ನ್ಯಾಯ ವ್ಯವಸ್ಥೆಯ ಮುಖಕ್ಕೆ ಮಸಿ ಬಳಿದ ನ್ಯಾಯವಾದಿ

Update: 2021-02-08 04:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನ್ಯಾಯಾಲಯದ ಆವರಣದಲ್ಲಿ, ನ್ಯಾಯವಾದಿಯೇ ತೀರ್ಪನ್ನು ನೀಡಿದರೆ ಆ ಅವಮಾನ ನ್ಯಾಯಾಧೀಶರಿಗೇ ಆಗಿರುತ್ತದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲು ಬೆಂಗಳೂರಿನ ನ್ಯಾಯಾಲಯಕ್ಕೆ ಆಗಮಿಸಿದ್ದ ಚಿಂತಕ, ಲೇಖಕ ಭಗವಾನ್ ಅವರ ಮುಖಕ್ಕೆ ಇತ್ತೀಚೆಗೆ ನ್ಯಾಯವಾದಿಯೊಬ್ಬರು ಮಸಿ ಎರಚಿದ್ದಾರೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ಮೇಲಿನ ಆರೋಪದ ಕುರಿತಂತೆ ವಿಚಾರಣೆಗೆಂದು ಆಗಮಿಸಿದ ಚಿಂತಕರೊಬ್ಬರ ಮೇಲೆ ನ್ಯಾಯವಾದಿಯೇ ದಾಳಿ ನಡೆಸಿರುವುದರಿಂದ ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ನ್ಯಾಯವಾದಿ ತನಗೆ ‘ನ್ಯಾಯಾಲಯದ ಕಾರ್ಯ ಕಲಾಪ’ದ ಕುರಿತಂತೆ ವಿಶ್ವಾಸವಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಈ ಮೂಲಕ, ಸ್ವತಃ ನ್ಯಾಯವ್ಯವಸ್ಥೆಯ ಮುಖಕ್ಕೆ ಮಸಿ ಬಳಿದಿದ್ದಾರೆ. ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಈ ನ್ಯಾಯವಾದಿಗೆ ನಂಬಿಕೆ ಇದ್ದಿದ್ದೇ ಆಗಿದ್ದರೆ, ಆಕೆ ಭಗವಾನ್ ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ಮುಖಾಮುಖಿಯಾಗುತ್ತಿದ್ದರು. ತಾನು ಗೌರವಿಸುವ ಸಂವಿಧಾನದ ಮೂಲಕವೇ ನ್ಯಾಯವನ್ನು ಪಡೆದುಕೊಳ್ಳುತ್ತಿದ್ದರು. ಸ್ವತಃ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದ ನ್ಯಾಯವಾದಿ ನ್ಯಾಯಕ್ಕೆ ಅದು ಹೇಗೆ ನ್ಯಾಯವನ್ನು ಸಲ್ಲಿಸಬಲ್ಲರು? ಅಂತಹ ನ್ಯಾಯವಾದಿಯನ್ನು ನ್ಯಾಯಾಲಯದೊಳಗೆ ಬಿಟ್ಟುಕೊಳ್ಳುವುದು ಎಷ್ಟು ಸರಿ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

