ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್‍ನಲ್ಲಿ ಅನುದಾನ: ಸಿಎಂಗೆ ಅಬ್ದುಲ್ ಅಝೀಮ್ ಮನವಿ

Update: 2021-02-08 16:42 GMT

ಬೆಂಗಳೂರು, ಫೆ.8: ಮುಂಬರುವ ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅದರಲ್ಲೂ ಪ್ರಮುಖವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2017-18ರ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2145.13 ಕೋಟಿ ರೂ. ಹಂಚಿಕೆಯಾಗಿತ್ತು. ನಂತರ 2018-19ರಲ್ಲಿ 2142.35 ಕೋಟಿ ರೂ., 2019-20ರಲ್ಲಿ 1666.13 ಕೋಟಿ ರೂ. ಹಾಗೂ 2020-21ರಲ್ಲಿ 653.54 ಕೋಟಿ ರೂ.ಗಳಿಗೆ ಕಡಿತವಾಗಿದೆ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಈ ಪೈಕಿ 2017-18ರಲ್ಲಿ 330 ಕೋಟಿ ರೂ.ಗಳಷ್ಟಿದ್ದ ಅನುದಾನ ಹಂಚಿಕೆ, 2018-19ರಲ್ಲಿ 295.80 ಕೋಟಿ ರೂ., 2019-20ರಲ್ಲಿ 149.80 ಕೋಟಿ ರೂ. ಹಾಗೂ 2020-21ರಲ್ಲಿ 71.54 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾದ ಅನುದಾನದಲ್ಲಿ ಕಡಿತ ಮಾಡಿರುವುದರಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ನೆರವಿನ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯುಂಟಾಗಿದೆ ಎಂದು ಅಬ್ದುಲ್ ಅಝೀಮ್ ಹೇಳಿದರು.

ಇದಲ್ಲದೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಸಮುದಾಯಭವನ, ಶಾದಿಮಹಲ್‍ಗಳ ನಿರ್ಮಾಣ, ಕೌಶಲ್ಯ ಅಭಿವೃದ್ಧಿ ಯೋಜನೆ, ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ(ಶೇ.60ರಷ್ಟು  ಕಡಿತ), ವಿದ್ಯಾಶ್ರೀ ಯೋಜನೆ, ಟ್ಯೂಷನ್ ಶುಲ್ಕ, ಬಿದಾಯಿ ಯೋಜನೆ, ಖಾಸಗಿ ಸಂಸ್ಥೆಗಳಿಗೆ ಅನುದಾನ ಹಾಗೂ ಮುಖ್ಯಮಂತ್ರಿಯ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿ ಯೋಜನೆಗೆ ಅನುದಾನ ಕಲ್ಪಿಸಲಾಗಿಲ್ಲ ಎಂದು ಅವರು ತಿಳಿಸಿದರು.

ಇದಲ್ಲದೆ, ಪಿಎಚ್‍ಡಿ ಮತ್ತು ಎಂ.ಫಿಲ್ ಮಾಡುವವರಿಗೆ ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು 25 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿತ್ತು. ಆದರೆ, ಈಗ ಈ ಆರ್ಥಿಕ ನೆರವನ್ನು ಒಂದು ಲಕ್ಷ ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಇದರಿಂದ, ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಬ್ದುಲ್ ಅಝೀಮ್ ಹೇಳಿದರು.

2020-21ನೆ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿಯೂ ಭಾರಿ ಪ್ರಮಾಣದಲ್ಲಿ ಕಡಿತವಾಗಿದೆ. ಆದುದರಿಂದ, ಮುಂದಿನ ಬಜೆಟ್‍ನಲ್ಲಿ ಅಗತ್ಯವಿರುವಂತೆ ಹೆಚ್ಚುವರಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಇಂದು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿ ಮನವಿ ಪತ್ರ ನೀಡಲಾಗಿದೆ. ನಮ್ಮ ಎಲ್ಲ ಬೇಡಿಕೆಗಳನ್ನು ಸಮಾಧಾನದಿಂದ ಆಲಿಸಿದ ಮುಖ್ಯಮಂತ್ರಿ, ಬಜೆಟ್‍ನಲ್ಲಿ ಅಗತ್ಯ ಅನುದಾನ ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಹಾಗೂ ಅಲ್ಪಸಂಖ್ಯಾತರ ಆಯೋಗದ ಪ್ರಭಾರಿ ಕಾರ್ಯದರ್ಶಿ ಮಹಬೂಬ್ ಸಾಬ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News