ಕ್ಷಿಪಣಿ ಅಭಿವೃದ್ಧಿಯಲ್ಲಿ ಇರಾನ್-ಉ. ಕೊರಿಯ ಸಹಕಾರ ಪುನರಾರಂಭ: ವಿಶ್ವಸಂಸ್ಥೆ ವರದಿ

Update: 2021-02-09 15:06 GMT

 ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 9: 2020ರಲ್ಲಿ ಉತ್ತರ ಕೊರಿಯ ಮತ್ತು ಇರಾನ್‌ಗಳು ದೀರ್ಘವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿಯಲ್ಲಿ ತಮ್ಮ ನಡುವಿನ ಸಹಕಾರವನ್ನು ಪುನರಾರಂಭಿಸಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ಅದೂ ಅಲ್ಲದೆ, ವಿಶ್ವಸಂಸ್ಥೆಯ ವಿವಿಧ ಪರಮಾಣು ಸಂಬಂಧಿ ನಿರ್ಣಯಗಳನ್ನು ಉಲ್ಲಂಘಿಸುವುದನ್ನು ಉತ್ತರ ಕೊರಿಯ ಮುಂದುವರಿಸಿದೆ ಎಂಬುದಾಗಿಯೂ ವರದಿ ಹೇಳಿದೆ.

ವಿಶ್ವಸಂಸ್ಥೆಯ ಪರಿಣತರ ಸ್ವತಂತ್ರ ಮಂಡಳಿಯೊಂದು ಸಿದ್ಧಪಡಿಸಿದ ವಾರ್ಷಿಕ ವರದಿಯನ್ನು ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಲಾಗಿದೆ.

ಉತ್ತರ ಕೊರಿಯದೊಂದಿಗೆ ಯಾವುದೇ ಕ್ಷಿಪಣಿ ಸಹಕಾರವಿಲ್ಲ ಎಂಬುದಾಗಿ ಇರಾನ್ ಹೇಳಿದೆ ಎಂದು ವರದಿ ತಿಳಿಸಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಆದರೆ, ಸದಸ್ಯ ದೇಶವೊಂದರ ಪ್ರಕಾರ, ಉತ್ತರ ಕೊರಿಯ ಮತ್ತು ಇರಾನ್‌ಗಳು ದೀರ್ಘ ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿ ಯೋಜನೆಗಳಲ್ಲಿನ ಸಹಕಾರವನ್ನು ಪುನರಾರಂಭಿಸಿವೆ’’ ಎಂದು ವರದಿ ತಿಳಿಸಿದೆ.

 ಉತ್ತರ ಕೊರಿಯವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದಿದೆ ಹಾಗೂ ಅಭಿವೃದ್ಧಿಪಡಿಸಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News