ಸಾಮೂಹಿಕ, ಸರಳ ವಿವಾಹದಿಂದ ಕುಟುಂಬದ ಅಭಿವೃದ್ಧಿ; ಸಚಿವ ಸೋಮಶೇಖರ್

Update: 2021-02-09 09:21 GMT

ಮೈಸೂರು : ಕುಟುಂಬದ ಅಭಿವೃದ್ಧಿಗೆ ಸಾಮೂಹಿಕ ವಿವಾಹದಂತಹ ಹೆಜ್ಜೆ ಅತಿ ಅವಶ್ಯ. ಹೆಚ್ಚಿನವರು ಶಿಕ್ಷಣಕ್ಕಿಂತ ಹೆಚ್ಚಾಗಿ ವಿವಾಹಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಸಾಲದ ಹೊರೆಯಲ್ಲಿ ಸಿಲುಕುತ್ತಿದ್ದಾರೆ. ಆದರೆ, ಶ್ರೀಕ್ಷೇತ್ರ ಸುತ್ತೂರು ಮಠದ ಈ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಸುತ್ತೂರಿನಲ್ಲಿ ಶ್ರೀಮಠದ ವತಿಯಿಂದ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ -95 ಕಾರ್ಯಕ್ರಮದಲ್ಲಿ "ವಚನಕ್ಕೊಂದು ಕಥೆ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಇಂದು ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ. ಸಾಲ ಮಾಡಿ ಮದುವೆ ಮಾಡಿ ಹತ್ತಾರು ವರ್ಷಗಳಾದರೂ ಸಹ ಸಾಲಮುಕ್ತರಾಗದೆ ಪರಿತಪಿಸುತ್ತಿರುತ್ತಾರೆ. ಶ್ರೀಮಠ ಆಯೋಜಿಸುವ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆ ಸಾಲ ಮಾಡುವ ಸಂಭವವೇ ಇರುವುದಿಲ್ಲ ಎಂದು  ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

 ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿಜಯಪುರ ಜ್ಞಾನಯೋಗಾಶ್ರಮದ  ಸಿದ್ದೇಶ್ವರ ಮಹಾಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ಸಿದ್ದಗಂಗಾ ಮಠಾಧ್ಯಕ್ಷ ನಿರಂಜನ ಪ್ರಣವ ಸ್ವರೂಪಿ, ಸಿದ್ದಲಿಂಗ ಮಹಾಸ್ವಾಮಿ,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News