ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತಾಪಿಗಳ ಬದುಕು ಕಷ್ಟಕರ: ಜೆಡಿಎಸ್ ಮುಖಂಡ ವೈಎಸ್‍ವಿ ದತ್ತಾ

Update: 2021-02-08 12:42 GMT

ಬೆಂಗಳೂರು, ಫೆ. 8: ರಾಜ್ಯದಲ್ಲಿ ಬಿಜೆಪಿ ಸರಕಾರ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತಾಪಿ ಜನರ ಬದಕು ತುಂಬಾ ಕಷ್ಟಕರವಾಗಲಿದೆ. ಕಾಯ್ದೆ ಜಾರಿಗೆ ಮೊದಲು ರಾಜ್ಯ ಸರಕಾರ ಸಾಧಕ-ಬಾಧಕಗಳನ್ನು ಆಲೋಚಿಸಬೇಕು ಎಂದು ಜೆಡಿಎಸ್ ಮುಖಂಡ ವೈಎಸ್‍ವಿ ದತ್ತಾ ಸಲಹೆ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ನಿಲುವು ಸ್ಪಷ್ಟವಾಗಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಾವು ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಿದ್ದೇವೆ ಅಷ್ಟೇ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ನಮ್ಮ ಬೆಂಬಲವಿಲ್ಲ. ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ ಎಂದು ಕೋರಿದರು.

ಸರ್ವೆಯರ್‍ಗಳ ಸ್ಥಿತಿ ಅತಂತ್ರ: ರಾಜ್ಯದಲ್ಲಿ ಪರವಾನಗಿ ಹೊಂದಿರುವ ಸರ್ವೇಯರ್‍ಗಳ ಸ್ಥಿತಿ ಅತಂತ್ರವಾಗಿದೆ. ಈ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದು ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಂ ಹಾಗೂ ಕಂದಾಯ ಸಚಿವ ಅಶೋಕ್ ಅವರನ್ನ ಭೇಟಿ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಸರ್ವೆಯರ್‍ಗಳ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ನಾಳೆ(ಫೆ.9) ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಯಲಿದೆ. ಫೆ.16ರವರೆಗೆ ಸರಕಾರಕ್ಕೆ ಗಡುವು ನೀಡುತ್ತಿದ್ದು, ಸರ್ವೇಯರ್‍ಗಳ ಸಮಸ್ಯೆ ಪರಿಹಾರಕ್ಕೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹೊರಟ್ಟಿ ಬೆಂಬಲಿಸಬೇಕು: ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದು, ಎಲ್ಲ ಪಕ್ಷಗಳು ಅವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕೋರಿದ ಅವರು, ಮೂರೂ ಪಕ್ಷಗಳು ನಮ್ಮ ಅಭ್ಯರ್ಥಿ ಎಂದೇ ಭಾವಿಸಿ ಮತ ಹಾಕಬೇಕು. ಇಲ್ಲಿ ಯಾರೂ ಪಕ್ಷ ರಾಜಕಾರಣ ಮಾಡಬಾರದು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News