‘ಮಸಿ ಬಳಿಯುವುದು’ ಎನ್ನುವ ಪದಗಳಿಗೆ ಋಣಾತ್ಮಕವಾದ ಅರ್ಥವಿದೆ. ಒಬ್ಬ ಯಾವುದೇ ಕುಟುಂಬದ ಅಥವಾ ಸಂಸ್ಥೆಯ ಮರ್ಯಾದೆಯನ್ನು ಕಳೆದರೆ ‘ಆತ ಮಸಿ ಬಳಿದ’ ಎಂದು ಆತನನ್ನು ಹಳಿಯುತ್ತೇವೆ. ಆದುದರಿಂದ ಸಮಾಜ ಮೊದಲು ಮಸಿ ಬಳಿದವನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಆ ಬಳಿಕ ಮಸಿ ಬಳಿಯಲ್ಪಟ್ಟವನ ಕುರಿತಂತೆ ಮಾತನಾಡುತ್ತದೆ. ರಾಜ್ಯದಲ್ಲಿ ಇಂತಹ ಮಸಿ ಬಳಿಯುವವರ ದೊಡ್ಡ ಪಡೆಯೇ ಇದೆ. ಹತಾಶೆಯ ಪರಮಾವಧಿಯಲ್ಲಿರುವವರು ಇಂತಹ ಕೃತ್ಯವನ್ನು ಎಸಗುತ್ತಾರೆ. ಈ ಹಿಂದೆ ಕೇಂದ್ರದಲ್ಲಿ ಹಲವು ನಾಯಕರ ಮೇಲೆ ದುಷ್ಕರ್ಮಿಗಳು ಮಸಿ ಬಳಿದಿದ್ದಾರೆ. ರಾಜ್ಯದಲ್ಲೂ ಹಲವು ಚಿಂತಕರ ಮೇಲೆ ಮಸಿ ಬಳಿದ ಘಟನೆಗಳು ನಡೆದಿವೆ. ಅಷ್ಟೇ ಏಕೆ, ಕನ್ನಡದ ಕುರಿತಂತೆ ಅವಹೇಳನಕಾರಿ ಮಾತನ್ನಾಡಿದಾಗ, ಇತರರ ಮೇಲೆ ಮಸಿ ಬಳಿದ ಕುಖ್ಯಾತಿಯನ್ನು ಪಡೆದ ಪ್ರಮೋದ್ ಮುತಾಲಿಕರ ಮೇಲೂ ಕನ್ನಡ ಅಭಿಮಾನಿಗಳು ಎಂದು ಕರೆಸಿಕೊಂಡ ಒಂದು ಗುಂಪು ಮಸಿ ಬಳಿದಿತ್ತು. ಆದರೆ ಈ ಸಂದರ್ಭದಲ್ಲಿ ಯಾವುದೇ ಕನ್ನಡ ಪರ ಸಂಘಟನೆಗಳು ಈ ಘಟನೆಯನ್ನು ಬೆಂಬಲಿಸಿರಲಿಲ್ಲ. ಯಾಕೆಂದರೆ, ತಮ್ಮ ಕೈಗಳನ್ನು ಮಸಿ ಮಾಡಿದ ಬಳಿಕವೇ ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಲು ಸಾಧ್ಯ. ಅಷ್ಟೇ ಅಲ್ಲ ಮಸಿ ಬಳಿಯುವುದನ್ನು ಬೆಂಬಲಿಸಿದವರ ಕೈಗಳೂ ಆ ಮಸಿಯಿಂದ ಕಳಂಕಿತವಾಗುತ್ತವೆೆ. ಭಗವಾನ್ ಮೇಲೆ ಮಸಿ ಬಳಿದ ಪ್ರಕರಣ ಇನ್ನೂ ಒಂದಿಷ್ಟು ಭಿನ್ನ. ಇಲ್ಲಿ ಮಸಿ ಬಳಿದವರು ಆಕ್ರೋಶಗೊಂಡ ಶ್ರೀಸಾಮಾನ್ಯನಲ್ಲ. ಭಾವಾವೇಶಕ್ಕೊಳಗಾಗಿರುವ ಯಾವುದೋ ಸಂಘಟನೆಯ ಕಾರ್ಯಕರ್ತನೂ ಅಲ್ಲ. ಇಲ್ಲಿ ಮಸಿ ಬಳಿದವರು, ಈ ದೇಶದ ಸಂವಿಧಾನವನ್ನು ಓದಿಕೊಂಡು, ಅದರ ಪ್ರಕಾರ ಜನರಿಗೆ ನ್ಯಾಯವನ್ನು ನೀಡಬೇಕಾದ ನ್ಯಾಯವಾದಿ. ಆ ಮೂಲಕ ಆಕೆ ಪರೋಕ್ಷವಾಗಿ ತಾನು ಧರಿಸಿದ ಕಪ್ಪು ಬಟ್ಟೆಗೇ ಮತ್ತೊಮ್ಮೆ ಮಸಿ ಬಳಿದುಕೊಂಡರು. ಅಷ್ಟೇ ಅಲ್ಲ, ನ್ಯಾಯಾಲಯದೊಳಗಿರುವ ನ್ಯಾಯದೇವತೆಯನ್ನೂ ಅವಮಾನಿಸಿದರು.

