ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಸಭಾಪತಿಯಾಗಿದ್ದೇನೆ: ಬಸವರಾಜ ಹೊರಟ್ಟಿ

Update: 2021-02-09 14:28 GMT

ಬೆಂಗಳೂರು, ಫೆ.9: ನಾಲ್ಕು ದಶಕದಿಂದಲೂ ಮೇಲ್ಮನೆಯ ಸದಸ್ಯನಾಗಿದ್ದೇನೆ. ಈಗ ನಾನು  ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಸಭಾಪತಿಯಾಗಿ ಆಯ್ಕೆಯಾಗಿದ್ದೇನೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸೋಮವಾರ ಪರಿಷತ್‍ನಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪರಿಷತ್‍ನಲ್ಲಿ ಇರುವ 75 ಸದಸ್ಯರೂ ನನ್ನ ಮೇಲೆ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ. ಏಳು ಬಾರಿ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿ ಬಂದಿದ್ದೇನೆ. ಜೆಡಿಎಸ್ ಸಚಿವ ಸಂಪುಟದಲ್ಲಿ ಮಂತ್ರಿಯೂ ಆಗಿ ಉತ್ತಮ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದರು.

ದೇವರಾಜ ಅರಸು, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಸೇರಿದಂತೆ ಒಟ್ಟು 15 ಮುಖ್ಯಮಂತ್ರಿಗಳನ್ನು ನಾನು ನೋಡಿ ಬೆಳೆದಿದ್ದೇನೆ ಹಾಗೂ ಸಾಕಷ್ಟು ತಿಳಿದುಕೊಂಡಿದ್ದೇನೆ. ಪೀಠಕ್ಕೆ ಗೌರವ ತಂದಿರುವ ಹಲವು ಸಭಾಪತಿಗಳನ್ನು ಕಂಡಿದ್ದೇನೆ. ಸಾಹಿತಿಗಳಾದ ಎಲ್.ಹನುಮಂತಯ್ಯ, ದಲಿತ ಕವಿ ಸಿದ್ದಲಿಂಗಯ್ಯ, ಚಂದ್ರಶೇಖರ ಕಂಬಾರ, ಸಿನಿಮಾ ತಾರೆಯರಾದ ಶ್ರೀನಾಥ್, ತಾರಾ, ಜಗ್ಗೇಶ್, ಪತ್ರಕರ್ತರಾದ ಖಾದ್ರಿ ಶಾಮಣ್ಣ ಅವರು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಈ ಮೇಲ್ಮನೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

35 ವರ್ಷದಿಂದ ಅರಸು ರೂಂನಲ್ಲಿ

‘ಪರಿಷತ್ ಸದಸ್ಯನಾಗಿ ಆಯ್ಕೆ ಬಂದಾಗಿನಿಂದಲೂ ನಾನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಬಳಕೆ ಮಾಡಿ ಬಿಟ್ಟಿದ್ದ ಶಾಸಕರ ಭವನದ 435 ಸಂಖ್ಯೆಯ ರೂಂನಲ್ಲಿಯೇ 35 ವರ್ಷದಿಂದ ಇದ್ದೇನೆ. ಅಂಥವರ ಪ್ರೋತ್ಸಾಹದಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.’

-ಬಸವರಾಜ ಹೊರಟ್ಟಿ, ಪರಿಷತ್ ನೂತನ ಸಭಾಪತಿ

ನನಗೆ ಲೇ ಅಂದಿದ್ದ ಎಚ್.ವಿಶ್ವನಾಥ್

‘ಒಂದು ಬಾರಿ ನಾನು ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಪರಿಷತ್‍ನಲ್ಲಿ ಶಿಕ್ಷಕರಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ ನನಗೆ ಕುಳಿತುಕೊಳ್ಳ ಲೇ ಎಂದಿದ್ದರು. ಆಗ ಸಭಾಪತಿಗಳು ಸದಸ್ಯರಿಗೆ ಲೇ ಎನ್ನುತ್ತೀರಲ್ಲ ಎಂದು ಪ್ರಶ್ನಿಸಿದ್ದರು. ಆಗ ವಿಶ್ವನಾಥ್ ಅವರು, ನನ್ನ ಸ್ನೇಹಿತರು ಹೀಗಾಗಿ ಅಂದಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.’

-ಬಸವರಾಜ ಹೊರಟ್ಟಿ, ಪರಿಷತ್ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News