ಯಾವ ಪಕ್ಷದಲ್ಲಿದ್ದರೂ ಸಿದ್ದರಾಮಯ್ಯನವರೇ ನಮ್ಮ ನಾಯಕರು: ಸಚಿವ ಸೋಮಶೇಖರ್

Update: 2021-02-09 14:24 GMT

ಮೈಸೂರು, ಫೆ.9: ನಾನು ಯಾವ ಪಕ್ಷದಲ್ಲಿದ್ದರೂ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸುತ್ತೂರು ಮಠ ಆಯೋಜಿಸಿದ್ದ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡ ಸಚಿವ ಎಸ್.ಟಿ.ಸೋಮಶೇಖರ್ ಆರಂಭದಲ್ಲಿ 'ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ನನ್ನ ಮಾರ್ಗದರ್ಶಕರಾದ ಸಿದ್ದರಾಮಯ್ಯನವರು' ಎಂದು ಭಾಷಣ ಆರಂಭಿಸಿದರು. 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರಬಹುದು. ಆದರೆ ನಮ್ಮ ನಾಯಕರು ಸಿದ್ದರಾಮಯ್ಯ. ನಾನು ಎಲ್ಲೇ ಇದ್ದರೂ ಅವರೇ ನಮ್ಮ ನಾಯಕರು ಎಂದರು.

ನಾನು ಕಾಂಗ್ರೆಸ್ ಬಿಟ್ಟ ನಂತರ ಇದೇ ಮೊದಲ ಬಾರಿಗೆ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಸಂತೋಷವನ್ನುಂಟು ಮಾಡಿದೆ. ಸರ್ ನಾನು ಹೆಚ್ಚು ಮಾತನಾಡುವುದಿಲ್ಲ, ನೀವೆ ಮಾತನಾಡಿ ಎಂದೆ. ಅದಕ್ಕೆ ಅವರು ಕಿಲಾಡಿ ಕಣಯ್ಯ ನೀನು ಎಂದರು ಎಂದು ತುಸು ನಕ್ಕರು. ಜಿಲ್ಲೆಗೆ ಸಂಬಂಧಿಸಿದಂತೆ ಅವರಿಗೆ ಬಂದ ದೂರನ್ನು ನನ್ನ ಗಮನಕ್ಕೆ ತಂದಿದ್ದಾರೆ. ಕಾನೂನಾತ್ಮಕವಾಗಿ ಇದ್ದರೆ ಇದನ್ನು ಬಗೆಹರಿಸು ಎಂದು ಹೇಳಿದ್ದಾರೆ. ಅದಕ್ಕೆ ನಾನು ಆಗಲಿ ಸರ್ ಎಂದೆ ಎಂದು ಹೇಳಿದರು.  

ರಾಜೇಂದ್ರ ಸ್ವಾಮಿ ಜೊತೆಗಿನ ಒಡನಾಟ ಹಂಚಿಕೊಂಡ ಸಿದ್ದರಾಮಯ್ಯ

ಸುತ್ತೂರು ಶ್ರೀಮಠದ ಅಂದಿನ ಶ್ರೀರಾಜೇಂದ್ರ ಸ್ವಾಮಿಗಳು ನನಗೆ 5 ರೂ. ಕೊಟ್ಟಿದ್ದರು. ಅದರಲ್ಲಿ ಒಂದು ಕುರಿ ತೆಗೆದುಕೊಂಡು ಸಾಕಿ, ಮಾರಿ ಹೆಚ್ಚು ಹಣಗಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶ್ರೀ ರಾಜೇಂದ್ರ ಸ್ವಾಮೀಗಳ ಒಡನಾಟವನ್ನು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, 'ರಾಜೇಂದ್ರ ಮಹಾಸ್ವಾಮಿಗಳು ಜಾತ್ಯಾತೀತವಾದಿಗಳು. ಹಾಗಾಗಿಯೇ ಅವರು ಎಲ್ಲರಿಗೂ ಶಿಕ್ಷಣವನ್ನು ನೀಡಿದರು. ನಾನು ಸಣ್ಣ ವಯಸ್ಸಿವನಾಗಿದ್ದಾಗ ಮೊದಲ ಬಾರಿಗೆ ಸ್ವಾಮೀಜಿಯನ್ನು ಕಂಡಿದ್ದೆ ಎಂದರು.

ನಾನು ವೀರಗಾಸೆ ಕುಣಿತದಲ್ಲಿ ನಂ.1. ಹಾಗಾಗಿ ನಮ್ಮ ಊರಿನವರು ಸುತ್ತೂರು ಪಕ್ಕದಲ್ಲಿರುವ ಬೆಳಗುಂದಕ್ಕೆ ವೀರಗಾಸೆ ಕುಣಿತಕ್ಕ ಕರೆದುಕೊಂಡು ಬಂದಿದ್ದರು. ಪುನಃ ಊರಿಗೆ ತೆರಳುವ ಸಂದರ್ಭದಲ್ಲಿ ಸುತ್ತೂರು ಮಠಕ್ಕೆ ಹೋಗಿ ಸ್ವಾಮೀಜಿಗಳ ದರ್ಶನ ಪಡೆದು ಹೋಗಲು ತೀರ್ಮಾನಿಸಿದರು. ಆಗ ರಾಜೇಂದ್ರ ಸ್ವಾಮಿಗಳನ್ನು ಭೇಟಿ ಮಾಡಿದ ನಾವು ವೀರಗಾಸೆ ಕುಣಿತ ಮಾಡಿದೆವು. ಆಗ ಅವರು ನಾನು ಕುಣಿಯುವುದನ್ನು ನೋಡಿ ನನಗೆ 5 ರೂ. ಕೊಟ್ಟರು. ಆ ದುಡ್ಡನ್ನು ತೆಗೆದುಕೊಂಡು ಹೋಗಿ ಒಂದು ಕುರಿ ಖರೀದಿಸಿ ಸಾಕಿದೆ. ನಂತರ ಅದರಲ್ಲಿ ಹೆಚ್ಚಿನ ಹಣವನ್ನು ಗಳಿಸಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News