ವಿಪರ್ಯಾಸವೆಂದರೆ, ಈ ಘಟನೆಯನ್ನು ಸಮರ್ಥಿಸುವ ಮೂಲಕ, ಪೇಜಾವರಶ್ರೀಗಳೂ ತನ್ನ ಮುಖಕ್ಕೆ ಮಸಿಯನ್ನು ಬಳಿಸಿಕೊಂಡಿದ್ದಾರೆ. ಆವೇಶಕ್ಕೊಳಗಾಗಿ ತಪ್ಪು ದಾರಿಯನ್ನು ತುಳಿಯುವ ಜನರನ್ನು ಸನ್ಮಾರ್ಗದತ್ತ ಮುನ್ನಡೆಸುವ ಸ್ವಾಮೀಜಿಯೇ ಈ ಕೃತ್ಯವನ್ನು ಪರೋಕ್ಷವಾಗಿ ಸಮರ್ಥಿಸಿದರೆ ಉಳಿದವರ ಪಾಡೇನು? ಭಗವಾನ್ ರಾಮನ ಕುರಿತಂತೆ ತಪ್ಪು ಮಾಹಿತಿಗಳನ್ನು ನೀಡಿದರೆ, ರಾಮನ ಕುರಿತ ಆದರ್ಶಗಳನ್ನು ಸಮಾಜದಲ್ಲಿ ಪ್ರಚುರ ಪಡಿಸಿ ಆ ತಪ್ಪು ಮಾಹಿತಿಗಳನ್ನು ನಿವಾರಿಸುವುದು ಸ್ವಾಮೀಜಿಗಳ ಕೆಲಸ. ರಾಮನೆಂದಲ್ಲ, ಯಾವುದೇ ಧರ್ಮದ ಕುರಿತಂತೆ ಅಥವಾ ಅವರ ದೇವರುಗಳ ಕುರಿತಂತೆ ಯಾರೋ ಟೀಕಿಸಿದಾಕ್ಷಣ ಅವರ ಮೇಲೆ ಹಲ್ಲೆ ಮಾಡಲು ಹೊರಡುವುದು ಧಾರ್ಮಿಕತೆಯ ಲಕ್ಷಣವಲ್ಲ. ಬದಲಿಗೆ, ತಮ್ಮ ಧರ್ಮ, ದೇವರ ಸಂದೇಶವನ್ನು ಆತನಿಗೆ ತಲುಪಿಸಿ ಆತನನ್ನು ಪರಿವರ್ತಿಸುವುದೇ ನಿಜವಾದ ಧಾರ್ಮಿಕನ ಲಕ್ಷಣ. ರಾಮನ ಬಗ್ಗೆೆ ಭಗವಾನ್ ಅವರು ಆಡಿರುವ ಮಾತುಗಳ ಕುರಿತಂತೆ ಹಲವು ಪ್ರಗತಿ ಪರರಲ್ಲೂ ಆಕ್ಷೇಪವಿದೆ. ಇನ್ನೊಬ್ಬರ ವೈಯಕ್ತಿಕ ನಂಬಿಕೆಗಳನ್ನು ಚುಚ್ಚಿ ನೋಯಿಸುವುದರ ಬಗ್ಗೆ ಹಲವರು ತಮ್ಮ ಭಿನ್ನಮತವನ್ನು ವ್ಯಕ್ತಪಡಿಸಿದ್ದಾರೆ. ಭಗವಾನ್ ಅವರ ಮಾತುಗಳಲ್ಲಿ ಆಕ್ಷೇಪಾರ್ಹವಾದುದೇ ಇರಬಹುದು. ಸ್ವಾಮೀಜಿಗಳಾದವರು ಆಕ್ಷೇಪಾರ್ಹ ಸಂಗತಿಗಳನ್ನು ಎತ್ತಿ ತೋರಿಸಿ, ಜನರ ಅನುಮಾನಗಳನ್ನು ನಿವಾರಿಸಬೇಕು. ತಮ್ಮ ಭಿನ್ನಮತೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಮರ್ಥಿಸಲು ಹೊರಡುವ ಧಾರ್ಮಿಕ ಮುಖಂಡರು