ಫೆ.10ರಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Update: 2021-02-09 16:32 GMT

ಬೆಂಗಳೂರು, ಫೆ.9: ಕೆಎಸ್‌ಆರ್‌ಟಿಸಿ ನೌಕರರ ಮೇಲಾಗುತ್ತಿರುವ ನಿರಂತರ ಕಿರುಕುಳ, ಅರ್ಧ ಸಂಬಳ ಹಾಗೂ ರಜೆ ಕಡಿತವನ್ನು ಖಂಡಿಸಿ ಫೆ.10ರಂದು ನಗರದ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿದೆ.

ಸಾರಿಗೆ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇತ್ತೀಚೆಗೆ ನಡೆಸಿದ ಮುಷ್ಕರದ ನಂತರದಲ್ಲಿ ಸಾರಿಗೆ ನೌಕರರ ಮೇಲಿನ ಕಿರುಕುಳ ಹೆಚ್ಚಾಗಿದೆ. ನಿಗದಿತ ಸಮಯಕ್ಕೆ ವೇತನಗಳು ಸಿಗುತ್ತಿಲ್ಲ. ಅರ್ಧ ಸಂಬಳ ನೀಡಲಾಗುತ್ತಿದೆ ಎಂದು ಸಿಐಟಿಯುನ ಎಚ್.ಡಿ.ರೇವಪ್ಪ ಆರೋಪಿಸಿದ್ದಾರೆ.

ಕಾರ್ಮಿಕರ ಗಳಿಕೆ ರಜೆಗಳನ್ನು ಕಡಿತ ಮಾಡಲಾಗುತ್ತಿದೆ. ರಜೆಗಳನ್ನು ವಜಾ ಮಾಡಿಕೊಂಡು ಸಂಬಳವನ್ನು ನೀಡಲಾಗುತ್ತಿದೆ. ಬಲವಂತವಾಗಿ ರಜೆಗಳನ್ನು ಹಾಕುವಂತೆ ಮಾಡಲಾಗುತ್ತಿದೆ. ಕಾರ್ಮಿಕರ ಹಕ್ಕಿನ ವಾರದ ರಜೆಯನ್ನು ನೀಡದೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಮೇಲೆ ಶಿಸ್ತಿನ ಕ್ರಮಗಳ ಹೆಸರಿನಲ್ಲಿ ಸೇಡನ್ನು ತೀರಿಸಿಕೊಳ್ಳಲಾಗುತ್ತಿದೆ. ಡಿಪೋ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಕಾರ್ಮಿಕರ ಮೇಲಿನ ಕಿರುಕುಳಗಳಿಗೆ ಪರಿಹಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಮತ್ತು ಸರಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಕೆಬಿಎನ್‍ಎನ್, ಸಿಐಟಿಯು, ಐಎನ್‍ಟಿಯುಸಿ, ಮುಸ್ಲಿಮ್ ಆಸೋಸಿಯೇಷನ್, ಅಂಬೇಡ್ಕರ್, ಕೆಂಪೇಗೌಡ ಅಭಿಮಾನಿಗಳ ಸಂಘ, ಮಹಿಳಾ ಸಮಿತಿಯ ನೌಕರರು ಭಾಗವಹಿಸಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಗೈರು ಹಾಜರಾದರೆ ಕಠಿಣ ಕ್ರಮ

ಕೆಎಸ್‌ಆರ್‌ಟಿಸಿ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ನೌಕರರ ಸಂಘಟನೆಗಳು ನಾಳೆ(ಫೆ.10) ಪ್ರತಿಭಟನೆ ಮಾಡಲಾಗುವುದೆಂದು ಹೇಳಿಕೆ ನೀಡಿವೆ. ಸರಕಾರದ ವತಿಯಿಂದ ಹೀಗಾಗಲೇ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಹಂತ, ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ನೌಕರರು ಪುನಃ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರತಿಭಟನೆಯ ನೆಪದಲ್ಲಿ ಕೆಲಸಕ್ಕೆ ಗೈರು ಹಾಜರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

-ಲಕ್ಷ್ಮಣ್ ಸವದಿ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News