133 ವರ್ಷಗಳ ಹಳೆಯ ವಿಶಿಷ್ಟ ದಾಖಲೆ ಮುರಿದ ಅಶ್ವಿನ್

Update: 2021-02-08 11:46 GMT

ಚೆನ್ನೈ: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ನಾಲ್ಕನೇ ದಿನವಾದ ಸೋಮವಾರ ಭಾರತವು ಇಂಗ್ಲೆಂಡ್ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದ್ದು, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶಿಷ್ಟ ದಾಖಲೆಯೊಂದನ್ನು  ಮುರಿದು ಎಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾರೆ.

ಭಾರತವು ಇಂಗ್ಲೆಂಡ್ ನ ಮೊದಲ ಇನಿಂಗ್ಸ್ 578 ರನ್ ಗೆ ಉತ್ತರವಾಗಿ ವಾಷಿಂಗ್ಟನ್ ಸುಂದರ್ (ಔಟಾಗದೆ 85)ಏಕಾಂಗಿ ಹೋರಾಟದ ಹೊರತಾಗಿಯೂ ಮೊದಲ ಇನಿಂಗ್ಸ್ ನಲ್ಲಿ 337 ರನ್ ಗೆ ಆಲೌಟಾಯಿತು.

ಅಶ್ವಿನ್ ಇಂಗ್ಲೆಂಡ್ ನ ಎರಡನೇ ಇನಿಂಗ್ಸ್ ನ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ರೋರಿ ಬರ್ನ್ಸ್ ವಿಕೆಟನ್ನು ಉರುಳಿಸುವುದರೊಂದಿಗೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದಲ್ಲದೆ ಈ ಮೂಲಕ 133 ವರ್ಷಗಳ ಬಳಿಕ ಇನಿಂಗ್ಸ್ ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಮೊದಲ ಸ್ಪಿನ್ನರ್ ಎಂಬ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು.

34ರ ಹರೆಯದ ಅಶ್ವಿನ್ ಅವರ ಈ ಸಾಧನೆಗಿಂತ ಮೊದಲು 1907ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಬೆರ್ಟ್ ವೊಗ್ಲೆರ್ ಈ ಸಾಧನೆ ಮಾಡಿದ್ದರು.  ಲಂಡನ್ ನಲ್ಲಿ ನಡೆದಿದ್ದ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಟಾಮ್ ಹೇವರ್ಡ್ ವಿಕೆಟ್ ಪಡೆದು ಈ  ಮೈಲುಗಲ್ಲು ತಲುಪಿದ್ದರು.

 1888ರಲ್ಲಿ ಇಂಗ್ಲೆಂಡ್ ನ ಬಾಬ್ಬಿ ಪೀಲ್ ಇನಿಂಗ್ಸ್ ನ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮೊತ್ತ ಮೊದಲ ಸ್ಪಿನ್ನರ್ ಆಗಿದ್ದಾರೆ. ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆದಿದ್ದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ನ ಮೊದಲ ಎಸೆತದಲ್ಲಿ ಅಲೆಕ್ ಬ್ಯಾನರ್ ಮನ್ ರನ್ನು ಔಟ್ ಮಾಡಿದ್ದ ಪೀಲ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News