ಪರೋಕ್ಷವಾಗಿ ಭಿನ್ನಮತೀಯರ ಮಾತುಗಳಿಗೆ ಸಮರ್ಥನೆಯಾಗುತ್ತಾರೆ. ನ್ಯಾಯಾಲಯವನ್ನೇ ತೆಗೆದುಕೊಳ್ಳೋಣ. ಇಲ್ಲಿ ಸತ್ಯವಂತರಿಗೆ ನ್ಯಾಯ ಸಿಗುತ್ತದೆ ಎನ್ನುವುದರ ಬಗ್ಗೆ ಯಾವ ಭರವಸೆಯೂ ಇಲ್ಲ. ಸಾಕ್ಷಗಳ ಆಧಾರದಲ್ಲಿ ನ್ಯಾಯವನ್ನು ನೀಡಲಾಗುತ್ತದೆ. ಸಾಕ್ಷಗಳ ಕೊರತೆಯಿದ್ದರೆ ಆರೋಪಿಗಳನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಅದೇ ಸಂದರ್ಭದಲ್ಲಿ ನ್ಯಾಯ ಸಿಗಬೇಕಾದರೆ ಅತ್ಯುತ್ತಮ ನ್ಯಾಯವಾದಿಯನ್ನು ಹೊಂದುವುದು ಅನಿವಾರ್ಯ ಎನ್ನುವ ಅಘೋಷಿತ ನಿಯಮವೂ ನ್ಯಾಯಾಲಯದೊಳಗಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇರುವ ಸಂತ್ರಸ್ತ ವ್ಯಕ್ತಿಯೊಬ್ಬ ತನ್ನ ಎದುರಾಳಿಯ ನ್ಯಾಯವಾದಿಯ ಮುಖಕ್ಕೆ ಮಸಿ ಎರಚಿದರೆ ನ್ಯಾಯವ್ಯವಸ್ಥೆಯ ಸ್ಥಿತಿಯೇನಾಗಬೇಕು? ಶೇಕಡ 75ರಷ್ಟು ನ್ಯಾಯವಾದಿಗಳು ಸಂತ್ರಸ್ತರಿಂದ ಮಸಿ ಎರಚಿಸಿಕೊಂಡು ಓಡಾಡಬೇಕಾಗುತ್ತದೆ. ಮಸಿ ಎರಚುವುದರಿಂದ ನ್ಯಾಯವನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಮೊದಲು ನ್ಯಾಯ ವ್ಯವಸ್ಥೆ ಭಗವಾನರಿಗೆ ಮಸಿ ಎರಚಿದ ನ್ಯಾಯವಾದಿಗೆ ಮನವರಿಕೆ ಮಾಡಬೇಕಾಗಿದೆ. ಆಕೆಯನ್ನು ನ್ಯಾಯಾಲಯದಿಂದ ಹೊರ ಹಾಕಬೇಕು ಮಾತ್ರವಲ್ಲ, ನ್ಯಾಯವಾದಿಯಾಗುವ ಅರ್ಹತೆಯನ್ನು ಆಕೆಯಿಂದ ಕಿತ್ತುಕೊಳ್ಳಬೇಕು. ತನ್ನ ಮುಖಕ್ಕೆ ಎರಚಲ್ಪಟ್ಟ ಮಸಿಯನ್ನು ಒರೆಸಿಕೊಳ್ಳುವುದಕ್ಕೆ ನ್ಯಾಯವ್ಯವಸ್ಥೆಯ ಮುಂದಿರುವುದು ಇದೊಂದೇ ದಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News