ಸಭಾಪತಿ ಬಸವರಾಜ ಹೊರಟ್ಟಿಗೆ ಪರಿಷತ್ ಸದಸ್ಯರಿಂದ ಅಭಿನಂದನೆ

Update: 2021-02-09 13:15 GMT

ಬೆಂಗಳೂರು, ಫೆ.9: ವಿಧಾನ ಪರಿಷತ್‍ನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಭಿನಂದಿಸಿ ಅವರ ಗುಣಗಾನ ಮಾಡಿದರು.

ಸಭಾಪತಿ ಅವರನ್ನು ಅಭಿನಂದಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಇಂದು ನಿಮಗೆ ಸಭಾಪತಿ ಸ್ಥಾನ ಒದಗಿ ಬಂದಿರುವುದು ಅತ್ಯಂತ ಖುಷಿಯ ಸಂಗತಿ. ನಿಮ್ಮ ಆಯ್ಕೆಯಿಂದ ಮತ್ತಷ್ಟು ಗೌರವ ಘನತೆ ಬಂದಿದೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸತತವಾಗಿ 41 ವರ್ಷಗಳ ಹೋರಾಟದ ಫಲವಾಗಿ ಸಭಾಪತಿ ಹುದ್ದೆ ಸಿಕ್ಕಿದೆ. ಸಾರ್ವಜನಿಕ ಬದುಕಿನಲ್ಲಿ ದಿಟ್ಟ ಹೋರಾಟಗಾರರಾಗಿ ನುಡಿದಂತೆ ನಡೆದಿದ್ದೀರಿ. ನಿಮ್ಮ ಪಕ್ಷ ನಿಷ್ಠೆ, ನಾಯಕರ ಜತೆಗಿನ ವಿಶ್ವಾಸಕ್ಕೆ ಸಭಾಪತಿ ಸ್ಥಾನ ಸಿಕ್ಕಿದೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ನಿಮ್ಮ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ ಇದೆ ಎಂದು ಹೇಳಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಭಾಪತಿ ಆಯ್ಕೆ ಸಂದರ್ಭದಲ್ಲಿ ನಡೆದ ಘಟನೆ ನೋವಿನ ಸಂಗತಿ. ಸಭಾಪತಿ ಚುನಾವಣೆ ಆಯ್ಕೆಯಲ್ಲಿ ಹಿಂದೆಂದೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ನಿಮ್ಮಂತಹ ಹಿರಿಯರಿಗೆ ಅತ್ಯುನ್ನತ ಹುದ್ದೆ ಸಿಕ್ಕಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ಮೊದಲು ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿ ಸ್ಥಾನಗಳು ಒಲಿದು ಬಂದಿವೆ. ಈಗ ಮತ್ತೆ ಅದೇ ಭಾಗದವರಾದ ಬಸವರಾಜ ಹೊರಟ್ಟಿ ಅವರು ಸಭಾಪತಿ ಆಗಿರುವುದು ಖುಷಿ ತಂದಿದೆ ಎಂದು ಹೇಳಿದರು.

ಜೆಡಿಎಸ್‍ನ ಹಿರಿಯ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಭಾಪತಿ ಸ್ಥಾನ ಸಿಗಲಿಲ್ಲ ಎನ್ನುವ ಕೊರಗು ಜೆಡಿಎಸ್‍ನ ಶಾಸಕರಿಗೆ ಇತ್ತು. ಆದರೆ, ಇದೀಗ ಈಡೇರಿದೆ ಎಂದು ಹೇಳಿದರು. ಬಿಜೆಪಿಯ ಪ್ರದೀಪ್ ಶೆಟ್ಟರ್, ಎಸ್.ವಿ.ಸಂಕನೂರ್ ಮತ್ತು ಜೆಡಿಎಸ್‍ನ ರಮೇಶ್ ಗೌಡ, ಮತ್ತಿತರ ಸದಸ್ಯರು, ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News