ಕೋವಿಡ್-19ನಿಂದ ಪಿಎಂಇಜಿಪಿಯ ಶೇ. 88 ಫಲಾನುಭವಿಗಳ ಮೇಲೆ ದುಷ್ಪರಿಣಾಮ

Update: 2021-02-06 18:17 GMT

ಹೊಸದಿಲ್ಲಿ, ಫೆ. 6: ಕೋವಿಡ್-19 ಸಾಂಕ್ರಾಮಿಕ ರೋಗ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಅಡಿಯಲ್ಲಿ ಆರಂಭಿಸಲಾದ ಸೂಕ್ಷ್ಮ ಘಟಕಗಳ ಬಗ್ಗೆ ಖಾದಿ ಹಾಗೂ ಗ್ರಾಮ ಕೈಗಾರಿಕೆಗಳ ಆಯೋಗ (ಕೆವಿಐಸಿ) ಆಯೋಜಿಸಿದ ಅಧ್ಯಯನದಲ್ಲಿ, ಪಿಎಂಇಜಿಪಿಯ ಯೋಜನೆಯ ಶೇ. 88 ಫಲಾನುಭವಿಗಳ ಕೋವಿಡ್-19 ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಬಹಿರಂಗಗೊಂಡಿದೆ.

ಈ ಅವಧಿಯಲ್ಲಿ ಇದರಲ್ಲಿ ಶೇ. 57 ಘಟಕಗಳು ಬಾಗಿಲು ಮುಚ್ಚಿಕೊಂಡಿರುವುದು ಹಾಗೂ ಶೇ. 30 ಘಟಕಗಳಲ್ಲಿ ಉತ್ಪಾದನೆ ಹಾಗೂ ಆದಾಯ ಇಳಿಕೆಯಾಗಿರುವುದು ವರದಿಯಾಗಿದೆ. ಲೋಕಸಭೆಯಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯ ಉದ್ಯಮದ ಬಗೆಗಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ನಿತಿನ್ ಗಡ್ಕರಿ, ಕೆವಿಐಸಿ ಆಯೋಜಿಸಿದ ಅಧ್ಯಯನದ ಮೂಲಕ ಸೂಕ್ಷ್ಮ ಘಟಕಗಳ ಮೇಲೆ ಕೋವಿಡ್-19ನ ಪರಿಣಾಮವನ್ನು ಸಚಿವಾಲಯ ಅಂದಾಜಿಸಿದೆ ಎಂದರು. ನಿಯಮಿತ ವೇತನ ಪಾವತಿಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅವಧಿಯಲ್ಲಿ ತಮಗೆ ಪೂರ್ಣ ವೇತನ ನೀಡಲಾಗಿದೆ ಎಂದು ಸುಮಾರು ಶೇ. 40.60 ಪ್ರತಿಕ್ರಿಯೆದಾರರು, ಭಾಗಶಃ ವೇತನ ನೀಡಲಾಗಿದೆ ಎಂದು ಶೇ. 42.54 ಪ್ರತಿಕ್ರಿಯೆದಾರರು ಹಾಗೂ ವೇತನ ನೀಡಿಲ್ಲ ಎಂದು ಶೇ. 10.86 ಪ್ರತಿಕ್ರಿಯೆದಾರರು ಹೇಳಿರುವುದಾಗಿ ತಿಳಿಸಿದರು.

ಬಹುಪಾಲು ಫಲಾನುಭವಿಗಳು ಹೆಚ್ಚುವರಿ ಹಣಕಾಸು ಬೆಂಬಲ, ಬಡ್ಡಿಯಲ್ಲಿ ವಿನಾಯತಿ, ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲದ ಅಗತ್ಯವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಸರಕಾರ ‘ಆತ್ಮ ನಿರ್ಭರ ಭಾರತ’ ಅಭಿಯಾನದ ಅಡಿಯಲ್ಲಿ ಕೈಗಾರಿಕೆಗಳು ಹಾಗೂ ಎಂಎಸ್‌ಎಂಇಗಳು ಸೇರಿದಂತೆ ಸಮಾಜದ ಎಲ್ಲ ವರ್ಗಕ್ಕೆ 20 ಲಕ್ಷ ಕೋಟಿ ರೂಪಾಯಿದ ಸಮಗ್ರ ಪ್ಯಾಕೇಜ್ ಘೋಷಿಸಿತ್ತು ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News