ಏಕಗವಾಕ್ಷಿ ಪದ್ದತಿಯಡಿ ಗಣಿಗಾರಿಕೆ ಪ್ರಸ್ತಾವನೆಗೆ ಅನುಮೋದನೆ: ಸಚಿವ ಮುರುಗೇಶ್ ನಿರಾಣಿ

Update: 2021-02-07 15:51 GMT

ಬೆಂಗಳೂರು, ಫೆ. 7: ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ ನೀಡಲು ಸಾಧ್ಯವಾಗುವಂತಹ ‘ಏಕಗವಾಕ್ಷಿ' ಪದ್ದತಿಯನ್ನು ಅಳವಡಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರೇಶ್ ನಿರಾಣಿ ತಿಳಿಸಿದ್ದಾರೆ.

ಆ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ದಿಮೆದಾರರಿಗೆ ಸುಲಭವಾಗಿ ಹಾಗೂ ಸುಲಲಿತವಾಗಿ ವ್ಯಾಪಾರ, ವಹಿವಾಟು ನಡೆಸಲು ಅನುಕೂಲ ಆಗುವಂತೆ ಈ ಪದ್ದತಿಯನ್ನು ಜಾರಿ ಮಾಡಲು ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.

ರವಿವಾರ ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಮಿಗಳ ಜೊತೆ ಸಭೆ ನಡೆಸಿದ ಅವರು, ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ‘ನಮ್ಮ ಸರಕಾರ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಬಯಸಿದೆ. ಅನೇಕ ವರ್ಷಗಳಿಂದ ಅನುಮೋದನೆಗಾಗಿ ಕಾಯುತ್ತಿರುವ ಪ್ರಸ್ತಾವನೆಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು. ಉದ್ದಿಮೆದಾರರ ಮನೆ ಬಾಗಿಲಿಗೆ ನಾವೇ ಹೋಗಬೇಕೆಂಬುದು ನಮ್ಮ ಗುರಿಯಾಗಿದೆ' ಎಂದರು.

ಇಲಾಖೆಯಿಂದ ಇಲಾಖೆಗೆ ಪರವಾನಗಿ ಪಡೆಯಲು ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಬೇಕಾದರೆ ಏಕಗವಾಕ್ಷಿ ಪದ್ದತಿ ಜಾರಿ ಮಾಡುವುದೇ ಏಕೈಕ ಪರಿಹಾರ ಎಂದರು. ಏಕಗವಾಕ್ಷಿ ಪದ್ಧತಿ ಜಾರಿ ಮಾಡಿದರೆ, ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಇದರಿಂದ ಉದ್ಯೋಗಗಳನ್ನು ಸೃಷ್ಟಿಸಬಹುದೆಂದು ಅವರು ಅಭಿಪ್ರಾಯಪಟ್ಟರು.

ಯೋಜನೆಗಳನ್ನು ಅನುಮೋದಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಏಕಗವಾಕ್ಷಿ ಪದ್ದತಿಯನ್ನು ಜಾರಿ ಮಾಡಬೇಕು. ‘5 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಪ್ರಸ್ತಾವನೆಗೆ  ಜಿಲ್ಲಾ ಮಟ್ಟದಲ್ಲಿ ಸಮಿತಿಯ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳು' ಅನುಮೋದನೆ ನೀಡಬೇಕು.

‘5 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳಿಗೆ ರಾಜ್ಯಮಟ್ಟದ ಸಮಿತಿಗೆ ಮುಖ್ಯಸ್ಥರಾಗಿರುವ ಸಚಿವರೇ' ಒಪ್ಪಿಗೆ ನೀಡಬೇಕೆಂಬ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಯಿತು. ಈಗಾಗಲೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಈ ಪದ್ದತಿ ಜಾರಿಯಲ್ಲಿದೆ. ನಮ್ಮ ಇಲಾಖೆಗೂ ಇದು ಅಗತ್ಯವಾಗಿದೆ ಎಂದು ಹೇಳಿದರು.

ಮರಳು, ಕಲ್ಲು ಮತ್ತು ಗ್ರಾನೈಟ್‍ನಂತಹ ಸಣ್ಣ ಉದ್ದಿಮೆದಾರರು ನಿರಪೇಕ್ಷಣಾ ಪತ್ರ (ಎನ್‍ಒಸಿ)ವನ್ನು ನಾಲ್ಕು ಇಲಾಖೆಗಳಿಂದ ಪಡೆಯಬೇಕು. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಸಬೇಕೆಂದು ಸೂಚಿಸಿದ್ದಾರೆ. ಉದ್ದಿಮೆದಾರರು ಎನ್‍ಒಸಿ ಪಡೆಯಲು ಕಂದಾಯ ಇಲಾಖೆ (ಜಿಲ್ಲಾಧಿಕಾರಿ), ಅರಣ್ಯ( ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ), ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‍ಒಸಿ ಪತ್ರ ಪಡೆಯಬೇಕು. ಪಟ್ಟಾ ಭೂಮಿಯಲ್ಲಿ ತಹಶೀಲ್ದಾರ್ ಅವರಿಂದ ಅನುಮತಿ ಪಡೆಯಬೇಕಾದ ಅಗತ್ಯವಿದೆ.

ಯೋಜನೆಯು 25 ಹೆಕ್ಟೇರ್ ಗಿಂತ ಕಡಿಮೆಯಿದ್ದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪತ್ರ ಪಡೆಯಬೇಕು. 25 ಹೆಕ್ಟೇರ್ ಗಿಂತ ಹೆಚ್ಚಿದ್ದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆಯಬೇಕು. ಪರವಾನಗಿ ಪಡೆಯಲು ಹಲವು ವರ್ಷಗಳೇ ಬೇಕಾಗಿರುವುದರಿಂದ ಈ ಸಮಸ್ಯೆಯನ್ನು ತಪ್ಪಿಸಲು ಏಕಗವಾಕ್ಷಿ ಪದ್ದತಿ ಜಾರಿ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಭೆಯಲ್ಲಿ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕರ್ನಾಟಕ ಅದಿರು ನಿಗಮದ ವ್ಯವಸ್ಥಾಪಕ ನಿದೇರ್ಶಕ ನವೀನ್ ರಾಜ್‍ಸಿಂಗ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿದೇರ್ಶಕ ಡಿ.ರಮೇಶ್ ಉಪಸ್ಥಿತರಿದ್ದರು.

‘ಏಕಗವಾಕ್ಷಿ ಪದ್ದತಿಯಲ್ಲಿ ಸಮಿತಿಯು ಅನುಮೋದಿಸಿದ ಯೋಜನೆಗಳಿಗೆ ಸಾಲದ ಸೌಲಭ್ಯವನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಒದಗಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯೂ ಅನುಕೂಲ ಕಲ್ಪಿಸಲಿದೆ. ಇದು ಹೂಡಿಕೆದಾರರಿಗೆ ಹೆಚ್ಚಿನ ಸಹಾಯವಾಗಲಿದೆ'

-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News