ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕೇಂದ್ರ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ: ಸಚಿವ ಈಶ್ವರಪ್ಪ

Update: 2021-02-08 17:52 GMT

ಶಿವಮೊಗ್ಗ: ಪದೇ ಪದೇ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕೇಂದ್ರ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಶಾಸಕ ಯತ್ನಾಳ್ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಮತ್ತೆ ಸಿಎಂ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಸಿಎಂ ಮಾತನಾಡುವುದು ಬೇಡ ಎಂದು ಹೇಳಿದರೂ ಕೇಳುತ್ತಿಲ್ಲ. ಇದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಗಮನಕ್ಕೂ ಬಂದಿದೆ. ಅವರು ಕೇಂದ್ರ ಶಿಸ್ತು ಸಮಿತಿಯ ಗಮನಕ್ಕೆ ಈ ವಿಷಯ ತಂದಿದ್ದಾರೆ. ಎಂಎಲ್ ಎ, ಎಂಎಲ್ ಸಿ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಬಿಜೆಪಿ ರಾಜ್ಯ ಸಮಿತಿಗೆ ಇಲ್ಲ ಎಂದು ತಿಳಿಸಿದರು.

ಯತ್ನಾಳ್ ಹೇಳಿಕೆಗಳ ಕುರಿತು ಕೇಂದ್ರ ಶಿಸ್ತು ಸಮಿತಿಗೆ ವರದಿ ನೀಡಿದಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದು, ಕೇಂದ್ರ ಸಮಿತಿ ಕ್ರಮಕೈಗೊಳ್ಳಲಿದೆ ಎಂದರು.

ಎಸ್.ಟಿ. ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಕುರುಬರ ಸಮಾವೇಶ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದ ಅವರು, ಮಾಜಿ ಸಿ.ಎಂ.ಸಿದ್ದರಾಮಯ್ಯ ಕುರುಬರ ಮೀಸಲಾತಿ ಹೋರಾಟಕ್ಕೆ ಬಂದರೆ ಸಂತೋಷ ಬರದಿದ್ದರೆ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಟ್ಟಿಗೆ ಇರಬೇಕೆಂದು ಸಮುದಾಯದ ಜನರು ಆಪೇಕ್ಷೆ ಪಟ್ಟಿದ್ದರು. ಸ್ವಾಮೀಜಿಗಳು ಅವರ ನಿವಾಸಕ್ಕೆ ತೆರಳಿ ಕರೆದಿದ್ದರು. ನಾನು ಕೂಡ ಕರೆ ಮಾಡಿದ್ದೆ. ಮೊದಲಿಗೆ ಯಾರೂ ನನ್ನನ್ನು ಕರೆದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಬಳಿಕ ಪಾದಯಾತ್ರೆಗೆ ಆರೆಸ್ಸೆಸ್ ಹಣಕೊಟ್ಟಿದೆ ಎಂದು ಆರೋಪ ಮಾಡಿದ್ದರು. ಹೋರಾಟಕ್ಕೆ ಆರೆಸ್ಸೆಸ್ ಹಣಕೊಟ್ಟಿಲ್ಲ ಸಮುದಾಯದ ಜನರೇ ಹಣ ನೀಡಿ ಸಮಾವೇಶ ಮಾಡಿದ್ದಾರೆ ಎಂದು ತಿಳಿಸಿದರು.

ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಬರಬೇಕೆನ್ನುವುದು ಸಮುದಾಯದ ಜನರ ಅಪೇಕ್ಷೆಯಾಗಿತ್ತು. ಸಮುದಾಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಸಿದ್ದರಾಮಯ್ಯನವರನ್ನು ಬಿಟ್ಟು ಎಲ್ಲರು ಪಕ್ಷಾತೀತವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಕುರುಬ ಸಮುದಾಯದ ಇತಿಹಾಸದಲ್ಲಿಯೇ ದೊಡ್ಡ ಕಾರ್ಯಕ್ರಮ ನಡೆದಿದೆ. ನಿರಂಜನಾನಂದ ಶ್ರೀಗಳು, ಈಶ್ವರಾನಂದ ಶ್ರೀ ಗಳು ಸೇರಿದಂತೆ ಸಮುದಾಯದ ಗುರುಗಳು, ಹಿರಿಯರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ನಿನ್ನೆ ವ್ಯವಸ್ಥಿತವಾಗಿ ಶಿಸ್ತಿನಿಂದ ಸಮಾವೇಶ ನಡೆಸಲಾಗಿದೆ. ಸ್ವಾತಂತ್ರ್ಯಕ್ಕಿಂತ ಮೊದಲು ಇದ್ದಂತೆ ಮತ್ತು ಈಗ ೪ ಜಿಲ್ಲೆಗಳಲ್ಲಿ ಇರುವಂತೆ ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಬೇಕೆನ್ನುವುದು ಒತ್ತಾಯವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಕುರುಬ ಸಮುದಾಯಕ್ಕೆ ಅನುದಾನ ನೀಡಿದ್ದಾರೆ. ಕನಕ ಜಯಂತಿಗೆ ರಜೆ ನೀಡಿದ್ದಾರೆ. ಇದರೊಂದಿಗೆ ಎಸ್.ಟಿ.ಮೀಸಲಾತಿಯನ್ನು ನೀಡಬೇಕೆಂದು ಸ್ವಾಮೀಜಿಗಳು ಸಮಾವೇಶದಲ್ಲಿ ಒತ್ತಾಯಿಸಿದ್ದು, ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿ.ಎಂ.ಜೊತೆಗೆ ಮೀಸಲಾತಿ ಹೋರಾಟ ಸಮಿತಿ ಚರ್ಚಿಸಲಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದ್ದು, ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.

ಕುರುಬರ ಸಮಾವೇಶಕ್ಕೆ ನಾವು ಹಣ ಕೊಟ್ಟು ಜನರನ್ನು ಕರೆತಂದಿಲ್ಲ. ವಾಹನಗಳಿಗೂ ಹಣ ಕೊಟ್ಟಿಲ್ಲ. ಜನರೇ ತಮ್ಮ ಹಣ ಕೊಟ್ಟು ಸಮಾವೇಶಕ್ಕೆ ಬಂದಿದ್ದಾರೆ. ಅನೇಕರು ಊಟ ಕೊಟ್ಟಿದ್ದಾರೆ. ಜನರೇ ಸೇರಿ ಕುರುಬರ ಸುನಾಮಿ ಸಮಾವೇಶ ಮಾಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News