ಆರೆಸ್ಸೆಸ್- ಬಿಜೆಪಿಯವರು ನಮ್ಮಷ್ಟು ಧೈರ್ಯಶಾಲಿಗಳಲ್ಲ, ಅವರು ಹೇಡಿಗಳು: ಚಂದ್ರಶೇಖರ್ ಆಝಾದ್

Update: 2021-02-09 15:21 GMT

ಬೆಂಗಳೂರು, ಫೆ.9: ಪತ್ರಕರ್ತ ಹಾಗೂ ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ಅವರ ನ್ಯೂಸ್14 ಕಚೇರಿ ಮೇಲೆ ನಡೆದ ದಾಳಿ ಹಾಗೂ ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿಲ್ಲವೆಂದು ಪೊಲೀಸ್ ಹಾಗೂ ರಾಜ್ಯ ಸರಕಾರದ ವಿರುದ್ಧ ಭೀಮ್ ಆರ್ಮಿ ಕರ್ನಾಟಕದ ವತಿಯಿಂದ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಕಚೇರಿ ಬಳಿ ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ರಾವಣ್ ಆಝಾದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಆಝಾದ್ ಅವರು, ಆರೆಸ್ಸೆಸ್ ಮತ್ತು ಬಿಜೆಪಿಯವರು ನಮ್ಮಷ್ಟು ಧೈರ್ಯಶಾಲಿಗಳಲ್ಲ, ಅವರು ಹೇಡಿಗಳು. ನಮ್ಮನ್ನು ನೇರವಾಗಿ ಎದುರಿಸುವ ಶಕ್ತಿಯಿಲ್ಲದೆ, ಕೇವಲ ಷಡ್ಯಂತ್ರಗಳನ್ನು ಮಾಡಿ, ಹತ್ಯೆಯನ್ನು ಮಾಡುತ್ತಾರೆ. ಸಂವಿಧಾನದ ಶಕ್ತಿಯಿಂದ ನಾವು ಅವರನ್ನು ಎದುರಿಸಲು ಸಿದ್ಧವಿದ್ದೇವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಪೊಲೀಸ್‌ನವರದ್ದು. ಆದರೆ, ಬಿಜೆಪಿಯವರು ಅಧಿಕಾರ ದುರುಪಯೋಗಪಡಿಸಿಕೊಂಡು ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದಾಳಿ ನಡೆಸಿದ ದುಷ್ಕರ್ಮಿಗಳನ್ನು ಎಂಟು ದಿನಗಳ ಒಳಗಾಗಿ ಬಂಧಿಸಿ, ಭಾಸ್ಕರ್ ಪ್ರಸಾದ್ ಹಾಗೂ ಅವರ ಕುಟುಂಬಕ್ಕೆ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು. ನಾವು ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಭಾಸ್ಕರ್ ಪ್ರಸಾದ್‌ರನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಒಂದು ವೇಳೆ ಸರಕಾರ ಇವರಿಗೆ ಭದ್ರತೆ ನೀಡದಿದ್ದರೆ ನಮಗೆ ಉಪ್ಪಿನ ಸತ್ಯಾಗ್ರಹವು ಗೊತ್ತಿದೆ. ಕೋರೆಗಾಂವ್ ಇತಿಹಾಸವು ಗೊತ್ತಿದೆ ಎಂದು ಆಝಾದ್ ಎಚ್ಚರಿಕೆ ನೀಡಿದರು.

ಭಾಸ್ಕರ್ ಪ್ರಸಾದ್ ಅವರಿಗೆ ನ್ಯಾಯ ಕೊಡಿಸುವುದು ಸರಕಾರದ ಜವಾಬ್ದಾರಿ. ಯಾವ ಸರಕಾರ ನಮ್ಮ ಜನರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲವೋ, ಅವರು ಆಡಳಿತದಲ್ಲಿ ಮುಂದುವರಿಯಲು ಅರ್ಹರಲ್ಲ. ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲಾ ಒಂದಾಗಿ, ಈ ದುಷ್ಟ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಅವರು ಕರೆ ನೀಡಿದರು.

ಭಾಸ್ಕರ್ ಪ್ರಸಾದ್ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ನಾವು ದೇಶದ ಯಾವುದೇ ಮೂಲೆಯಲ್ಲಿ ಹೋರಾಟ ಮಾಡಿದರೂ ಈ ವಿಚಾರದ ಬಗ್ಗೆ ಧ್ವನಿ ಎತ್ತಲಿದ್ದೇವೆ. ನಾವೆಲ್ಲ ಅವರೊಂದಿಗಿದ್ದೇವೆ ಎಂದು ಚಂದ್ರಶೇಖರ್ ಆಝಾದ್ ಹೇಳಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಯೋಗೇಶ್ ಮಾಸ್ಟರ್, ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಯಶ್‌ಪಾಲ್ ಭೋರೆ, ಆರೆಸ್ಸೆಸ್ ಮುಖಂಡ ಹನುಮೇಗೌಡ, ದಲಿತ ಮುಖಂಡ ಹೆಬ್ಬಾಳ ವೆಂಕಟೇಶ್, ದಲಿತ ಮತ್ತು ಮೈನಾರಿಟೀಸ್ ಸೇನೆ ರಾಜ್ಯಾಧ್ಯಕ್ಷ ಎ.ಜೆ.ಖಾನ್, ನ್ಯಾಯವಾದಿಗಳಾದ ಪ್ರೊ.ಹರಿರಾಮ್, ಜಗದೀಶ್, ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಶ್ರಫ್, ಜೆಡಿಎಸ್ ಪಕ್ಷದ ನಜ್ಮಾ ನಝೀರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News