ಪುತ್ರನ ಮೃತದೇಹ ಕೋರಿದ ಕಾಶ್ಮೀರದ ವ್ಯಕ್ತಿಯ ವಿರುದ್ಧ ಯುಎಪಿಎ ದಾಖಲಿಸಿದ ಪೊಲೀಸರು

Update: 2021-02-08 17:28 GMT

ಶ್ರೀನಗರ, ಫೆ. 8: ಸರಕಾರಿ ಪಡೆಗಳಿಂದ ಹತ್ಯೆಯಾದ ತನ್ನ ಹದಿಹರೆಯದ ಪುತ್ರನ ಮೃತದೇಹ ನೀಡುವಂತೆ ಕೋರಿದ ಕಾಶ್ಮೀರಿ ವ್ಯಕ್ತಿಯೋರ್ವರ ವಿರುದ್ಧ ಪೊಲೀಸರು ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಮುಫ್ತಾಕ್ ಅಹ್ಮದ್ ಹಾಗೂ ಅವರ ಇಬ್ಬರು ಸಹೋದರರು ಸೇರಿದಂತೆ ಇತರ ಆರು ಮಂದಿಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಕಾರಿ ಪಡೆ ಡಿಸೆಂಬರ್ 30ರಂದು ಅಹ್ಮದ್ ಅವರ 16 ವರ್ಷದ ಪುತ್ರ ಅಥರ್ ಮುಫ್ತಾಕ್ ಹಾಗೂ ಇತರ ಇಬ್ಬರು ಯುವಕರನ್ನು ಹತ್ಯೆಗೈದಿತ್ತು. ಶ್ರೀನಗರದ ಹೊರವಲಯದಲ್ಲಿ ಶರಣಾಗತರಾಗಲು ನಿರಾಕರಿಸಿದ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರು ಕಾಶ್ಮೀರದಲ್ಲಿ ಭಾರತೀಯರ ಆಡಳಿತವನ್ನು ವಿರೋಧಿಸುವ ಭಯೋತ್ಪಾದಕರ ಸಹಚರರು ಎಂದು ಪೊಲೀಸರು ಆರೋಪಿಸಿದ್ದರು. ಯುವಕರ ಮೃತದೇಹಗಳನ್ನು ಅವರ ಪೂರ್ವಜರ ಗ್ರಾಮದಿಂದ 115 ಕಿ.ಮೀ. ದೂರದ ದುರ್ಗಮ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ಆಡಳಿತ ದಫನ ಮಾಡಿತ್ತು. ಯುವಕರ ಮೃತದೇಹಗಳನ್ನು ನೀಡುವಂತೆ ಆಗ್ರಹಿಸಿ ಅವರ ಕುಟುಂಬ ಪ್ರತಿಭಟನೆ ನಡೆಸಿತ್ತು. ಅವರು ಉಗ್ರರಲ್ಲ.

ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿತ್ತು. ಯುವಕರನ್ನು ಹತ್ಯೆಗೈದಿರುವುದು ಹಾಗೂ ದುರ್ಗಮ ಪ್ರದೇಶದಲ್ಲಿ ದಫನ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತನ್ನ ಪುತ್ರನ ಮೃತದೇಹವನ್ನು ನೀಡಿ ಎಂದು ಅಹ್ಮದ್ ಕೋರುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಮಿಡಿದ ಸಾವಿರಾರು ಜನರು ಯುವಕರ ಮೃತದೇಹಗಳನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News