ಪಡೆದ ಆರೋಪದಡಿ ಇಂದಿರಾನಗರ ಇನ್‍ಸ್ಪೆಕ್ಟರ್ ರಾಮಮೂರ್ತಿ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಲ್ಲಿ (ಎಸಿಬಿ) ದೂರು ದಾಖಲಾಗಿದೆ.

ಇಂದಿರಾ ನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ನೀಡಿದ ದೂರಿನ ಮೇರೆಗೆ ಇನ್‍ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ, ಇಂದಿರಾನಗರ ಕ್ಲಬ್ ಸದಸ್ಯನಾಗಿದ್ದ ರಾಮ್ ಮೋಹನ್ ಮೆಹನ್ ಅತಿಕ್ರಮವಾಗಿ ಕ್ಲಬ್ ಪ್ರವೇಶಿಸಿದ್ದರು. ಇದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿಗೆ ರಾಮ್ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಗೇಂದ್ರ ದೂರು ನೀಡಿದ್ದರು.

ದೂರಿನ ಮೇರೆಗೆ ಆರೋಪಿ ವಿರುದ್ಧ ಇನ್‍ಸ್ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದರು. ಸೂಕ್ತ ತನಿಖೆ ನಡೆಸದೆ ಆರೋಪಿಯೊಂದಿಗೆ ಶಾಮೀಲಾಗಿ ನ್ಯಾಯಾಲಯದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಜೊತೆಗೆ ರಾಮ್‍ಮೋಹನ್ ಮೆಹನ್ ಬಳಿಯಿಂದ ಇನ್‍ಸ್ಪೆಕ್ಟರ್ 10 ಲಕ್ಷರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಎಸಿಬಿಯಲ್ಲಿ ಮತ್ತೆ ನಾಗೇಂದ್ರ ದೂರು ನೀಡಿದ್ದರು.

ದೂರನ್ನು ಪರಿಶೀಲಿಸಿದ ನಂತರ ಮೇಲ್ನೋಟಕ್ಕೆ ಲಂಚ ಸ್ವೀಕಾರ ಸಾಬೀತಾಗಿದ್ದು, ಇನ್‍ಸ್ಪೆಕ್ಟರ್ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News